ಮೈತೇಯಿ ಸಮುದಾಯದ ನಾಯಕ ಕಣನ್‌ ಸಿಂಗ್‌ ಬಂಧನದ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನಾಕಾರರು ಬೀದಿಗಿಳಿದು ಆತಂಕ ಸೃಷ್ಟಿಸಿದ್ದು, ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ.

ಇಂಫಾಲ್‌ (ಜೂ.9): ಮೈತೇಯಿ ಸಮುದಾಯದ ಆರಂಬಾಯ್‌ ಟೆಂಗೋಲ್‌ ಗುಂಪಿನ ನಾಯಕನನ್ನು ಬಂಧನ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಸಮುದಾಯದ ಪ್ರಮುಖ ನಾಯಕ ಕಣನ್‌ ಸಿಂಗ್‌ ಬಂಧನ ವಿರೋಧಿಸಿ ಮೈತೀಯ ಸಮುದಾಯದವರು ಹಿಂಸಾಚಾರಕ್ಕಿಳಿದಿದ್ದಾರೆ.

ಈ ನಡುವೆ, ತಮ್ಮ ನಾಯಕನ ಬಂಧನ ವಿರೋಧಿಸಿ ಕೆಲವರು ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದು, ತೀವ್ರ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂಫಾಲ್‌ ಕಣಿವೆಯ ಐದು ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸೇವೆಯನ್ನು ಐದು ದಿನಗಳ ಕಾಲ ಸ್ಥಗಿತಗೊಳಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ತೀವ್ರಗೊಂಡ ಹಿಂಸಾಚಾರ:

ಫೆಬ್ರವರಿ 2024ರಲ್ಲಿ ಮೊಯಿರಂಗ್‌ಥೆನ್‌ನ ಹೆಚ್ಚುವರಿ ಎಸ್ಪಿ ಅಮಿತ್‌ ಮನೆ ಮೇಲೆ ದಾಳಿ ನಡೆಸಿ ಅಪಹರಣ ನಡೆಸಿದ ಪ್ರಕರಣದಲ್ಲಿ ಮೈತೇಯಿ ಸಮುದಾಯದ ನಾಯಕ ಕಣನ್‌ ಸಿಂಗ್‌ ಮೇಲಿದೆ. ಆ ಸಮಯದಲ್ಲಿ ಕಣನ್‌ ಸಿಂಗ್‌ ಪೊಲೀಸ್‌ ಕಮಾಂಡೋ ವಿಭಾಗದ ಹೆಡ್‌ಕಾನ್ಸ್‌ಟೆಬಲ್‌ ಆಗಿದ್ದರು. ಆ ಬಳಿಕ ಅವರನ್ನು ಕರ್ತವ್ಯ ಲೋಪದ ಆರೋಪದ ಮೇರೆಗೆ ಅಮಾನತು ಮಾಡಲಾಗಿತ್ತು.

ಇದೀಗ ಪ್ರಕರಣದಲ್ಲಿ ಕಣನ್‌ ಸಿಂಗ್ ಬಂಧಿಸುತ್ತಿದ್ದಂತೆ ಪ್ರತಿಭಟನಾಕಾರರು ಮೈತೇಯಿ ನಾಯಕನ ಬಿಡುಗಡೆಗೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಅಲ್ಲಲ್ಲಿ ಟೈರ್‌ಗಳು, ಹಳೆಯ ಟೈರ್‌ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಬೆಂಕಿ ಹಚ್ಚಿದ್ದಲ್ಲದೆ, ಹಲವೆಡೆ ಭದ್ರತಾಪಡೆಗಳ ಜತೆಗೆ ಸಂಘರ್ಷಕ್ಕೂ ಇಳಿದರು. ಪೂರ್ವ ಇಂಪಾಲ್‌ ಜಿಲ್ಲೆಯ ಖುರೈ ಲ್ಯಾಮ್‌ಲಾಂಗ್‌ ಎಂಬಲ್ಲಿ ಗುಂಪೊಂದು ಬಸ್‌ಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ರಾಜಭವನಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಟಿಯರ್‌ ಗ್ಯಾಸ್‌, ಶೆಲ್‌ ಸಿಡಿಸಿ ಚದುರಿಸುವ ಪ್ರಯತ್ನ ನಡೆಸಿದ್ದಾರೆ.