ಈ ಗ್ರಾಮ ನೆನೆದರೆ ಸಾಕು ಮಕ್ಕಳು ಹುಟ್ಟಾತ್ತಾರೆ, 1500 ಜನಸಂಖ್ಯೆಯ ಇಲ್ಲಿ 3 ತಿಂಗಳ ಜನನ 27,000, ಇದೊಂದು ರೀತಿ ಮ್ಯಾಜಿಕ್ ಗ್ರಾಮವಾಗಿದೆ. ಅಧಿಕಾರಿಗಳು, ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಗ್ರಾಮದ ಅಚ್ಚರಿ ಏನು? 

ಮಹಾರಾಷ್ಟ್ರ (ಡಿ.18) ಭಾರತದಲ್ಲಿ ಹಲವು ಗ್ರಾಮಗಳು ವಿಶೇಷತೆಗಳ ಆಗರವಾಗಿದೆ. ಒಂದಲ್ಲ ಒಂದು ಕಾರಣದಿಂದ ಗ್ರಾಮ ದೇಶಾದ್ಯಂತ ಸದ್ದು ಮಾಡಿದ ಉದಾಹರಣೆಗಳೂ ಇವೆ. ಕೆಲ ಗ್ರಾಮದಲ್ಲಿ ಅವಳಿ ಜವಳಿ ಮಕ್ಕಳೇ ಹೆಚ್ಚಾಗಿ ಹುಟ್ಟುತ್ತಾರೆ, ಹೀಗೆ ಹಲವು ಅಚ್ಚರಿಗಳು ಭಾರತದ ಗ್ರಾಮದಲ್ಲಿದೆ. ಇದರಲ್ಲಿ ಮಹಾರಾಷ್ಟ್ರದ ಶೆಂದುರುಸಾನಿ ಗ್ರಾಮ ಇದೀಗ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಾರಣ ಈ ಗ್ರಾಮ ಮಕ್ಕಳ ಫ್ಯಾಕ್ಟರಿಯಾಗಿ ಮಾರ್ಪಟ್ಟಿದೆ. ಇಲ್ಲಿರುವ ಜನಸಂಖ್ಯೆ ಕೇವಲ 1,500 ಮಾತ್ರ. ಆದರೆ ಕಳೆದ ಮೂರು ತಿಂಗಳಲ್ಲಿ ಈ ಗ್ರಾಮದಲ್ಲಿ ಹುಟ್ಟಿರುವ ಮಕ್ಕಳ ಸಂಖ್ಯೆ ಬರೋಬ್ಬರಿ 27,397. ಅಂದರೆ ಈ ಗ್ರಾಮದ ಒಬ್ಬೊಬ್ಬರಿಗೆ 18 ರಿಂದ 19 ಮಕ್ಕಳು.

ಮನಸ್ಸಲ್ಲಿ ನೆನೆದರೆ ಸಾಕು ಮಕ್ಕಳು ಹುಟ್ಟುತ್ತಾರೆ

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಶೆಂದುರುಸಾನಿ ಗ್ರಾಮ ಪಂಚಾಯಿತಿ ಇದೀಗ ದೇಶದ ಗಮನಸೆಳೆದಿದೆ. ಕಾರಣ ಮಕ್ಕಳ ಜನನ ಸಂಖ್ಯೆ. ಮೂರು ತಿಂಗಳಿಗೆ 27,000 ಮಕ್ಕಳು ಇಲ್ಲಿ ಹುಟ್ಟಿದ್ದಾರೆ. ಈ ಮಾಹಿತಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರು, ಹತ್ತಿರದ ಗ್ರಾಮಸ್ಥರು ಶೆಂದುರುಸಾನಿ ಗ್ರಾಮ ನೆನೆದರೆ ಸಾಕು ಮಕ್ಕಳು ಹುಟ್ಟುತ್ತಾರೆ ಎಂದು ತಮಾಷೆ ಮಾಡಿದ್ದಾರೆ. ಅಷ್ಟಕ್ಕೂ ಈ ಮ್ಯಾಜಿಕ್ ಗ್ರಾಮದ ಅಸಲಿ ಕತೆ ಏನು? ನಿಜಕ್ಕೂ ಈ ಗ್ರಾಮ ಮಕ್ಕಳ ಫ್ಯಾಕ್ಟರಿಯಾಗಿದೆಯಾ?

ಶೆಂದುರುಸಾನಿ ಗ್ರಾಮ ಪಂಚಾಯಿತಿಯಲ್ಲಿ 2025ರ ಸೆಪ್ಟೆಂಬರ್ ಹಾಗೂ ನವೆಂಬರ್ ತಿಂಗಳಲ್ಲಿ ಜನನ ಹಾಗೂ ಮರಣ ದಾಖಲಾತಿ ವೆರಿಫಿಕೇಶನ್ ವಿಳಂಬವಾಗಿರುವುದು ಅರಿತ ಅಧಿಕಾರಿಗಳು ಕಾರಣವೇನು ಅನ್ನೋದು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈ ಗ್ರಾಮದಿಂದ ಗುಳೇ ಹೊರಟಿದ್ದಾರಾ, ಅಥವಾ ಜನರು ಗ್ರಾಮ ತೊರೆಯುತ್ತಿದ್ದಾರಾ? ಪಂಚಾಯಿತಿ ಸದಸ್ಯರು ವೆರಿಫಿಕೇಶನ್ ಯಾಕೆ ಮಾಡಿಲ್ಲ ಅನ್ನೋ ಕಾರಣ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಇದಕ್ಕಾಗಿ ಹಿಂದಿನ ತಿಂಗಳ ಜನನ, ಸರಾಸರಿ ಜನನ ಲೆಕ್ಕಹಾಕಲು ಅಧಿಕಾರಿಗಳು ಅಂಕಿ ಅಂಶಗಳನ್ನು ತರಿಸಿಕೊಂಡಿದ್ದಾರೆ. ಈ ವೇಳೆ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಸೆಪ್ಟೆಂಬರ್ ಹಾಗೂ ನವೆಂಬರ್ ತಿಂಗಳ ಒಳಗಿನ ಅಂದರೆ ಒಟ್ಟು ಮೂರು ತಿಂಗಳಲ್ಲಿ 27,397 ಮಕ್ಕಳು ಈ ಗ್ರಾಮದಲ್ಲಿ ಜನನವಾಗಿದೆ. ಆದರೆ ಗ್ರಾಮದ ಒಟ್ಟು ಜನಸಂಖ್ಯೆ 1,500 ಮಾತ್ರ.

ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಜನನ ಸಂಖ್ಯೆಗೂ ಗ್ರಾಮಸ್ಥರ ಸಂಖ್ಯೆಗೂ ಇರುವ ವ್ಯತ್ಯಾಸ ಅಜಗಜಾಂತರ. ಹೀಗಾಗಿ ಜಿಲ್ಲಾ ಪರಿಷದ್ ಕಾರ್ಯಕಾರಿ ಅಧಿಕಾರಿ ಮಂದರ್ ಪಾಟ್ಕಿ ತನಿಖಾ ಸಮಿತಿ ರಚಿಸಿದ್ದಾರೆ. ಅಸಲಿ ಕಾರಣ ಪತ್ತೆ ಹಚ್ಚಲು ಸೂಚಿಸಿದ್ದಾರೆ. ತನಿಖೆ ವೇಳೆ ಒಂದೊಂದೆ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಜನನ ಹಾಗೂ ಮರಣ ನೋಂದಣಿ, ದಾಖಲೆಗಳನ್ನು ಮಾಡುವ ಸಿವಿಲಿ ರಿಜಿಸ್ಟ್ರೇಶನ್ ಸಿಸ್ಟಮ್ (CRS) ಪೋರ್ಟಲ್ ಶೆಂದುರುಸಾನಿ ಗ್ರಾಮ ಪಂಚಾಯಿತಿಯಿಂದ ಕಾರ್ಯನಿರ್ವಹಣೆಯಾಗುತ್ತಿಲ್ಲ. ಇದರ ಲಾಗಿನ್ ಐಡಿ, ಪಾಸ್‌ವರ್ಡ್, ಕಾರ್ಯನಿರ್ವಹಣ ಐಪಿ ಅಡ್ರೆಸ್ ಮುಂಬೈ ಎಂದು ತೋರಿಸುತ್ತಿದೆ. ಈ ಪಂಚಾಯಿತಿಯ ಮಹತ್ವದ ಐಡಿ ಹಾಗೂ ಪಾಸ್‌ವರ್ಡ್ ಸೋರಿಕೆ ಮಾಡಲಾಗಿದೆ. ಈ ಪೋರ್ಟಲ್ ಮೂಲಕ ಸಿಕ್ಕ ಸಿಕ್ಕವರಿಗೆ ಜನನ ಪ್ರಮಾಣ ಪತ್ರ ನೀಡಲಾಗುತ್ತಿದೆ ಅನ್ನೋದು ಬಯಲಾಗಿದೆ.

ರೋಹಿಂಗ್ಯ, ಅಕ್ರಮವಾಗಿ ಭಾರತ ಪ್ರವೇಶ ಮಾಡಿದವರು ಎಲ್ಲರೂ ಇದೆ ಶೆಂದುರುಸಾನಿ ಗ್ರಾಮ ಪಂಚಾಯಿತಿಯಿಂದ ಸುಲಭವಾಗಿ ಜನನ ಪ್ರಮಾಣಪತ್ರ ಮಾಡಿಕೊಂಡಿದ್ದಾರೆ.ಸೆಪ್ಬೆಂಬರ್‌ನಿಂದ ನವೆಂಬರ್ ವರೆಗಿನ ಮೂರು ತಿಂಗಳಲ್ಲಿ ಶೆಂದುರುಸಾನಿ ಗ್ರಾಮ ಪಂಚಾಯಿತಿಯಲ್ಲಿ 27,397 ಮಕ್ಕಳ ಜನನ ಹಾಗೂ 6 ಮರಣ ದಾಖಲಾಗಿದೆ. ನಕಲಿ ದಾಖಲೆ ಸಲ್ಲಿಸಿ ಈ ರೀತಿ ಜನನ ಪ್ರಮಾಣಪತ್ರ ವಿತರಣೆ ಮಾಡಲಾಗಿದೆ. ಅಕ್ರಮ ಚಟುವಟಿಕೆಗಳಿಗೆ, ಸರ್ಕಾರದ ಯೋಜನೆಗಳ ಲಾಭ ಪಡೆಯಲು, ಭಾರತೀಯರೆಂದು ದಾಖಲೆ ತೋರಿಸಲು ಈ ರೀತಿ ನಕಲಿ ದಾಖಲೆ ಸೃಷ್ಟಿಮಾಡಿರುವುದು ಬೆಳಕಿಗೆ ಬಂದಿದೆ. ಇದೀಗ ಇದರ ಹಿಂದೆ ಯಾರಿದ್ದಾರೆ, ಐಡಿ ಪಾಸ್‌ವರ್ಡ್ ಸೋರಿಕೆಯಾಗಿದ್ದು ಹೇಗೆ, ಮುಂಬೈನಲ್ಲಿ ನಕಲಿ ಜನನ ಪ್ರಮಾಣಪತ್ರ ನೀಡುತ್ತಿದ್ದ ಎಜೆನ್ಸಿ ಯಾವುದು ಅನ್ನೋ ಕುರಿತು ತನಿಖೆ ತೀವ್ರಗೊಂಡಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಬಿಜೆಪಿ ನಾಯಕ ಕೀರಿತ್ ಸೋಮಯ್ಯ ಈ ಗ್ರಾಮಕ್ಕ ಬೇಟಿ ನೀಡಿ ದಾಖಲೆ ಪರಿಶೀಲಿಸಿದ್ದಾರೆ. ಈ ವೇಳೆ ನಕಲಿ ಜನನ ಪ್ರಮಾಣಪತ್ರ ಪಡೆದ ಶೇಕಡಾ 99 ರಷ್ಟು ಮಂದಿ ಪಶ್ಟಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ಜನ ಎಂದು ದಾಖಲೆಗಳಲ್ಲಿ ವ್ಯಕ್ತವಾಗುತ್ತಿದೆ ಎಂದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.