ಕೌಟುಂಬಿಕ ದೌರ್ಜನ್ಯದಿಂದ ನೊಂದು ಸಾವಿನ ಅಂಚಿಗೆ ಹೋಗಿದ್ದ ಕೇರಳದ ನೌಜಿಶಾ ಎಂಬ ಮಹಿಳೆಯು ಛಲದಿಂದ ಬದುಕಿ ಸಾಧನೆ ಮಾಡಿದ್ದಾರೆ. ಪತಿಗೆ ವಿಚ್ಛೇದನ ನೀಡಿ, ಕಠಿಣ ಪರಿಶ್ರಮದಿಂದ ಕೇರಳ ಪೊಲೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಂದು ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೇರಳ ( ನವೆಂಬ್ 14 ) : ಬದುಕಿನ ಕನಸುಗಳಿಗೆ ಕಡಿವಾಣ ಹಾಕಿತ್ತು ಮದುವೆ. ಆದರೂ ಛಲ ಬಿಡದ ಕೇರಳದ ಗಟ್ಟಿಗಿತ್ತಿಯೊಬ್ಬರು ಇವತ್ತು ಲಕ್ಷಾಂತರ ಹೆಣ್ಮಕ್ಕಳಿಗೆ ಸ್ಫೂರ್ತಿಯ ಚಿಲುಮೆ ಆಗಿ ನಿಂತಿದ್ದಾರೆ.
ಹೌದು, ಬದುಕಿನಲ್ಲಿ ಕಷ್ಟಗಳು ಎಷ್ಟೇ ದೊಡ್ಡದಿದ್ದರೂ.. ಅವುಗಳನ್ನು ಎದುರಿಸಿ ನಿಲ್ಲುವ ಛಲ ಒಂದಿದ್ದರೆ ಜೀವನವನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಎಂಬುದಕ್ಕೆ ಕೇರಳದ ಕೋಝಿಕ್ಕೋಡ್ ಮೂಲದ ನೌಜಿಶಾ ಜೀವನವೇ ದೊಡ್ಡ ಸಾಕ್ಷಿ. ಒಂದು ಕಾಲದಲ್ಲಿ ಪ್ರತಿದಿನ ಪತಿಯಿಂದ ದೈಹಿಕ ಹಲ್ಲೆ ಮತ್ತು ಅವಮಾನ ಸಹಿಸಿಕೊಂಡು ಮಾನಸಿಕವಾಗಿ ಕುಗ್ಗಿಹೋಗಿದ್ದ ಅವರು.. ಇಂದು 32ನೇ ವಯಸ್ಸಿನಲ್ಲಿ ಖಾಕಿ ತೊಟ್ಟು ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ..
ಕನಸುಗಳಿಗೆ ಕೊಳ್ಳಿ ಇಟ್ಟ ಪತಿ
ಹೆಸರು ನೌಜಿಶಾ. ಅವರು ಕಂಪ್ಯೂಟರ್ ಅಪ್ಲಿಕೇಶನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮದುವೆಗೂ ಮುನ್ನ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. 2013ರಲ್ಲಿ ವಿವಾಹ ನಡೆಯಿತು. ಮದುವೆಯ ನಂತರವೂ ಕೆಲಸ ಮುಂದುವರಿಸುವ ಆಸೆ ಅವರಿಗಿತ್ತು. ಮದುವೆಗೂ ಮುನ್ನ ಒಪ್ಪಿಕೊಂಡಿದ್ದ ಪತಿ, ವಿವಾಹದ ಬಳಿಕ ಮನೆಯಲ್ಲೇ ಇರುವಂತೆ ತಾಕೀತು ಮಾಡಿದ. ಪತಿಯ ಮಾತಿಗೆ ಬೆಲೆ ಕೊಟ್ಟು ನೌಜಿಶಾ ಕೆಲಸ ಬಿಟ್ಟು ಮನೆಯಲ್ಲೇ ಉಳಿದರು.
ದಿನ ಕಳೆದಂತೆ ಆ ಮದುವೆ ಅವರಿಗೆ ಸಂಕೋಲೆಯಂತೆ ಭಾಸವಾಗತೊಡಗಿತು. ಪತಿ ಸಣ್ಣಪುಟ್ಟ ವಿಷಯಕ್ಕೂ ಹಲ್ಲೆ ನಡೆಸಿ, ಮಾನಸಿಕವಾಗಿ ಹಿಂಸಿಸಲು ಆರಂಭಿಸಿದ. ತವರು ಮನೆಯವರು ನೌಜಿಶಾ ಬೆನ್ನಿಗೆ ನಿಂತು ಮನೆಗೆ ವಾಪಸ್ ಬರುವಂತೆ ಹೇಳಿದರೂ, ‘ಸಮಾಜ ಏನೆಂದುಕೊಳ್ಳುತ್ತದೋ’ ಎಂಬ ಭಯದಿಂದ ಅವರು ಪತಿಯ ಮನೆಯಲ್ಲೇ ನೋವುಗಳನ್ನ ನುಂಗಿಕೊಂಡು ಇದ್ದರು.
ಮೂರು ವರ್ಷಗಳ ನಿರಂತರ ಕಿರುಕುಳದಿಂದ ನೌಜಿಶಾ ಸಂಪೂರ್ಣವಾಗಿ ಕುಗ್ಗಿಹೋಗಿದ್ದರು. ಒಂದು ಹಂತದಲ್ಲಿ ಬದುಕೇ ಸಾಕು ಎನಿಸಿ, ಮನೆಯ ಮುಂದಿದ್ದ ಬಾವಿಗೆ ಹಾರಿಲು ನಿರ್ಧರಿಸಿದ್ದರು. ಬಾವಿಯ ಅಂಚಿಗೆ ತಲುಪಿದಾಗ ಅವರ ಹೆಜ್ಜೆಗಳು ನಿಂತವು. ಸಾವಿನ ಬದಲು, ಈ ಕಷ್ಟದ ಪರಿಸ್ಥಿತಿಯ ವಿರುದ್ಧ ಹೋರಾಡಿ ಗೆಲ್ಲಬೇಕು ಎಂಬ ದೃಢ ನಿರ್ಧಾರ ತೆಗೆದುಕೊಂಡರು.
2016ರಲ್ಲಿ ತಮ್ಮ ಒಂದು ವರ್ಷದ ಪುಟ್ಟ ಮಗನನ್ನು ಕರೆದುಕೊಂಡು ಪತಿಯ ಮನೆ ತೊರೆದರು. ಈ ಕಠಿಣ ನಿರ್ಧಾರಕ್ಕೆ ಅವರ ತಂದೆ-ತಾಯಿ ಸಂಪೂರ್ಣ ಬೆಂಬಲ ನೀಡಿದರು. ಪತಿಗೆ ವಿಚ್ಛೇದನ ನೀಡಿದ ಬಳಿಕ ನೌಜಿಶಾ ತಮ್ಮ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಲು ಶುರು ಮಾಡಿದರು. ಮಗನ ಜವಾಬ್ದಾರಿಯ ಜೊತೆಗೆ ಮತ್ತೆ ಉಪನ್ಯಾಸಕಿ ವೃತ್ತಿ ಆರಂಭಿಸಿದರು. ಅದರ ನಡುವೆಯೇ ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಹಗಲಿರುಳು ತಯಾರಿ ನಡೆಸಿದರು.
ಅವರ ಕಠಿಣ ಪರಿಶ್ರಮ ಮತ್ತು ಛಲಕ್ಕೆ ತಕ್ಕ ಫಲ ಸಿಕ್ಕಿತು. ಕೇರಳ ಪೊಲೀಸ್ ವಿಶೇಷ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿವಿಲ್ ಪೊಲೀಸ್ ಪಡೆಗೆ ಆಯ್ಕೆಯಾದರು. ಇಂದು ಕೇರಳದಲ್ಲಿ ಪೊಲೀಸ್ ಅಧಿಕಾರಿಯಾಗಿ ಜನರನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿದ್ದಾರೆ.














