ಬೆಂಗಳೂರಿನ ಅಗರ ಕೆರೆಯಲ್ಲಿ 25 ವರ್ಷದ ಟೆಕ್ಕಿಯ ಶವ ಪತ್ತೆಯಾಗಿದ್ದು, ಕೆಲಸದ ಒತ್ತಡದಿಂದಾಗಿ ಸಾವಿಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು: ನಗರದ ಅಗರ ಕೆರೆಯಲ್ಲಿ 25 ವರ್ಷದ ಟೆಕ್ಕಿಯೊಬ್ಬರ ಶವ ಪತ್ತೆಯಾಗಿದ್ದು, ಕೆಲಸದ ಒತ್ತಡದಿಂದಾಗಿ ಅವರು ಕೆರೆಗೆ ಹಾರಿ ಸಾವಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಕ್ರುಟ್ರಿಮ್ ಸಂಸ್ಥೆಯಲ್ಲಿ ಮೆಷಿನ್ ಲರ್ನಿಂಗ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನಿಖಿಲ್ ಸೋಮವಂಶಿ ಸಾವಿಗೆ ಶರಣಾದ ಟೆಕ್ಕಿ, ಮೇ.8ರಂದು ಅವರ ಶವ ಪತ್ತೆಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮೃತದೇಹ ಪತ್ತೆಯಾದ ಸುಮಾರು ಎರಡು ವಾರಗಳ ನಂತರ, ರೆಡ್ಡಿಟ್ ಮತ್ತು ಮಾಧ್ಯಮಗಳಲ್ಲಿ ವರದಿಯಾದಂತೆ ಅವರು ಕ್ರುಟ್ರಿಮ್ ಸಂಸ್ಥೆಯಲ್ಲಿ ಇರುವ ವಿಷಕಾರಿ ಕೆಲಸದ ಒತ್ತಡದಿಂದ( toxic work culture) ಸಾವಿಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಿಖಿಲ್ ಸೋಮವಂಶಿ ಸ್ವಲ್ಪ ಸಮಯದ ನಂತರ, ಆಗಸ್ಟ್ 2024 ರಲ್ಲಿ ಕ್ರುಟ್ರಿಮ್ ಸಂಸ್ಥೆಗೆ ಉದ್ಯೋಗಕ್ಕೆ ಸೇರಿದ್ದರು. ಈ ಕ್ರುಟ್ರಿಮ್ ಸಂಸ್ಥೆಯೂ ಕ್ಯಾಬ್ ಸರ್ವೀಸ್ ನೀಡುವ ಓಲಾ ಸಂಸ್ಥೆಯ ಒಡೆತನದ ಸಹಸಂಸ್ಥೆಯಾಗಿದ್ದು, ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಸಂಸ್ಥೆಯಾಗಿದೆ. ಇದರಲ್ಲಿ ಯಂತ್ರ ಕಲಿಕೆ ಎಂಜಿನಿಯರ್ (machine learning engineer)ಆಗಿ ನಿಖಿಲ್ ಸೂರ್ಯವಂಶಿ ಕೆಲಸಕ್ಕೆ ಸೇರಿದ್ದರು.
9.30 GPA(Grade Point Average)ಹೊಂದಿದ್ದ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದ ನಿಖಿಲ್ ಸೂರ್ಯವಂಶಿ ಅವರ ಮೇಲೆ, ಅಮೆರಿಕ ಮೂಲದ ಸಂಸ್ಥೆಯ ವ್ಯವಸ್ಥಾಪಕ ರಾಜ್‌ಕಿರಣ್ ಪಾನುಗಂಟಿ ಅವರಿಂದ ತೀವ್ರ ಒತ್ತಡವಿತ್ತು ಎಂದು ಮಾಜಿ ಉದ್ಯೋಗಿಗಳು ಆರೋಪಿಸಿದ್ದಾರೆ. ರಾಜ್‌ಕಿರಣ್ ಪಾನುಗಂಟಿ ಅವರ ನಡವಳಿಕೆಯಿಂದಾಗಿ ರಾಜೀನಾಮೆ ನೀಡಿದ ಹಲವಾರು ಮಾಜಿ ಸಹೋದ್ಯೋಗಿಗಳ ಕೆಲಸದ ಜವಾಬ್ದಾರಿಗಳ ಹೊರೆಯನ್ನು ನಿಖಿಲ್ ಸೂರ್ಯವಂಶಿ ಮೇಲೆ ಹೇರಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.
ರೆಡ್ಡಿಟ್ ಪೋಸ್ಟ್‌ನಲ್ಲಿ, 'ಕಿರ್ಗವಾಕುಟ್ಜೊ' (Kirgawakutzo) ಎಂಬ ಬಳಕೆದಾರರೊಬ್ಬರು ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಪಾನುಗಂಟಿ ಹೊಸದಾಗಿ ನೇಮಕವಾಗಿ ಸಂಸ್ಥೆಗೆ ಬಂದ ಉದ್ಯೋಗಿಗಳ ಮೇಲೆ ಕೆಟ್ಟ ಭಾಷೆಯನ್ನು ಬಳಸುತ್ತಾರೆ. ಸಂಸ್ಥೆಯಲ್ಲಿ ಉಸಿರುಕಟ್ಟಿಸುವ ವಾತಾವರಣವನ್ನು ನಿರ್ಮಿಸುತ್ತಾರೆ. ಅವರು ಹಲವಾರು ತಂಡಗಳ ರಾಜೀನಾಮೆಗೆ ಕಾರಣವಾದ ವಿಷಕಾರಿ ಕೆಲಸದ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ರೆಡಿಟ್ ಬಳಕೆದಾರರೊಬ್ಬರು ಆರೋಪಿಸಿದ್ದಾರೆ.
ಆದರೆ ನಿಖಿಲ್ ಸೂರ್ಯವಂಶಿ ಅವರ ಸಾವಿನಿಂದ ಕಂಪನಿಗೆ ತೀವ್ರ ಬೇಸರವಾಗಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದೆ ಎಂದು ಕ್ರುಟ್ರಿಮ್ ವಕ್ತಾರರು ತಿಳಿಸಿದ್ದಾರೆ. ಅಲ್ಲದೇ ಘಟನೆ ನಡೆದ ವೇಳೆ ಸೋಮವಂಶಿ ರಜೆಯಲ್ಲಿದ್ದರು ಎಂದು ಕ್ರುಟ್ರಿಮ್ ವಕ್ತಾರರು ತಿಳಿಸಿದ್ದಾರೆ.
ನಿಖಿಲ್ ಸೂರ್ಯವಂಶಿ ಏಪ್ರಿಲ್ 8 ರಂದು ತಮ್ಮ ಮ್ಯಾನೇಜರ್‌ಗೆ ಕರೆ ಮಾಡಿ, ತಮಗೆ ವಿಶ್ರಾಂತಿ ಬೇಕು ಎಂದು ತಿಳಿಸಿದರು, ಮತ್ತು ತಕ್ಷಣವೇ ಅವರಿಗೆ ವೈಯಕ್ತಿಕ ರಜೆ ನೀಡಲಾಯಿತು. ನಂತರ, ಏಪ್ರಿಲ್ 17 ರಂದು, ಅವರು ಹುಷಾರಾಗಿದ್ದಾರೆ ಹಾಗೂ ಹೆಚ್ಚುವರಿ ವಿಶ್ರಾಂತಿಯಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು, ಅದಕ್ಕೆ ಅನುಗುಣವಾಗಿ ಅವರ ರಜೆಯನ್ನು ವಿಸ್ತರಿಸಲಾಯಿತು ಎಂದು ಕಂಪನಿಯು ಇಮೇಲ್ ಮೂಲಕ ತಿಳಿಸಿದೆ. ಆದರೆ ಎಂಜಿನಿಯರ್ ಸಾವಿನ ಸುದ್ದಿ ತಿಳಿದ ನಂತರವೂ ಕ್ರುಟ್ರಿಮ್‌ನ ಮ್ಯಾನೇಜರ್ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸುತ್ತಲೇ ಇದ್ದರು ಎಂದು ರೆಡ್ಡಿಟ್ ಬಳಕೆದಾರ 'ಕಿರ್ಗವಾಕುಟ್ಜೊ' ಆರೋಪಿಸಿದ್ದಾರೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಲವು ಕ್ರುಟ್ರಿಮ್ ಉದ್ಯೋಗಿಗಳು, ತಮ್ಮ ಮ್ಯಾನೇಜರ್ ಆಕ್ರಮಣಕಾರಿ ಮತ್ತು ಕೀಳಾಗಿ ವರ್ತಿಸುತ್ತಾರೆ, ಸಾಮಾನ್ಯವಾಗಿ ಕಿರಿಯ ಉದ್ಯೋಗಿಗಳನ್ನು ಕೀಳಾಗಿ ಕಾಣುವ ಮತ್ತು ಅವರನ್ನು ಅಸಮರ್ಥರೆಂದು ಹಣೆಪಟ್ಟಿ ಕಟ್ಟುವ ದೀರ್ಘಕಾಲದ ಇತಿಹಾಸ ಹೊಂದಿದ್ದಾರೆಂದು ಆರೋಪಿಸಿದ್ದಾರೆ ಎಂದು ಕಿರ್ಗವಾಕುಟ್ಜೊ ವಿವರಿಸಿದ್ದಾರೆ.
ಅಂಗ್ಲ ವೆಬ್‌ಸೈಟ್ ಬಿಸಿನೆಸ್ ಸ್ಟ್ಯಾಂಡರ್ಡ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ರುಟ್ರಿಮ್‌ನ ಮಾಜಿ ಉದ್ಯೋಗಿಯನ್ನು ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಉದ್ಯೋಗಿಗಳ ಈ ಆರೋಪಗಳು ನಿಜ ಎಂಬುದನ್ನು ದೃಢಪಡಿಸುತ್ತದೆ. ತೀವ್ರವಾದ ಕೆಲಸದ ಒತ್ತಡದಿಂದಾಗಿ ಮತ್ತೊಂದು ಉದ್ಯೋಗದ ಅವಕಾಶವಿಲ್ಲದಿದ್ದರೂ ಸಂಸ್ಥೆಗೆ ರಾಜೀನಾಮೆ ನೀಡಿದ್ದೇನೆ ಮತ್ತು ಅಲ್ಲಿನ ಕೆಲಸ ಸಾವಿನ ಭಾವನೆಯನ್ನು ನೆನಪಿಸುತ್ತದೆ ಎಂದು ಕ್ರುಟ್ರಿಮ್‌ನಲ್ಲಿ ಕೆಲಸ ಮಾಡಿದ್ದ ಉದ್ಯೋಗಿಯೊಬ್ಬರು ಹೇಳಿಕೊಂಡಿದ್ದಾಗಿ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.
ರಾಜ್‌ಕಿರಣ್ ಅವರಿಗೆ ಜನ ನಿರ್ವಹಣಾ ಕೌಶಲ್ಯ ಗೊತ್ತಿಲ್ಲ. ಅವರು ಉದ್ಯೋಗಿಗಳ ಮೇಲೆ ಕೂಗಾಡುತ್ತಾರೆ ಮತ್ತು ಕಣ್ಮರೆಯಾಗುತ್ತಾರೆ. ಸಭೆಗಳಲ್ಲಿ ಅವರು ನಡೆಸುವ ಮೌಖಿಕ ನಿಂದನೆ ಆಘಾತಕಾರಿಯಾಗಿತ್ತು ಎಂದು ಮ್ಯಾನೇಜರ್ ರಾಜ್‌ಕಿರಣ್ ಪಾನುಗಂಟಿ ಅವರೊಂದಿಗೆ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಮಾಜಿ ಉದ್ಯೋಗಿ ಹೇಳಿರುವುದಾಗಿ ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕ್ರುಟ್ರಿಮ್ ಸಂಸ್ಥೆಯ ಈ ಉದ್ಯೋಗಿಯ ಸಾವು ಕೆಲ ತಿಂಗಳ ಹಿಂದಷ್ಟೇ ನಡೆದ ಅರ್ನ್ಸ್ಟ್ & ಯಂಗ್‌ನಲ್ಲಿ(Ernst & Young) ಕೆಲಸ ಮಾಡುತ್ತಿದ್ದ 26 ವರ್ಷದ ಉದ್ಯೋಗಿಯಾಗಿದ್ದ ಅನ್ನಾ ಸೆಬಾಸ್ಟಿಯನ್ ಅವರ ಸಾವನ್ನು ನೆನಪಿಸುತ್ತದೆ ಅನ್ನಾ ಅವರು ಹೃದಯಾಘಾತದಿಂದ ಬಳಲುತ್ತಿದ್ದರು. ಜೊತೆಗೆ ಅವರ ಕುಟುಂಬವು ಅನ್ನಾ ಅವರಿಗೆ ತೀವ್ರವಾದ ಕೆಲಸದ ಒತ್ತಡ ಮತ್ತು ಅತಿಯಾದ ಕೆಲಸದ ಸಮಯ ಇತ್ತೆಂದು ಹೇಳಿದ್ದರು. ಹೇಳುತ್ತದೆ.


