ಮಂಡ್ಯದಲ್ಲಿ ಮದುವೆಯಾದ ಮೂರೇ ದಿನಕ್ಕೆ ಸಾಫ್ಟ್‌ವೇರ್ ಇಂಜಿನಿಯರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜಾರ್ಖಂಡ್ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಶಶಾಂಕ್, ಜ್ವರದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಂಡ್ಯ (ಮಾ.05): ಸಾಫ್ಟ್‌ವೇರ್ ಇಂಜಿನಿಯರ್ ಕೆಲಸ ಮಾಡುತ್ತಾ ಕೈತುಂಬಾ ಸಂಬಳ ಪಡೆಯುತ್ತಾ ಸಂಸಾರದ ಕನಸು ಕಾಣುತ್ತಿದ್ದ ಮಂಡ್ಯದ ಗಂಡು ಶಶಾಂಕ್ ಕಳೆದ ಮೂರು ದಿನಗಳ ಹಿಂದಷ್ಟೇ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದನು. ಆದರೆ, ಸಣ್ಣದಾಗಿ ಜ್ವರ ಬಂದಿದೆ ಎಂದು ಮಲಗಿದ್ದ ಶಶಾಂಕ್ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಇದೀಗ ತಾಳಿ ಕಟ್ಟಿಸಿಕೊಂಡ ಯುವತಿ 3 ದಿನಕ್ಕೆ ಮುತ್ತೈದೆತನವನ್ನು ಕಳೆದುಕೊಳ್ಳುವಂತಾಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಕಳೆದ 3 ದಿನದ ಹಿಂದೆ ಹಸೆಮಣೆ ಏರಿದ್ದ ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಶಶಾಂಕ್ (28) ಮೃತಪಟ್ಟ ನೂತನ ವರ. ಶಶಾಂಕ್ ಅವರು ಕೆ.ಆರ್. ಪೇಟೆ ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಅವರ ಪುತ್ರನಾಗಿದ್ದರು. ಕಳೆದ ಭಾನುವಾರವಷ್ಟೇ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದನು. ಜಾರ್ಖಂಡ್ ಮೂಲದ ಯುವತಿಯನ್ನ ಪ್ರೀತಿಸಿ, ಎರಡೂ ಮನೆಯವರನ್ನು ಒಪ್ಪಿಸಿ ಮದುವೆ ಮಾಡಿಕೊಂಡಿದ್ದನು. ಆದರೆ, ನಿನ್ನೆ ಹೃದಯಾಘಾತದಿಂದ ದಿಢೀರ್ ಸಾವಿಗೀಡಾಗಿದ್ದಾನೆ. ಇಂದು ಕೆ.ಆರ್.ಪೇಟೆಯಲ್ಲಿ ಮೃತ ಶಶಾಂಕ್‌ನ ಅಂತ್ಯಸಂಸ್ಕಾರ ನೆರವೇರಲಿದೆ.
ಶಶಾಂಕ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದನು. ಅದ್ಧೂರಿಯಾಗಿ ಜೀವನ ಮಾಡುವುದಕ್ಕೆ ಅಪ್ಪನ ಆಸ್ತಿಯೂ ಇದ್ದು, ಚೆನ್ನಾಗಿ ಓದಿಕೊಂಡಿದ್ದರಿಂದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಕೈತುಂಬಾ ಹಣ ಸಂಪಾದನೆ ಮಾಡುತ್ತಿದ್ದನು. ಆದರೆ, ತಾನು ಕೆಲಸ ಮಾಡುವ ಸ್ಥಳದಲ್ಲಿಯೇ ಜಾರ್ಖಂಡ್ ಮೂಲದ ಯುವತಿ ಅಷ್ಣಾ ಅವರನ್ನು ಪ್ರೀತಿ ಮಾಡಿದ್ದನು. ಬಹುದಿನಗಳ ಪ್ರೀತಿಯ ಬಳಿಕ ಎರಡೂ ಮನೆಯವರನ್ನು ಒಪ್ಪಿಸಿ ಕಳೆದ ಭಾನುವಾರ ಮೈಸೂರಿನ ರೆಸಾರ್ಟ್ ಒಂದರಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದನು.
ಇದನ್ನೂ ಓದಿ: ಜೈಲುಪಾಲಾದ ಡಿಜಿಪಿ ಮಲ ಮಗಳು ನಟಿ ರನ್ಯಾಗೂ ಚಿಕ್ಕಮಗಳೂರಿಗೂ ನಂಟೇನು? ಚಿನ್ನ ಎಲ್ಲಿಟ್ಟಿದ್ದಳು ಗೊತ್ತಾ?
ಆದರೆ, ಮದುವೆ ದಿನವೂ ಶಶಾಂಕ್ ಜ್ವರದಿಂದ ಬಳುತ್ತಿದ್ದನು. ಜ್ವರದ ನಡುವೆಯೂ ಮದುವೆ ಕಾರ್ಯಕ್ರಮವಾಗಿದ್ದರಿಂದ ಔಷಧವನ್ನು ಸೇವಿಸಿ ಮಗ್ಯಾನೇಜ್ ಮಾಡಿದ್ದನು. ಆದರೆ, ಮದುವೆ ಕಾರ್ಯದಲ್ಲಿ ತುಸು ಹೆಚ್ಚಾಗಿಯೇ ಬಳಲಿದ್ದನು. ಈ ವಿಚಾರವನ್ನು ಮನೆಯವರಿಗೆ ಬಿಟ್ಟು ಸ್ನೇಹಿತರಿಗೆ ಹೇಳಿಕೊಂಡಿದ್ದನು. ಎಲ್ಲ ಮದುವೆ ಕಾರ್ಯಗಳನ್ನು ಮುಗಿಸಿಕೊಂಡು ನಿನ್ನೆ ಬೆಂಗಳೂರಿನ ಮನೆಗೆ ಬಂದಿದ್ದಾರೆ. ಆದರೆ, ನಿನ್ನೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಮಗನನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆಗೆ ಹೋಗುವಷ್ಟರಲ್ಲಾಗಲೇ ಶಶಾಂಕ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಶಶಾಂಕ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಪ್ರೀತಿಸಿ ಮದುವೆಯಾದ ಹುಡುಗ 3 ದಿನಕ್ಕೆ ಜೀವ ಬಿಟ್ಟಿದ್ದರಿಂದ ಯುವತಿಯ ದುಃಖ ಕಟ್ಟೆಯೊಡೆದಿದೆ.
