Asianet Suvarna News Asianet Suvarna News

ಎಷ್ಟು ಕೊಟ್ಟರೂ ಮತ್ತೆ ಮತ್ತೆ ಬೇಕು ಎಂದ: ಬರ್ತ್‌ಡೇ ಪಾರ್ಟಿಗೆ ಕರೆಸಿ 4ನೇ ಪ್ಲೋರ್‌ನಿಂದ ನೂಕಿದ ಸ್ನೇಹಿತರು

 ಇಲ್ಲೊಂದು ಕಡೆ ಕುಡಿತದ ಮತ್ತಲ್ಲಿ ಸ್ನೇಹಿತರು ಮತ್ತೊಬ್ಬ ಸ್ನೇಹಿತನನ್ನು ನಾಲ್ಕನೇ ಪ್ಲೋರ್‌ನಿಂದ ಎತ್ತಿ ಕೆಳಕ್ಕೆಸೆದಿದ್ದು, ಆತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಮಹಾರಾಷ್ಟ್ರದ ಉಲ್ಲಾಸ್‌ನಗರದಲ್ಲಿ ಈ ಘಟನೆ ನಡೆದಿದೆ. 

Maharashtra Friends threw a friend from the 4th floor balcony after he asked more alcohol in birthday party akb
Author
First Published Jul 4, 2024, 1:43 PM IST

ಮುಂಬೈ: ಮದ್ಯಪಾನ ಬಹಳ ಹಾನಿಕಾರಕ, ಒಳಗೆ ಹೋದ ಮೇಲೆ ಮನುಷ್ಯನಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವು ಕೂಡ ಇರುವುದಿಲ್ಲ, ಒಳಗಿರುವ ಎಣ್ಣೆ ಆಡಿಸಿದಂತೆ ಕುಡುಕರು ಆಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಕುಡಿತದ ಮತ್ತಲ್ಲಿ ಸ್ನೇಹಿತರು ಮತ್ತೊಬ್ಬ ಸ್ನೇಹಿತನನ್ನು ನಾಲ್ಕನೇ ಪ್ಲೋರ್‌ನಿಂದ ಎತ್ತಿ ಕೆಳಕ್ಕೆಸೆದಿದ್ದು, ಆತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಮಹಾರಾಷ್ಟ್ರದ ಉಲ್ಲಾಸ್‌ನಗರದಲ್ಲಿ ಈ ಘಟನೆ ನಡೆದಿದೆ. 

ಘಟನೆ ಹಿನ್ನೆಲೆ:

ಜೂನ್ 26 ರಂದು ಸ್ನೇಹಿತರೆಲ್ಲರೂ ಸೇರಿ ತಮ್ಮ ಸ್ನೇಹಿತರಲೊಬ್ಬನ ಬರ್ತ್‌ಡೇ ಪಾರ್ಟಿ ಆಯೋಜಿಸಿದ್ದಾರೆ. ಹುಡುಗರ ಬರ್ತ್‌ಡೇ ಪಾರ್ಟಿ ಎಂದರೆ ಗುಂಡು ತುಂಡು ಸಾಮಾನ್ಯ. ಅದರಂತೆ ಎಲ್ಲರೂ ಸೇರಿ ಸಂಭ್ರಮಿಸುತ್ತಾ ಬರ್ತ್‌ಡೇ ಪಾರ್ಟಿ ಮಾಡಿದ್ದು, ಎಲ್ಲರೂ ಸರಿಯಾಗಿ ಎಣ್ಣೆ ಏರಿಸಿಕೊಂಡಿದ್ದಾರೆ. ಆದರೆ ಇವರಲ್ಲೊಬ್ಬನಿಗೆ ಎಷ್ಟು ಕುಡಿದರು ಇನ್ನು ಬೇಕು ಬೇಕು ಎನ್ನುವ ದಾಹ, ಆತ ಬರೀ ಬೇಕು ಎಂದಷ್ಟೇ ಕೇಳಿದರೆ ಸ್ನೇಹಿತರು ಸುಮ್ಮನಿರುತ್ತಿದ್ದರೋ ಏನು? ಆದರೆ ಈಗಾಗಲೇ ಕಂಠಪೂರ್ತಿ ಕುಡಿದಿದ್ದ ಆತನಿಗೆ ಸ್ನೇಹಿತರು ಎಕ್ಸ್ಟ್ರಾ ಕೊಡಲ್ಲ ಎಂದಾಗ ಪಿತ್ತ ನೆತ್ತಿಗೇರಿದೆ. ತನ್ನ ಕೈಗೆ ಸಿಕ್ಕಿದ ಬೀರ್ ಬಾಟಲ್‌ನಿಂದಲೇ ಆತ ಸ್ನೇಹಿತನೋರ್ವನ ತಲೆಗೆ ಹೊಡೆದಿದ್ದಾನೆ. ಇದರಿಂದ ಬರ್ತ್‌ಡೇ ಪಾರ್ಟಿಗೆ ಬಂದ ಸ್ನೇಹಿತನ ತಲೆಗೆ ಗಂಭೀರ ಗಾಯವಾಗಿದೆ. ಇದು ಇತರ ಸ್ನೇಹಿತರನ್ನು ಕುಪಿತಗೊಳಿಸಿದ್ದು, ಸಿಟ್ಟಿಗೆದ್ದ ಇತರ ನಾಲ್ವರು ಸ್ನೇಹಿತರು ಸೇರಿ ಆತನನ್ನು ಎತ್ತಿಕೊಂಡು ಬಂದು ನಾಲ್ಕನೇ ಮಹಡಿಯಿಂದ ಸೀದಾ ಕೆಳಗೆಸೆದಿದ್ದಾರೆ, ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

SSLC ಬಾಲಕನ ಕೊಡಲಿಯಿಂದ ಹೊಡೆದು ಕೊಂದರು: ಶವ ಹೂತಿಡುವಾಗ ಸಿಕ್ಕಿಬಿದ್ದ ಸ್ನೇಹಿತರು..!

ಜೂನ್‌ 26 ರಂದು ಈ ಘಟನೆ ನಡೆದಿದೆ. ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಪಡ್ವಾಲ್ ಅವರು ಹೇಳುವ ಪ್ರಕಾರ ನಾಲ್ವರು ಸ್ನೇಹಿತರಾದ ಕಾರ್ತಿಕ್ ವಯಾಲ್, ನಿಲೇಶ್ ಕ್ಷೀರಸಾಗರ್‌, ಸಾಗರ್ ಕಾಳೆ ಹಾಗೂ ಧೀರಜ್ ಯಾದಬ್ ಅವರು ಬರ್ತ್‌ಡೇ ಪಾರ್ಟಿಗಾಗಿ ಓರ್ವ ಸ್ನೇಹಿತನ ಮನೆಯಲ್ಲಿ ಸೇರಿದ್ದಾರೆ. ಇವರಲ್ಲಿ ಕಾರ್ತಿಕ್ ವಯಲ್‌ ಪಾರ್ಟಿಯಲ್ಲಿ ಆಗಲೇ ಕಂಠಪೂರ್ತಿ ಕುಡಿದಿದ್ದು, ಇನ್ನೂ ಬೇಕು ಮತ್ತೂ ಬೇಕು ಎಂದು ಮತ್ತೆ ಮದ್ಯಕ್ಕಾಗಿ ಸ್ನೇಹಿತರನ್ನು ಪೀಡಿಸಿದ್ದಾನೆ. ಆದರೆ ಈತನ ಸ್ಥಿತಿ ನೋಡಿ ಸ್ನೇಹಿತರು ಆತನಿಗೆ ಮದ್ಯ ನೀಡಲು ನಿರಾಕರಿಸಿದ್ದಾರೆ. ಆದರೆ ಸಿಟ್ಟಿಗೆದ್ದ ಕಾರ್ತಿಕ್, ಸ್ನೇಹಿತ ನಿಲೇಶ್ ತಲೆಗೆ ಬಾಟಲ್‌ನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. 

ಇದು ಕಾರ್ತಿಕ್‌ನ ಇತರ ಸ್ನೇಹಿತರನ್ನು ರೊಚ್ಚಿಗೆಬ್ಬಿಸಿದೆ. ಹೀಗಾಗಿ ಸಿಟ್ಟಿಗೆದ್ದ ಮೂವರು ಸ್ನೇಹಿತರು ಸ್ನೇಹಿತರು ಕಾರ್ತಿಕ್‌ನನ್ನು ಕೈ ಕಾಲು ಹಿಡಿದು ಎತ್ತಿಕೊಂಡು ಬಂದು ನಾಲ್ಕನೇ ಪ್ಲೋರ್‌ನ ಬಾಲ್ಕನಿಯಿಂದ ಸೀದಾ ಕೆಳಕ್ಕೆಸೆದಿದ್ದಾರೆ ಎಂದು ಎಸ್‌ಐ ಪಡ್ವಾಲ್ ಹೇಳಿದ್ದಾರೆ. ಆದರೆ ಆರೋಪಿಗಳು ಘಟನೆಯ ನಂತರ ಪೊಲೀಸರ ದಾರಿ ತಪ್ಪಿಸಲು ನೋಡಿದರು. ಆದರೆ ಪೊಲೀಸರು ಸರಿಯಾಗಿ ಬೆಂಡೆತ್ತಿದ್ದು, ಈ ಮೂವರು ಸ್ನೇಹಿತರು ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಕುಡಿತ ಹಾಗೂ ಕೋಪದ ಕೈಗೆ ಬುದ್ಧಿಕೊಟ್ಟ ಸ್ನೇಹಿತರಲ್ಲಿ ಒಬ್ಬನ ಪ್ರಾಣವೇ ಹೋಗಿದ್ದರೆ, ಇನ್ನೂ ಮೂವರು ಕಂಬಿ ಹಿಂದೆ ಕೂರುವಂತಾಗಿದೆ. 

ಚಕ್ರವರ್ತಿ ಸೂಲಿಬೆಲೆ ನೆಚ್ಚಿನ ಶಿಷ್ಯನ ಹತ್ಯೆ: ಸ್ನೇಹಿತರಿಂದಲೇ ಕೊಲೆಯಾದ್ನ ದಲಿತ ಯುವಕ ?

Latest Videos
Follow Us:
Download App:
  • android
  • ios