ಮೈನಿಂಗ್‌ಸಿನ್ಲಿಯು ಪಮೇಯ್ ಭೇಟಿ ಮಾಡಿದ ಸಚಿವ ಮಣಿಪುರದ ಸಚಿವ ಥೋಂಗಮ್ ಬಿಶ್ವಜಿತ್ ಸಿಂಗ್‌ರಿಂದ ಭೇಟಿ ಬಾಲಕಿ ಹಾಗೂ ಪೋಷಕರನ್ನು ಮನೆಗೆ ಕರೆಸಿದ ಸಚಿವ
10 ವರ್ಷದ ಪುಟ್ಟ ಹುಡುಗಿಯೊಬ್ಬಳು ತನ್ನ ಪುಟ್ಟ ಸಹೋದರನನ್ನು ಮಡಿಲಲ್ಲಿ ಕೂರಿಸಿಕೊಂಡು ತರಗತಿಯಲ್ಲಿ ಪಾಠ ಕೇಳುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಫೋಟೋ ವೈರಲ್ ಆಗುತ್ತಿದ್ದಂತೆ ಮಣಿಪುರದ ಸಚಿವ ಥೋಂಗಮ್ ಬಿಶ್ವಜಿತ್ ಸಿಂಗ್ (Thongam Biswajit Singh) ಶಿಕ್ಷಣದ ಬಗ್ಗೆಗಿನ ಈ ಪುಟ್ಟ ಬಾಲೆಯ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದ್ದರು. ಅಲ್ಲದೇ ಆಕೆಯನ್ನು ರಾಜಧಾನಿ ಇಂಪಾಲ್‌ಗೆ ಕರೆಸಿಕೊಳ್ಳುವುದಾಗಿ ಹೇಳಿದ್ದರು. ಹೇಳಿದ ಮಾತಿನಂತೆ ಬಾಲಕಿ ಮೈನಿಂಗ್‌ಸಿನ್ಲಿಯು ಪಮೇಯ್‌ನನ್ನು ಇಂಪಾಲ್‌ಗೆ ಸಚಿವರು ಬುಧವಾರ ಕರೆಸಿಕೊಂಡಿದ್ದಾರೆ. ಜೊತೆಗೆ ಆಕೆಯ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಬರಿಸುವ ಭರವಸೆ ನೀಡಿದ್ದಾರೆ.
ಇಂಪಾಲದ ಸಚಿವರ ಮನೆಗೆ ಇಂದು ಬಾಲಕಿ ಮೈನಿಂಗ್‌ಸಿನ್ಲಿಯು ಪಮೇಯ್ ತನ್ನ ತಂದೆ ತಾಯಿ ಹಾಗೂ ತಮ್ಮನೊಂದಿಗೆ ಬಂದಿದ್ದಳು. ಬಾಲಕಿ ಪಮೇಯ್ ಹಾಗೂ ಕುಟುಂಬವನ್ನು ಭೇಟಿ ಮಾಡಿದ ಫೋಟೋವನ್ನು ಸಚಿವ ಬಿಸ್ವಜಿತ್ ಸಿಂಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಧೈರ್ಯವಂತ ಹುಡುಗಿ ಮೈನಿಂಗ್ ಸಿನ್ಲಿಯು ಪಮೇಯ್ , ಇಂದು ನನ್ನ ಮನೆಗೆ ತನ್ನ ಪೋಷಕರೊಂದಿಗೆ ಬಂದಿದ್ದಳು. ನಾವು ಆಕೆಗೆ ವಸತಿ ಶಾಲೆಯಲ್ಲಿ ಓದಿಸುವುದಾಗಿ ಹೇಳಿದೆವು ಹಾಗೂ ಆಕೆಯ ಎಲ್ಲಾ ಶಿಕ್ಷಣದ (Education) ಖರ್ಚು ವೆಚ್ಚವನ್ನು ಪೂರೈಸಲು ನಿರ್ಧರಿಸಿರುವುದಾಗಿ ಆಕೆಯ ಪೋಷಕರಿಗೆ ಭರವಸೆ ನೀಡಿದೆವು ಎಂದು ಸಚಿವರು ಬರೆದಿದ್ದಾರೆ.
ಸಚಿವರೊಂದಿಗೆ ಬಾಲಕಿ ಪಮೇಯ್ ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಸ್ವಜಿತ್ ಸಿಂಗ್ ಅವರು ಇಂಧನ, ಅರಣ್ಯ, ಪರಿಸರ, ಹವಾಮಾನ ಬದಲಾವಣೆ, ಕೃಷಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾಗಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಸಚಿವರು ಬಾಲಕಿಯೊಂದಿಗೆ ನಿನ್ನೆ ಹೆಸರೇನು ಎಂದು ಕೇಳುತ್ತಿದ್ದಾರೆ ಅಲ್ಲದೇ ತಮ್ಮ ಜೊತೆಯಲ್ಲೇ ಆಕೆಯನ್ನು ಕೂರಿಸಿಕೊಳ್ಳುತ್ತಾರೆ.
Manipuri School Girl: 10 ವರ್ಷದ ವಿದ್ಯಾರ್ಥಿನಿ ಕಂಕುಳಲ್ಲಿ 2 ವರ್ಷದ ತಂಗಿ!
ಸಚಿವರ ಈ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಸಹಾಯಕ ಜನರಿಗೆ ನೀವು ಮಾಡಿದ ಈ ಒಳ್ಳೆಯ ಕಾರ್ಯವನ್ನು ಶ್ಲಾಘಿಸುತ್ತೇವೆ. ನಿಮಗ ಇನ್ನಷ್ಟು ಶಕ್ತಿ ಸಿಗಲಿ ದೇವರು ಒಳ್ಳೆಯದು ಮಾಡಲಿ ಎಂದು ವಿಡಿಯೋ (video) ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಕ್ಕಿರುವ (Social Media) ಶಕ್ತಿ. ನಾನು ಆಕೆಯ ಫೋಟೋವನ್ನು ಕೆಲ ದಿನಗಳ ಹಿಂದೆ ನೋಡಿದ್ದೆ. ಹಾಗೂ ಆಕೆಗೆ ಉದಾರಿಗಳು ಸಹಾಯ ಮಾಡಿದ್ದರೆ ಎಂದು ನೆನೆದಿದ್ದೆ. ಆಕೆಗೆ ಉತ್ತಮವಾದ ಭವಿಷ್ಯವಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಪುಟ್ಟ ತಂಗಿಯನ್ನು ಮಡಿಲಲ್ಲಿ ಕೂರಿಸಿಕೊಂಡು ಪಾಠ ಕೇಳುವ 10 ವರ್ಷದ ಬಾಲಕಿ