ಮಧ್ಯ ಪ್ರದೇಶ ಚುನಾವಣೆಯಲ್ಲಿ ಹಿಂದುತ್ವದ ಅಲೆ, ಶ್ರೀ ರಾಮ ಭಕ್ತರಾದ ಕಾಂಗ್ರೆಸ್ ನಾಯಕರು!
ಮಧ್ಯ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಇದೀಗ ಶ್ರೀ ರಾಮ ಜಪ ಆರಂಭಿಸಿದೆ. ಇತ್ತ ನಾನೊಬ್ಬ ಸನಾತನಿ ಎಂದು ಹೇಳಿಕೆ ನೀಡುವ ಮೂಲಕ ಹಿಂದೂ ಮತಗಳನ್ನು ಕ್ರೋಢಿಕರಿಸಲು ಸಜ್ಜಾಗಿದೆ. ಇದೀಗ ದಿಗ್ವಿಜಯ್ ಸಿಂಗ್ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ.

ಭೋಪಾಲ್(ಅ.29) ಮಧ್ಯಪ್ರದೇಶ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ. ಇದೀಗ ಮತದಾರರನ್ನು ಸೆಳೆಯರು ನಾಯಕರು ಹಲವು ವೇಷ ಧರಿಸುತ್ತಿದ್ದಾರೆ. ಸ್ಫೋಟಕ ಹೇಳಿಕೆ, ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಸಮುದಾಯಗಳ ಮತ ಕ್ರೋಢಿಕರಣ ನಡೆಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಶ್ರೀ ರಾಮ ಜಪ ಆರಂಭಿಸಿದೆ. ಇಷ್ಟೇ ಅಲ್ಲ ಸನಾತನ ಧರ್ಮದ ಅನುಸರಿಸುತ್ತಿದ್ದೇವೆ ಎಂಬ ಮಾತುಗಳನ್ನು ಹೇಳಿದೆ. ಹೌದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಯ ಸಿಂಗ್ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಭೋಪಾಲ್‌ನಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್ ನಾನೊಬ್ಬ ಉತ್ತಮ ಹಿಂದೂ. ನಾನು ಸನಾತನ ಧರ್ಮ ಅನುಸರಿಸುತ್ತೇನೆ ಎಂದಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಮಿತ್ರ ಪಕ್ಷ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ನಾಶಕ್ಕೆ ಕರೆಕೊಟ್ಟಾಗ ಕಾಂಗ್ರೆಸ್ ನಾಯಕರು ಮೌನಕ್ಕೆ ಜಾರಿದ್ದರು. ಇಷ್ಟೇ ಅಲ್ಲ, ದಶಕಗಳ ಹಿಂದೆ ಮುಂಬೈ ದಾಳಿ ನಡೆಸಿದ್ದು ಆರ್‌ಎಸ್‌ಎಸ್ ಹಾಗೂ ಸನಾತನಿಗಳು ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ದುದ್ದ ಭಾಷಣ ಬಿಗಿದಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇದೀಗ ತಾನೊಬ್ಬ ಸನಾತನ ಧರ್ಮವನ್ನು ಅಚ್ಚುಕಟ್ಟಾಗಿ ಅನುಸರಿಸುವ ಹಿಂದೂ ಎಂದು ಹೇಳಿದ್ದಾರೆ.
ಬಜರಂಗದಳವನ್ನ ಬ್ಯಾನ್ ಮಾಡೋದಿಲ್ಲ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 'ಸಾಫ್ಟ್ ಹಿಂದುತ್ವ'!
ಶ್ರೀ ರಾಮ ಮಂದಿರ ನಿರ್ಮಾಣಕ್ಕೆ 1.11 ಲಕ್ಷ ರೂಪಾಯಿ ದೇಣಿಗೆ ನೀಡಿದ್ದೇನೆ. ನಾನೊಬ್ಬ ಉತ್ತಮ ಹಿಂದೂ ಎಂದು ದಿಗ್ವಜಯ್ ಸಿಂಗ್ ಹೇಳಿದ್ದಾರೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹ್ವಾನ್ ಕೇವಲ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ನಾನು ಪ್ರಧಾನಿ ಮೋದಿಗೆ ಚೆಕ್ ಕಳುಹಿಸಿದ್ದೆ. ಈ ಚೆಕ್‌ನ್ನ ಮೋದಿ ಮರಳಿ ಕಳುಹಿಸಿದ್ದರು. ನೀವೇ ಟ್ರಸ್ಟ್‌ಗೆ ನೀಡಿ ಎಂದು ಸೂಚಿಸಿದ್ದರು. ಅದರಂತೆ ನಾನು ರಾಜನ್ಮಭೂಮಿ ಟ್ರಸ್ಟ್‌ಗೆ ಚೆಕ್ ನೀಡಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.
ಇತ್ತೀಚೆಗೆ ಶಿವರಾಜ್ ಸಿಂಗ್ ಚೌಹ್ಹಾಣ್ ಕನ್ಯಾಪೂಜೆ ನೆರವೇರಿಸಿರುವುದನ್ನು ನೌಟಂಕಿ ಎಂದು ಟೀಕಿಸಿ ಪೇಚಿಗೆ ಸಿಲುಕಿದ್ದ ದಿಗ್ವಜಯ್ ಸಿಂಗ್ ಇದೀಗ ಶ್ರೀ ರಾಮನ ಜಪ ಆರಂಭಿಸಿದ್ದಾರೆ. ಇಡೀ ದೇಶವೇ ಕನ್ಯಾಪೂಜೆ ಆಚರಿಸಿದೆ. ನಾನು ನನ್ನ ಹೆಣ್ಣುಮಕ್ಕಳ ಕನ್ಯಾಪೂಜೆ ನೆರವೇರಿಸಿದ್ದೇನೆ. ಹಿಂದೂ ಧರ್ಮದ ಆಚರಣೆಗಳನ್ನು ಮಾಡುವುದು ನಾಟಕವೇ? ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಇದಕ್ಕೆ ಉತ್ತರಿಸಲಿ ಎಂದು ಶಿವರಾಜ್ ಸಿಂಗ್ ಚೌಹ್ಹಾಣ ತಿರುಗೇಟು ನೀಡಿದ್ದರು.
ಗೋಲ್ವಾಲ್ಕರ್ ವಿರುದ್ಧ ಪೋಸ್ಟ್: ದಿಗ್ವಿಜಯ್ ಸಿಂಗ್ ವಿರುದ್ಧ ಪ್ರಕರಣ
ನವೆಂಬರ್ 17 ರಂದು ಮಧ್ಯಪ್ರದೇಶ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಫಲಿತಾಂಶ ಹೊರಬೀಳಲಿದೆ. ಸದ್ಯ ಅಧಿಕಾರದಲ್ಲಿರುವ ಬಿಜೆಪಿ ಮತ್ತೆ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿದೆ. ಇತ್ತ ಕಾಂಗ್ರೆಸ್ ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿ ಮಾಡಿದ ಮೋಡಿಯನ್ನು ಮಧ್ಯಪ್ರದೇಶದಲ್ಲೂ ಮಾಡಲು ಸಜ್ಜಾಗಿದೆ.