ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳಲ್ಲಿ ಸದ್ದು ಮಾಡಿದ ಐಸಾ ಅಧ್ಯಕ್ಷೆ ನೇಹಾ ಬೋರಾ ತಮ್ಮ ಲಿಂಗ ಗುರುತನ್ನು ಬಹಿರಂಗಪಡಿಸಿದ್ದಾರೆ. ತಾವು ಮಹಿಳೆಯಲ್ಲ, ಬದಲಾಗಿ 'ನಾನ್-ಬೈನರಿ' ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಲಿಂಗ ಗುರುತಿನ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ದೆಹಲಿ: ಕೇಂದ್ರ ಸರ್ಕಾರದ ವಿರುದ್ಧದ ಜಿರಳೆಗಳ ಪ್ರತಿಭಟನೆಯ ಸಮಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿರುವವರ ಪೈಕಿ ಅಖಿಲ ಭಾರತ ವಿದ್ಯಾರ್ಥಿ ಸಂಘದ (All India Students' Association) ಅಧ್ಯಕ್ಷೆ ನೇಹಾ ಬೋರಾ ಕೂಡ ಒಬ್ಬರು. ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಬೀದಿಗಿಳಿದ ಅವರು ರಾಜಧಾನಿ ದೆಹಲಿಯ ಹೃದಯಭಾಗದಲ್ಲಿ ಬಿರುಗಾಳಿ ಎಬ್ಬಿಸಿವರ ಪೈಕಿ ಇಬ್ಬರು. ಇದಕ್ಕೂ ಮುನ್ನ ನೀಟ್ ಪೇಪರ್ ಲೀಕ್ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂಬ ಪ್ರತಿಭಟನೆ ನಡೆದ ಸಂದರ್ಭದಲ್ಲಿ ನೇಹಾ ಬೋರಾ ಉಪವಾಸ ಪ್ರತಿಭಟನೆಯಲ್ಲಿ ಭಾಗಿಯಾಗಿ ಎಲ್ಲರ ಗಮನಸೆಳೆದಿದ್ದರು. ಕೆಲ ದಿನಗಳ ಹಿಂದೆ ತಮಗೆ ಬಾಂಗ್ಲಾದೇಶ ಸ್ಫೂರ್ತಿ ಎನ್ನುವ ಮೂಲಕ ಕಿಡಿ ಹೊತ್ತಿಸಿದ್ದರು. ಇದಾದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಹಳ ಹತ್ತಿರವಾದರು. ಒಂದು ಹಂತದಲ್ಲಿ ನಿನ್ನೆ ಮೊನ್ನೆ ಬಂದ ನೇಹಾ ಅವರಿಗೆ ರಾಹುಲ್ ಗಾಂಧಿಯವರು ಪ್ರಾಧಾನ್ಯ ನೀಡುತ್ತಿರುವುದು ಕಾಂಗ್ರೆಸ್ ಪಕ್ಷದ ಹಳೆಯ ಕಾರ್ಯಕರ್ತರ ನಡುವೆ ಆಕ್ರೋಶಕ್ಕೂ ಕಾರಣವಾಗಿ, ಇದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.
ಆದರೆ, ಇವೆಲ್ಲವುಗಳ ನಡುವೆಯೇ, ಇದೀಗ ಕುತೂಹಲ ಎನ್ನುವ ವಿಷಯವೊಂದು ಖುದ್ದು ನೇಹಾ ಬೋರಾ (Neha Bora) ಅವರೇ ರಿವೀಲ್ ಮಾಡಿದ್ದಾರೆ. ತಮ್ಮ ಲಿಂಗ ಗುರುತಿನ ಬಗ್ಗೆ ಅವರು ಜನರಿಗೆ ಸ್ಪಷ್ಟನೆ ನೀಡಿದ್ದಾರೆ. ಪೀಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ನೇಹಾ ಅವರು, ತಮ್ಮನ್ನು ತಾವು ಮಹಿಳೆ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ಜನರು ತಮ್ಮನ್ನು 'ನಾನ್-ಬೈನರಿ' (Non Binary) ವರ್ಗದಲ್ಲಿ ಪರಿಗಣಿಸುತ್ತಾರೆ. ನಾನ್-ಬೈನರಿ ಎಂಬುದು ಸಾಂಪ್ರದಾಯಿಕ ಪುರುಷ-ಮತ್ತು-ಮಹಿಳೆಯ ಲಿಂಗಕ್ಕೆ ಹೊಂದಿಕೆಯಾಗದ ಗುರುತಾಗಿದೆ. ಇದೇ ನನ್ನ ಗುರುತು. ಆದರೆ, ಅನೇಕ ಜನರು ನನ್ನನ್ನು ವಿದ್ಯಾರ್ಥಿ ನಾಯಕಿ, ಅಧ್ಯಕ್ಷೆ, ‘ಅವಳು’ She, Her ಎಂದೆಲ್ಲಾ ಕರೆಯುತ್ತಾರೆ. ಅವರದ್ದೇನೂ ತಪ್ಪಿಲ್ಲ. ಅವರಿಗೆ ನನ್ನ ಲಿಂಗ ಗುರುತಿನ ಬಗ್ಗೆ ತಿಳಿದಿಲ್ಲದ ಕಾರಣ ಅವರನ್ನು ಹಾಗೆ ಸಂಬೋಧಿಸುತ್ತಾರೆ ಎಂದು ರಿವೀಲ್ ಮಾಡಿದ್ದಾರೆ.
ನಾನು “ಅವಳಲ್ಲ”
ಜನರು ಏನೇ ಕರೆದರೂ ತಮ್ಮನ್ನು ಮಹಿಳೆಯರ ವರ್ಗದಲ್ಲಿ ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾರೆ ನೇಹಾ. ಇಂಗ್ಲಿಷ್ನಲ್ಲಿ ನನ್ನ ಹೆಸರು ಬರೆಯುವಾಗಲೆಲ್ಲಾ She, Her ಎಂದೆಲ್ಲಾ ಹೇಳುತ್ತಾರೆ. ಆದರೆ ನಾನು ನಾನ್ ಬೈನರಿ ಎಂದಿದ್ದಾರೆ. ನೇಹಾ ಅವರನ್ನು ವಿದ್ಯಾರ್ಥಿ ನಾಯಕಿ ಅಥವಾ ಅಧ್ಯಕ್ಷೆ ಎಂದು ಕರೆದಾಗ ಅದು ಅವರ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ನೇಹಾ ಹೇಳಿದರು, "ಇದು ನಡೆಯುತ್ತಲೇ ಇದೆ. ನಾನು ಅದನ್ನು ಒಪ್ಪಿಕೊಂಡಿದ್ದೇನೆ. ಕೆಲವೊಮ್ಮೆ ನಾನು ಈ ಬಗ್ಗೆ ಹೇಳಿದಾಗ, ಹಾಗೆ ಕರೆದವರು ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ. ಆದರೆ, ಮಹಿಳೆ ಅಥವಾ ಪುರುಷ ಅಲ್ಲದ ಜನರ ಜೀವನದಲ್ಲಿ ಸರ್ವನಾಮಗಳ ಪ್ರಾಮುಖ್ಯತೆಯನ್ನು ಜನರು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ನಾನು ಎಲ್ಲಿಯೇ ಸಂದರ್ಶನ ಕೊಟ್ಟರೂ ಈ ಬಗ್ಗೆ ಸ್ಪಷ್ಟವಾಗಿ ಹೇಳುತ್ತೇನೆ. ಆದ್ದರಿಂದ ವರದಿಯಲ್ಲಿ ಮಹಿಳೆ ಎಂದು ಬರೆಯುವ ಬದಲು, ಅವರು ಎಂದು ಬರೆಯುವಂತೆ ಹೇಳುತ್ತೇನೆ ಎಂದಿರುವ ನೇಹಾ, ಭಾರತದಂತಹ ದೇಶಗಳಲ್ಲಿ ಲಿಂಗ ಗುರುತಿನ ಬಗ್ಗೆ ಅರಿವಿನ ಕೊರತೆಯಿದೆ. ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳ ಮಟ್ಟವನ್ನು ತಲುಪಲು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.














