ಮಧುರೈನಲ್ಲಿ ನಡೆದ ಬೃಹತ್ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮೀನಾಕ್ಷಿ ಮತ್ತು ಆಕೆಯ ಗೆಳೆಯನ ತಂದೆಯನ್ನು ಬಂಧಿಸಲಾಗಿದೆ. ಬಂಧಿತರಿಂದ 5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಚೆನ್ನೈ (ನ.14): ತಮಿಳುನಾಡಿನ ಮಧುರೈನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬೃಹತ್ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಪ್ರಮುಖ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencer) ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ನಿಶಾಂತ್ನ ಗೆಳತಿ ಮೀನಾಕ್ಷಿ ಹಾಗೂ ನಿಶಾಂತ್ನ ತಂದೆ ಸುರೇಶ್ ಅವರನ್ನು ಮಧುರೈ ನಗರ ಪೊಲೀಸರು ಸೆರೆಹಿಡಿದಿದ್ದು, ಬಂಧಿತರಿಂದ ಸುಮಾರು 5 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿ, ಭಾರಿ ಜನಪ್ರಿಯತೆ ಹೊಂದಿದ್ದ ಮೀನಾಕ್ಷಿ ಅವರ ಬಂಧನ ಸದ್ಯ ಇಡೀ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಕದ್ದ ಚಿನ್ನಾಭರಣಗಳನ್ನು ಬಚ್ಚಿಡಲು ಸಹಾಯ ಮಾಡಿದ ಹಾಗೂ ದರೋಡೆ ವಿಷಯವನ್ನು ಮರೆಮಾಚಿದ ಆರೋಪದ ಮೇಲೆ ಮೀನಾಕ್ಷಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಿಸಿಟಿವಿ ದೃಶ್ಯ ಮತ್ತು ಪ್ರತ್ಯಕ್ಷದರ್ಶಿಯ ಸಾಕ್ಷ್ಯದಿಂದ ಬಯಲಾದ ಕಳ್ಳಾಟ
ಕಳ್ಳತನ ನಡೆದ ಸ್ಥಳದಲ್ಲಿ ಕಳ್ಳನು ಸಂಚರಿಸಿದ್ದ ಸ್ಕೂಟರ್ನ ಸಿಸಿಟಿವಿ ದೃಶ್ಯಾವಳಿಗಳು ತನಿಖೆಯಲ್ಲಿ ನಿರ್ಣಾಯಕವಾದವು. ಇದನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಸ್ಥಳೀಯ ನಿವಾಸಿ, 20 ವರ್ಷದ ಯುವಕ ನಿಶಾಂತ್ ಬಗ್ಗೆ ಮಾಹಿತಿ ಕಲೆಹಾಕಿದರು. ನಿನ್ನೆ ರಾತ್ರಿ ಪೊಲೀಸರು ನಿಶಾಂತ್ ಮನೆಯ ಮೇಲೆ ದಾಳಿ ನಡೆಸಿದರಾದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, "ನಿಶಾಂತ್ ಮತ್ತು ಆತನ ತಂದೆ ಸೇರಿ ಮಾಸ್ಕ್ ಹಾಗೂ Gloves ಸುಡುತ್ತಿದ್ದುದನ್ನು ತಾನು ನೋಡಿದ್ದೇನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ಹೇಳಿಕೆ ಇಡೀ ಪ್ರಕರಣಕ್ಕೆ ತಿರುವು ನೀಡಿತು.
ಪೊಲೀಸರು ತೋರಿಸಿದ ನಿಶಾಂತ್ ಫೋಟೋವನ್ನು ಆ ವ್ಯಕ್ತಿ ಗುರುತಿಸಿದ ತಕ್ಷಣ, ನಿಶಾಂತ್ ತಂದೆ ಸುರೇಶ್ ಅವರನ್ನು ವಶಕ್ಕೆ ಪಡೆಯಲಾಯಿತು. ಬಳಿಕ ತನಿಖೆಯನ್ನು ನಿಶಾಂತ್ ಗೆಳತಿ ಮೀನಾಕ್ಷಿಯತ್ತ ತಿರುಗಿಸಿದ ಪೊಲೀಸರು, ಇಬ್ಬರ ನಡುವಿನ ಸೋಶಿಯಲ್ ಮೀಡಿಯಾ ಚಾಟ್ಗಳು ಹಾಗೂ ಫೋನ್ ಕರೆಗಳ ವಿವರಗಳನ್ನು ಸಂಗ್ರಹಿಸಿದಾಗ ಕಳ್ಳತನದಲ್ಲಿ ಮೀನಾಕ್ಷಿಯ ಪಾತ್ರವಿರುವುದು ದೃಢಪಟ್ಟಿತು. ಸಂಜೆಯ ವೇಳೆಗೆ ಇಬ್ಬರ ಬಂಧನವನ್ನು ದಾಖಲಿಸಲಾಯಿತು. ನಿಶಾಂತ್ ಮತ್ತು ಆತನ ತಂದೆ ಸುರೇಶ್ ಸೇರಿ ಈ ಕಳ್ಳತನ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಲಿಫ್ಟ್ ಶಾಫ್ಟ್ ಮೂಲಕ ಒಳನುಗ್ಗಿ 11 ಕೆಜಿ ಚಿನ್ನ, 1 ಕೆಜಿ ವಜ್ರ ದೋಚಿದ್ದರು!
ಕಳೆದ ಬುಧವಾರ ರಾತ್ರಿ ಮಧುರೈ ಬೈಪಾಸ್ ರಸ್ತೆಯಲ್ಲಿ ನೂತನವಾಗಿ ಆರಂಭವಾಗಿದ್ದ ಜ್ಯುವೆಲ್ಲರಿ ಶೋರೂಮ್ನಲ್ಲಿ ಈ ಭಾರಿ ಕಳ್ಳತನ ನಡೆದಿತ್ತು. ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಲಿಫ್ಟ್ ಶಾಫ್ಟ್ (Lift Shaft) ಮೂಲಕ ಶೋರೂಮ್ ಒಳಗೆ ಪ್ರವೇಶಿಸಿದ್ದ ಕಳ್ಳನು, ಬರೋಬ್ಬರಿ 11 ಕಿಲೋಗ್ರಾಂಗಳಿಗೂ ಅಧಿಕ ಚಿನ್ನ ಮತ್ತು ಸುಮಾರು 1 ಕಿಲೋಗ್ರಾಂ ವಜ್ರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದ. ಶೋರೂಮ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳತನದ ಈ ವಿಶಿಷ್ಟ ರೀತಿ ಬೆಳಕಿಗೆ ಬಂದಿತ್ತು.
ಚೆನ್ನೈಗೆ ಪರಾರಿಯಾಗಿರುವ ಯೂಟ್ಯೂಬರ್ ನಿಶಾಂತ್ಗಾಗಿ ತೀವ್ರ ಶೋಧ
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಯೂಟ್ಯೂಬರ್ ನಿಶಾಂತ್ ಸದ್ಯ ತಲೆಮರೆಸಿಕೊಂಡಿದ್ದಾನೆ. ಕಳ್ಳತನದ ಬಳಿಕ ಆತ ಚೆನ್ನೈಗೆ ಪರಾರಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಬಂಧಿತರಿಂದ ಈಗಾಗಲೇ 5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲು ಹಾಗೂ ಪರಾರಿಯಾಗಿರುವ ನಿಶಾಂತ್ನನ್ನು ಸೆರೆಹಿಡಿಯಲು ವಿಶೇಷ ತನಿಖಾ ತಂಡಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿವೆ.














