ಮಧ್ಯಪ್ರದೇಶದ 20 ವರ್ಷದ ಯುವಕ ಬಿಟ್ಟು ತಬಾಹಿ, ತೀವ್ರ ಕಲುಷಿತಗೊಂಡಿದ್ದ ಅಜ್ನರ್ ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸಿದ್ದಾರೆ. ಟೀಕೆಗಳನ್ನು ಮೆಟ್ಟಿನಿಂತ, ಅವರ ದೃಢ ಸಂಕಲ್ಪದಿಂದ ನದಿಗೆ ಮರುಜೀವ ಬಂದಿದ್ದು, ಟೀಕಿಸಿದವರೇ ಹೊಗಳುತ್ತಿದ್ದಾರೆ.
ಏಕಾಂಗಿಯಾಗಿ ಬಾವಿ ಸ್ವಚ್ಛಗೊಳಿಸಿದ 20ರ ತರುಣ
ಮನದ ಇಚ್ಚಾಶಕ್ತಿಯ ಮುಂದೆ ಯಾವುದು ಅಸಾಧ್ಯವಲ್ಲಾ ಎಂಬುದನ್ನು ಅನೇಕರು ಸಾಬೀತುಪಡಿಸಿದ್ದಾರೆ. ಏಕಾಂಗಿಯಾಗಿ ಬಾವಿಯನ್ನೆ ಅಗೆದು ನೀರು ತೆಗೆದ ನಮ್ಮ ರಾಜ್ಯದ ಶಿರಸಿಯ ಮಹಿಳೆ ಗೌರಿ ಇಂತಹ ಇಚ್ಛಾಶಕ್ತಿಗೊಂದು ಉದಾಹರಣೆ. ಇದೇ ರೀತಿ ಅನೇಕರು ಏಕಾಂಗಿಯಾಗಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಅದೇ ರೀತಿ ಇಲ್ಲೊಬ್ಬ 20ರ ಹರೆಯದ ತರುಣನ ದೃಢಸಂಕಲ್ಪಕ್ಕೆ ಒಂದು ನದಿಯೇ ಸ್ವಚ್ಛವಾಗಿದೆ. ಹೌದು ಮಧ್ಯಪ್ರದೇಶದ ಬಿಯೋರಾದ 20 ವರ್ಷದ ಹುಡುಗ ಈಗ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗ್ತಿದ್ದಾನೆ.
ಸದಾ ಸ್ಪೂರ್ತಿದಾಯಕ ವ್ಯಕ್ತಿಗಳ ಸಾಧನೆಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಆನಂದ್ ಮಹೀಂದ್ರಾ ಅವರು ಈಗ ಈ ಮಧ್ಯಪ್ರದೇಶದ ಯುವಕ ತಬಾಹಿಯ ಕತೆಯನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ. ಈ ಬಿಟ್ಟು ತಬಾಹಿ ಮಧ್ಯಪ್ರದೇಶದಲ್ಲಿರುವ ಅಜ್ನರ್ ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸಿದ್ದಾನೆ.
ಸೋಶಿಯಲ್ ಮೀಡಿಯಾಗಾಗಿ ಮಾಡಿದ ಪ್ರಯತ್ನ
ಮಧ್ಯಪ್ರದೇಶದ ಬಿಯೋರಾ ನಗರದ ಈ ಯುವಕ, ಸಾಮಾಜಿಕ ಮಾಧ್ಯಮದಲ್ಲಿ ಲೈಕ್ಸ್ ಪಡೆಯುವ ಸಲುವಾಗಿ ನದಿಯ ಕೆಲವು ಭಾಗಗಳನ್ನು ಸ್ವಚ್ಛಗೊಳಿಸಿದ್ದೇನೆ ಎಂದು ಹೇಳಿಕೊಂಡಿದ್ದಕ್ಕಾಗಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ನಾವು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮವು ಅರ್ಥಪೂರ್ಣವಾದದ್ದಕ್ಕಿಂತ ಕ್ಷುಲ್ಲಕವಾದದ್ದಕ್ಕೆ ಪ್ರತಿಫಲ ನೀಡುತ್ತದೆ ಎಂದು ದೂರುತ್ತೇವೆ. ಆದರೆ ಲೈಕ್ಸ್‌ಗಾಗಿ ಒಂದು ಒಳ್ಳೆಯ ಕೆಲಸ ಮಾಡಿದರೆ ತಪ್ಪೇನು? ಬಿಯೋರಾ ನಗರದ ಬಿಟ್ಟು ತಬಾಹಿ ನನ್ನ ಸೋಮವಾರದ ಪ್ರೇರಣೆ ಎಂದು ಬರೆದು ಆನಂದ್ ಮಹೀಂದ್ರಾ ಅವರು ಆ ಬಿಟ್ಟು ತಬಾಹಿ ಪೋಟೋವನ್ನು ಹಂಚಿಕೊಂಡಿದ್ದಾರೆ.
ಯಾರು ಈ ಬಿಟ್ಟು ತಬಾಹಿ?
ಮ್ಯಧ್ಯಪ್ರದೇಶದ ಬಿಯೋರಾ ಎಂಬ ಸಣ್ಣ ಪಟ್ಟಣದ 20 ವರ್ಷದ ಬಿಟ್ಟು ತಬಾಹಿ ಅವರು ಬಹಳ ಕಲುಷಿತಗೊಂಡಿದ್ದ ಅಜ್ನರ್ ನದಿಯನ್ನು ಸ್ವಚ್ಛಗೊಳಿಸುವ ಸಂಕಲ್ಪ ಮಾಡಿದರು. ಅವರು ಯಾವುದೇ ಅಧಿಕರತ ಸಹಾಯ ಹಾಗೂ ದೊಡ್ಡಮಟ್ಟದ ಬೆಂಬಲಕ್ಕಾಗಿ ಕಾಯದೆ ತೀವ್ರವಾಗಿ ಕಲುಷಿತಗೊಂಡಿದ್ದ ಅಜ್ನರ್ ನದಿಯನ್ನು ಸಂಪೂರ್ಣವಾಗಿ ಸ್ವಂತವಾಗಿ ಸ್ವಚ್ಛಗೊಳಿಸಲು ನಿರ್ಧರಿಸಿದರು. ಯಾವುದೇ ದೊಡ್ಡ ಉಪಕರಣ ಬಳಸದೇ ಕೇವಲ ತನ್ನ ಕೈಗಳು ಮತ್ತು ಕೆಲವು ಮೂಲಭೂತ ಸಾಧನಗಳನ್ನು ಬಳಸಿ ಬಿಟ್ಟು ನದಿಯಿಂದ ಪ್ಲಾಸ್ಟಿಕ್ ತ್ಯಾಜ್ಯ, ಪಾಚಿ ಮತ್ತು ಭಗ್ನಾವಶೇಷಗಳನ್ನು ತೆಗೆದುಹಾಕಲು ಪ್ರಾರಂಭಿಸಿದರು.
ಇದನ್ನೂ ಓದಿ: ಗೂಗಲ್ ನಲ್ಲಿ ವಾರ್ಷಿಕ 80 ಲಕ್ಷ ವೇತನ ಪಡೆಯುತ್ತಿರುವ 26 ವರ್ಷದ ತರುಣ: 2031ಕ್ಕೆ ರಿಟೈರ್ ಆಗ್ತಿನಿ ಎಂದ ಟೆಕ್ಕಿ
ಆದರೆ ಇವರ ಈ ಸ್ವಚ್ಛತಾ ಕಾರ್ಯಕ್ಕೆ ಆರಂಭದಲ್ಲಿ ಮೆಚ್ಚುಗೆ ಸಿಗಲಿಲ್ಲ, ಜನ ಟೀಕೆ ಮಾಡುವ ಮೂಲಕ ಅವರ ಕಾರ್ಯಗಳನ್ನು ಅವಮಾನಿಸುವುದರ ಜೊತೆಗೆ ಅನುಮಾನದಿಂದ ನೋಡಿದರು. ಇದು ಒಬ್ಬರಿಂದ ಆಗುವ ಕೆಲಸವಲ್ಲ ಎಂದು ಹೇಳಿದರು. ಈ ನದಿಯ ದುರಸ್ತಿ ಸಾಧ್ಯವೇ ಇಲ್ಲ ಎಂದು ಅನೇಕರು ಹೇಳಿದರು. ಅನೇಕರು ಬಿಟ್ಟುವಿನ ಉದ್ದೇಶವನ್ನು ಪ್ರಶ್ನಿಸಿದರು. ಇದು ಕೇವಲ ಜನಪ್ರಿಯತೆಯನ್ನು ಗಳಿಸುವ ಪ್ರಯತ್ನ ಎಂದು ಅನೇಕರು ಹೇಳಿದರು. ಆದರೆ ಈ ಎಲ್ಲಾ ಟೀಕೆಗಳನ್ನು ಮೆಟ್ಟಿನಿಂತ ಬಿಟ್ಟು, ತಮ್ಮ ನದಿ ಸ್ವಚ್ಛಗೊಳಿಸಲೇಬೇಕೆಂಬ ದೃಢಸಂಕಲ್ಪ ಮೇಲೆ ಗಮನಹರಿಸಲು ನಿರ್ಧರಿಸಿದರು.
ಜನವರಿ 26 ರಂದು ಅವರು ನದಿ ಶುಚಿಗೊಳಿಸುವಿಕೆಯನ್ನು ಪ್ರಾರಂಭಿಸಿದರು ವಾರಗಳ ಕಾಲ ಅವರ ಸ್ವಚ್ಛತಾ ಕಾರ್ಯ ಮುಂದುವರೆಯಿತು. ಆರಂಭದಲ್ಲಿ ಅವರಿಗೆ ಬೆಂಬಲ ಸಿಕ್ಕಿತು. ಆದರೆ ನಂತರದಲ್ಲಿ ಅದೂ ಸಿಗದೇ ಹೋಯ್ತು. ಆದರೂ ಅವರು ಏಕಾಂಗಿಯಾಗಿ ಕೆಲಸ ಮಾಡಿದರು. ಕಾಲಿಡಲು ಅಂಜುವಂತಹ ಕಲುಷಿತ ನೀರಿನಲ್ಲಿ ಅಲೆದಾಡಿ, ಅವರು ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು ಮತ್ತು ಪಾಚಿಯ ದಪ್ಪ ಪದರಗಳನ್ನು ಕೈಯಾರೆ ಹೊರತೆಗೆದರು. ಕೆಲಸವು ದೈಹಿಕವಾಗಿ ಕಷ್ಟಕರವಾಗಿತ್ತು ಮತ್ತು ಸಮಯ ತೆಗೆದುಕೊಳ್ಳುತ್ತಿತ್ತು, ಆದರೆ ಅವರು ತಾಳ್ಮೆ ಮತ್ತು ಸ್ಥಿರತೆಯಿಂದ ಕೆಲಸ ಮುಂದುವರೆಸಿದರು
ಶುಚಿಗೊಳಿಸುವ ಮೊದಲು, ನದಿಯ ಸ್ಥಿತಿ ಆತಂಕಕಾರಿಯಾಗಿತ್ತು. ತೇಲುವ ತ್ಯಾಜ್ಯದ ದೊಡ್ಡ ತೇಪೆಗಳು ಮೇಲ್ಮೈಯನ್ನು ಆವರಿಸಿದ್ದವು, ಮತ್ತು ಅನೇಕ ಸ್ಥಳಗಳಲ್ಲಿ, ನೀರು ಕೂಡ ಗೋಚರಿಸುತ್ತಿರಲಿಲ್ಲ. ನದಿಯು ನೈಸರ್ಗಿಕ ಜಲಮೂಲಕ್ಕಿಂತ ಹೆಚ್ಚಾಗಿ ಕಸದ ತೊಟ್ಟಿಯಂತಿತ್ತು, ಇದು ಹಲವು ವರ್ಷಗಳಲ್ಲಿ ಜನರ ಹಾಗೂ ಆಡಳಿತದ ನಿರ್ಲಕ್ಷ್ಯ ಮತ್ತು ಮಾಲಿನ್ಯವನ್ನು ಎತ್ತಿ ತೋರಿಸಿತು. ಆದರೆ ಬಿಟ್ಟು ಈ ಕೆಲಸಕ್ಕೆ ಕೈ ಹಾಕಿದ ನಂತರದ ರೂಪಾಂತರವು ಆನ್‌ಲೈನ್‌ನಲ್ಲಿ ಅನೇಕರನ್ನು ಅಚ್ಚರಿಗೊಳಿಸಿತು. ಕ್ರಮೇಣ, ತ್ಯಾಜ್ಯವನ್ನು ನದಿಯಿಂದ ತೆರವುಗೊಳಿಸಿದಂತೆ, ನದಿಯು ತನ್ನ ನೈಸರ್ಗಿಕ ನೋಟವನ್ನು ಮರಳಿ ಪಡೆಯಲು ಪ್ರಾರಂಭಿಸಿತು. ಈಗ ಅಲ್ಲಿನ ನೀರು ಸ್ವಚ್ಛವಾಗಿ ಕಾಣುತ್ತದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹೆಚ್ಚು ಪ್ರಶಾಂತವಾಗಿ ಕಾಣುತ್ತವೆ. ಮೊದಲು ಮತ್ತು ನಂತರದ ಚಿತ್ರಗಳು ಮತ್ತು ವೀಡಿಯೊಗಳು ವೀಕ್ಷಕರನ್ನು ದಿಗ್ಭ್ರಮೆಗೊಳಿಸಿವೆ. ಅನೇಕರು ಇದು ಒಂದೇ ಸ್ಥಳ ಎಂಬುದನ್ನು ನಂಬಲು ಕಷ್ಟಪಡುತ್ತಿದ್ದಾರೆ.
ಇದನ್ನೂ ಓದಿ: ಇರಾನ್ ಯುದ್ಧ: ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಗ್ಯಾಲನ್‌ಗೆ 4 ಡಾಲರ್‌ಗೆ ಏರಿಕೆ
ಅಂದಿನಿಂದ ಬಿಟ್ಟು ತಬಾಹಿ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೇಕರು ಬಿಟ್ಟುವನ್ನು ನಿಜವಾದ ನಾಯಕ ಎಂದು ಕರೆಯುತ್ತಿದ್ದಾರೆ. ಇವರು ನಿಜವಾಗಿಯೂ ಒಂದು ಸ್ಪೂರ್ತಿ ಎಂದು ಅನೇಕರು ಕೊಂಡಾಡುತ್ತಿದ್ದಾರೆ. ಬಿಟ್ಟು ಅವರ ಪ್ರಯತ್ನಗಳು ಮೆಚ್ಚುಗೆಗೆ ಅರ್ಹವಾಗಿದ್ದರೂ ನದಿಗಳ ರಕ್ಷಣೆ ಹಾಗೂ ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯ ಎಂಬುದನ್ನು ಅನೇಕರು ಹೇಳಿದ್ದಾರೆ.


