ಅಂಡರ್-19 ಏಷ್ಯಾ ಕಪ್ 2026ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 1 ವಿಕೆಟ್‌ನಿಂದ ಮಣಿಸಿದ ಭಾರತ ಕಿರಿಯರ ತಂಡ ಐತಿಹಾಸಿಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ, ಕೊನೆಯ ಎಸೆತದಲ್ಲಿ ಮೋಹಿತ್ ಉಲ್ವಾ ಬಾರಿಸಿದ ಬೌಂಡರಿಯಿಂದ ರೋಚಕ ವಿಜಯ ಸಾಧಿಸಿತು.

ಅಲ್‌ ಅಮೇರತ್‌, ಓಮಾನ್‌ (ನ.14): ಕ್ರಿಕೆಟ್ ಜಗತ್ತಿನ ಅತ್ಯಂತ ರೋಚಕ ಹಣಾಹಣಿಗಳಲ್ಲಿ ಒಂದಾದ ಅಂಡರ್-19 ಏಷ್ಯಾ ಕಪ್ 2026ರ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 1 ವಿಕೆಟ್‌ನಿಂದ ಮಣಿಸಿದ ಭಾರತ ಕಿರಿಯರ ತಂಡ ಐತಿಹಾಸಿಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಪಾಕಿಸ್ತಾನ ನೀಡಿದ್ದ 338 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಭಾರತಕ್ಕೆ ಕೊನೆಯ ಎಸೆತದಲ್ಲಿ ಗೆಲ್ಲಲು 3 ರನ್‌ಗಳ ಅಗತ್ಯವಿದ್ದಾಗ, ಡೀಪ್ ಎಕ್ಸ್‌ಟ್ರಾ ಕವರ್ ಮೂಲಕ ಭರ್ಜರಿ ಬೌಂಡರಿ ಬಾರಿಸಿದ ಮೋಹಿತ್ ಉಲ್ವಾ (Mohit Ulva) ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದರು.

309 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೆ ತಲುಪಿದ್ದ ಭಾರತವನ್ನು, ಕೊನೆಯ ವಿಕೆಟ್‌ಗೆ ಮುರಿಯದ 30 ರನ್‌ಗಳ (16 ಎಸೆತ) ಜೊತೆಯಾಟವಾಡಿದ ಮೋಹಿತ್ ಉಲ್ವಾ (ಅಜೇಯ 49) ಮತ್ತು ಚಿಗುರುಪಾಟಿ ವೆಂಕಟ (ಅಜೇಯ 11) ಗೆಲುವಿನ ದಡ ಸೇರಿಸಿದರು. ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿ ರೋಚಕ ವಿಜಯ ಸಾಧಿಸಿತು.

ಉಸ್ಮಾನ್ ಖಾನ್ ಶತಕ, ಪಾಕ್ 337 ರನ್‌ಗಳ ಬೃಹತ್ ಮೊತ್ತ

ಅಲ್ ಅಮೇರತ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡಕ್ಕೆ ಆರಂಭಿಕ ಆಟಗಾರ ಉಸ್ಮಾನ್ ಖಾನ್ ಭರ್ಜರಿ ಶತಕದ ಆಸರೆಯಾದರು. 111 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 107 ರನ್ ಸಿಡಿಸಿದರು. ಇವರಿಗೆ ಸಾಥ್ ನೀಡಿದ ಅಬ್ದುಲ್ ಖಾದಿರ್ ಕೇವಲ 54 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 80 ರನ್ ಚಚ್ಚಿದರೆ, ನಾಯಕ ಫರ್ಹಾನ್ ಯೂಸುಫ್ 63 ರನ್ (60 ಎಸೆತ) ಗಳಿಸಿದರು.

ಅಂತಿಮವಾಗಿ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಕಲೆಹಾಕಿತು. ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಕವ್ಯ ಪಟೇಲ್ 4 ವಿಕೆಟ್ ಹಾಗೂ ಚಿಗುರುಪಾಟಿ ವೆಂಕಟ 3 ವಿಕೆಟ್ ಪಡೆದು ಪಾಕ್ ರನ್ ವೇಗಕ್ಕೆ ಕಡಿವಾಣ ಹಾಕಿದರು.

ನಾಯಕ ಲಕ್ಷ್ಯ, ಆರ್ಯವೀರ್, ಮನಲ್ ದಿಟ್ಟ ಹೋರಾಟ

338 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತಕ್ಕೆ ನಾಯಕ ಲಕ್ಷ್ಯ ರಾಜೇಶ್ ರಾಯಚಂದಾನಿ (80 ರನ್, 101 ಎಸೆತ) ಮತ್ತು ಆರ್ಯವೀರ್ ಸೆಹ್ವಾಗ್ (58 ರನ್, 61 ಎಸೆತ) ಉತ್ತಮ ಆರಂಭ ಒದಗಿಸಿದರು. ಬಳಿಕ ವಿ.ಕೆ. ವಿನೀತ್ (24), ಅರ್ಜುನ್ ರಾಜ್‌ಪುತ್ (16) ಹಾಗೂ ವಿಕೆಟ್ ಕೀಪರ್ ಅನ್ವಯ್ ದ್ರಾವಿಡ್ (19) ಉಪಯುಕ್ತ ಕಾಣಿಕೆ ನೀಡಿದರು.

ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಮನಲ್ ಚೌಹಾಣ್ ಕೇವಲ 32 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಿತ 47 ರನ್ ಸಿಡಿಸಿ ಗೆಲುವಿನ ಆಸೆ ಜೀವಂತವಿರಿಸಿದರು. ಆದರೆ 47.2ನೇ ಓವರ್‌ನಲ್ಲಿ ಮನಲ್ ಚೌಹಾಣ್ ಔಟಾದಾಗ ಭಾರತ 309/9 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.

ಕೊನೆಯ ಓವರ್‌ನ ಎದೆಬಡಿತ ಹೆಚ್ಚಿಸಿದ ಮ್ಯಾಚ್‌

ಕೊನೆಯ 6 ಎಸೆತಗಳಲ್ಲಿ ಭಾರತಕ್ಕೆ ಗೆಲ್ಲಲು 8 ರನ್ ಬೇಕಿತ್ತು, ಪಾಕಿಸ್ತಾನಕ್ಕೆ ಗೆಲ್ಲಲು ಬೇಕಿದ್ದದ್ದು ಕೇವಲ 1 ವಿಕೆಟ್. ಪಾಕ್ ಲೆಗ್ ಸ್ಪಿನ್ನರ್ ಅಹ್ಮದ್ ಹುಸೇನ್ 50ನೇ ಓವರ್ ಎಸೆಯಲು ಬಂದರು. ಮೋಹಿತ್ ಉಲ್ವಾ ಮೊದಲ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಚೆಂಡನ್ನು ಮಿಸ್ ಮಾಡಿಕೊಂಡರು. ವಿಕೆಟ್ ಕೀಪರ್ ಸ್ಟಂಪಿಂಗ್‌ಗೆ ಮನವಿ ಮಾಡಿದರಾದರೂ, ಉಲ್ವಾ ಸಮಯಪ್ರಜ್ಞೆಯಿಂದ ಕ್ರೀಸ್‌ನೊಳಗೆ ಕಾಲಿಟ್ಟು ಪಾರಾದರು. 2ನೇ ಎಸೆತದಲ್ಲಿ ಉಲ್ವಾ ಮುಂದೆ ಬರುವುದನ್ನು ಗಮನಿಸಿದ ಬೌಲರ್ ಆಫ್-ಸ್ಟಂಪ್ ಹೊರಗೆ ವೈಡ್ ಎಸೆದರು. ಭಾರತಕ್ಕೆ 1 ಬೋನಸ್ ರನ್ ಸಿಕ್ಕಿತು. ಮತ್ತೊಮ್ಮೆ 2ನೇ ಎಸೆತದಲ್ಲಿ ಪಾಯಿಂಟ್ ದಿಕ್ಕಿಗೆ ಚೆಂಡನ್ನು ತಳ್ಳಿದ ಉಲ್ವಾ 1 ರನ್ ಗಳಿಸಿದರು. 3ನೇ ಎಸೆತದಲ್ಲಿ ಚಿಗುರುಪಾಟಿ ವೆಂಕಟ ಬ್ಯಾಟ್‌ನ ಒಳಅಂಚಿಗೆ ತಗುಲಿ ಪ್ಯಾಡ್‌ಗೆ ಬಡಿದ ಚೆಂಡಿನಿಂದ 1 ರನ್ ಕದಿಯುವಲ್ಲಿ ಯಶಸ್ವಿಯಾದರು. ಈ ಹಂತದಲ್ಲಿ ಭಾರತದ ಗೆಲುವಿಗೆ 3 ಎಸೆತಗಳಲ್ಲಿ 5 ರನ್‌ ಬೇಕಿತ್ತು.

4ನೇ ಕ್ರೀಸ್‌ನಿಂದ ಮುಂದೆ ಬಂದು ಲಾಂಗ್-ಆಫ್ ಕಡೆಗೆ ಬಾರಿಸಿದ ಮೋಹಿತ್ ಉಲ್ವಾ 1 ರನ್ ಗಳಿಸಿದರು. 5ನೇ ಎಸೆತದಲ್ಲಿ ಲಾಂಗ್-ಆನ್ ಕಡೆಗೆ ಚೆಂಡನ್ನು ಅಟ್ಟಿದ ಚಿಗುರುಪಾಟಿ ವೆಂಕಟ 1 ರನ್ ಪೂರೈಸಿ ಸ್ಟ್ರೈಕ್ ಅನ್ನು ಉಲ್ವಾಗೆ ನೀಡಿದರು. ಕೊನೆಯ 1 ಎಸೆತದಲ್ಲಿ ಗೆಲುವಿಗೆ 3 ರನ್ ಬೇಕಿತ್ತು. ಒತ್ತಡವನ್ನು ಮೆಟ್ಟಿನಿಂತ ಮೋಹಿತ್ ಉಲ್ವಾ ಚೆಂಡನ್ನು ಡೀಪ್ ಎಕ್ಸ್‌ಟ್ರಾ ಕವರ್ ಬೌಂಡರಿ ಗೆರೆ ದಾಟಿಸುತ್ತಿದ್ದಂತೆಯೇ ಭಾರತೀಯ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿತು.