ಮಧ್ಯಪ್ರದೇಶದಲ್ಲಿ 70 ದಾಟಿದವರಿಗೂ ಬಿಜೆಪಿ ಟಿಕೆಟ್: ಗೆಲುವೊಂದೇ ಮಾನದಂಡ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಿರಿಯರ ಬದಲು ಯುವಕರಿಗೆ ಮಣೆ ಹಾಕಿ ಪಾಠ ಕಲಿತ ಬಿಜೆಪಿ, ಮಧ್ಯಪ್ರದೇಶದಲ್ಲಿ ಮತ್ತೆ ಹಿರಿಯರ ಮೊರೆ ಹೋಗಿದೆ.

ಭೋಪಾಲ್: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಿರಿಯರ ಬದಲು ಯುವಕರಿಗೆ ಮಣೆ ಹಾಕಿ ಪಾಠ ಕಲಿತ ಬಿಜೆಪಿ, ಮಧ್ಯಪ್ರದೇಶದಲ್ಲಿ ಮತ್ತೆ ಹಿರಿಯರ ಮೊರೆ ಹೋಗಿದೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 70 ವರ್ಷದ ದಾಟಿದವರಿಗೆ ಟಿಕೆಟ್ ಇಲ್ಲ ಎಂಬ ತನ್ನ ಅಘೋಷಿತ ನಿಯಮವನ್ನು ಮೀರಿ 14 ಜನರಿಗೆ ಟಿಕೆಟ್ ನೀಡಿದೆ.
ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (67), ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ (74) ಅವರಿಗೆ ಟಿಕೆಟ್ ನಿರಾಕರಿಸಿದ್ದ ಬಿಜೆಪಿ, ಯುವ ಮುಖಗಳಿಗೆ ಆದ್ಯತೆ ನೀಡಿತ್ತು. ಹೀಗೆ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಲು ನೇರ ಕಾರಣ ನೀಡದೇ ಇದ್ದರೂ, ಅವರು 70ರ ಆಸುಪಾಸಿನಲ್ಲಿರುವುದು ಇಲ್ಲವೇ ಆ ವಯೋಮಿತಿ ದಾಟಿದ್ದು ಕಾರಣ ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು. ಜೊತೆಗೆ ಈ ಪ್ರಯೋಗ ಚುನಾವಣೆಯ ಫಲಿತಾಂಶದ ಮೇಲೂ ಪರಿಣಾಮ ಬೀರಿ ಬಿಜೆಪಿಗೆ ಭಾರೀ ಹೊಡೆತ ನೀಡಿತ್ತು.
ಈ ರಾಜ್ಯದಲ್ಲಿ 450 ರೂ. ಗೆ ಸಿಗುತ್ತೆ ಗ್ಯಾಸ್ ಸಿಲಿಂಡರ್: ಬಿಜೆಪಿ ಘೋಷಣೆ
ಹೀಗಾಗಿ ಮಧ್ಯಪ್ರದೇಶ ಚುನಾವಣೆಯಲ್ಲಿ ಪ್ರಯೋಗಕ್ಕೆ ಬ್ರೇಕ್ ಹಾಕಿರುವ ಬಿಜೆಪಿ ನಾಯಕರು, ಗೆಲುವೊಂದೇ ಮೂಲಮಂತ್ರ ಎಂಬುದಕ್ಕೆ ಶರಣಾಗಿದ್ದಾರೆ. ಅದಕ್ಕೆಉದಾಹರಣೆ ಎಂಬಂತೆ ನ.17ರಂದು ಮತದಾನ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 70 ವರ್ಷದ ದಾಟಿದ 14 ಜನರಿಗೆ ಟಿಕೆಟ್ ನೀಡಿದೆ. ಈ ಪೈಕಿ ಗರಿಷ್ಠ ವಯೋಮಿತಿಯ ಅಭ್ಯರ್ಥಿಯೆಂದರೆ ನಾಗೇಂದ್ರ ಸಿಂಗ್ ನಗೋಡ್ (80). ಉಳಿದಂತೆ ಜಯಂತ್ ಮಲಯ್ಯ (76), ಜಗನ್ನಾತ್ ಸಿಂಗ್ (75), ಸೀತಾಶರಣ್ ಶರ್ಮಾ (73), ಬಿಸಾಹುಲಾಲ್ ಸಿಂಗ್ (73), ಮಾಯಾ ಸಿಂಗ್ (73) ಮೊದಲಾದವರು ಸೇರಿದ್ದಾರೆ.
ಮಧ್ಯ ಪ್ರದೇಶ ಚುನಾವಣೆಯಲ್ಲಿ ಹಿಂದುತ್ವದ ಅಲೆ, ಶ್ರೀ ರಾಮ ಭಕ್ತರಾದ ಕಾಂಗ್ರೆಸ್ ನಾಯಕರು!
ಜೊತೆಗೆ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲೇ ಬೇಕು ಎಂದು ಪಣತೊಟ್ಟಿರುವ ಬಿಜೆಪಿ, ಈ ಬಾರಿ 7 ಸಂಸದರು, ಪಕ್ಷದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಮತ್ತು ಓರ್ವ ಕೇಂದ್ರ ಸಚಿವರಿಗೆ ಕೂಡಾ ವಿಧಾನಸಭೆಯ ಟಿಕೆಟ್ ನೀಡಿ ಕಣಕ್ಕೆ ಇಳಿಸಿದೆ. ಇನ್ನು ಬಿಜೆಪಿಯನ್ನು ಸವಕಲು ಪಕ್ಷ ಎಂದು ಟೀಕಿಸಿದ್ದ ಕಾಂಗ್ರೆಸ್ ಕೂಡಾ ಈ ಬಾರಿಯ ಚುನಾವಣೆಯಲ್ಲಿ 70 ವರ್ಷದ ದಾಟಿದ 9 ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸುವ ಮೂಲಕ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ತಂತ್ರ ರೂಪಿಸಿದೆ.