ಮೋದಿಗೆ ಗಡಿಯಲ್ಲಿ ರೋಬೋಟ್ ಬಳಕೆ ವಿವರಿಸಿದ್ದ ಮೈಸೂರು ಟೆಕ್ಕಿ ಕುಟುಂಬ ಸಮೇತ ದಾರುಣ ಅಂತ್ಯ
ಗಡಿಯಲ್ಲಿ ರೋಬೋಟೋ ನಿಯೋಜನೆ ಕುರಿತು ಪ್ರಧಾನಿ ಮೋದಿ ಭೇಟ ಮಾಡಿ ವಿವರಣೆ ನೀಡಿದ್ದ ಮೈಸೂರಿನ ಹರ್ಷವರ್ಧನ್ ಕಿಕ್ಕೇರಿ ಜನಪ್ರಿಯ ಹಾಗೂ ಅನುಭವಿ ಟೆಕ್ಕಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಅಮೆರಿಕದ ವಾಷಿಂಗ್ಟನ್‌ನಲ್ಲಿ ಮೈಸೂರು ಮೂಲದ ಟೆಕ್ ಉದ್ಯಮಿ ಹರ್ಷವರ್ಧನ ಎಸ್. ಕಿಕ್ಕೇರಿ ಅವರು ಪತ್ನಿ ಶ್ವೇತಾ ಪನ್ಯಂ ಮತ್ತು 14 ವರ್ಷದ ಮಗನಿಗೆ ಗುಂಡು ಹಾರಿಸಿ ನಂತರ ತಾವು ಬದುಕು ಅಂತ್ಯಗೊಳಿಸಿದ್ದಾರೆ.

ಮೊದಲು ಪತ್ನಿ, ನಂತರ ಮಗ, ಕೊನೆಗೆ ತಾನು
ಮೈಸೂರು ಮೂಲದ ಹರ್ಷವರ್ಧನ ಕಿಕ್ಕೇರಿ ಟೆಕ್ ಉದ್ಯಮದಲ್ಲಿ ಸಾಮ್ರಾಜ್ಯ ಕಟ್ಟಿದ ಪ್ರತಿಭಾನ್ವಿತ. ರೋಬೋಟಿಕ್ ವಿಚಾರದಲ್ಲಿ ಅಪಾರ ಅನುಭವ ಹೊಂದಿದ್ದ ಹರ್ಷವರ್ಧನ್ ಪ್ರಧಾನಿ ಮೋದಿ ಭೇಟಿಯಾಗಿ ಗಡಿಯಲ್ಲಿ ರೋಬೋಟ್ ನಿಯೋಜನೆ ಕುರಿತು ವಿವರಣೆ ನೀಡಿದ್ದರು. ಆದರೆ ಏಪ್ರಿಲ್ 24 ರಂದು ಅಮೆರಿಕದ ತಮ್ಮ ಮನೆಯಲ್ಲಿ ಹರ್ಷವರ್ಧನ್ ತಮ್ಮ ಪತ್ನಿ ಮತ್ತು ಮಗನನ್ನು ಕೊಂದು ನಂತರ ಬಳಿಕ ತಾವು ಬದುಕು ಅಂತ್ಯಗೊಳಿಸಿದ್ದಾರೆ.
ಒಬ್ಬ ಮಗ ಮನೆಯಲ್ಲಿ ಇಲ್ಲದ್ದರಿಂದ ಬಚಾವಾದ
ಪೊಲೀಸರ ಪ್ರಕಾರ, ದಂಪತಿಯ ಇನ್ನೊಬ್ಬ ಮಗ ಮನೆಯಲ್ಲಿ ಇಲ್ಲದ್ದರಿಂದ ಬದುಕುಳಿದಿದ್ದಾನೆ. ನೆರೆಹೊರೆಯವರು ಗುಂಡಿನ ಶಬ್ದ ಕೇಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೆಲವೇ ಕ್ಷಣದಲ್ಲಿ ಸ್ಥಳಕ್ಕೆ ಆಗಮಿಸಿದ ವೇಳೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸುದ್ದಿ ಭಾರತೀಯರಿಗೆ ತೀವ್ರ ಆಘಾತ ನೀಡಿದೆ. ರೋಬೋಟಿಕ್ಸ್ ಜಗತ್ತಿನಲ್ಲಿ ಹೊಸ ಸಾಧನೆ ಮಾಡಿದ್ದ ಪ್ರತಿಭಾನ್ವಿತ ಹರ್ಷವರ್ಧನ್, ಇಡೀ ಕುಟುಂಬದ ಜೊತೆ ದಾರುಣ ಅಂತ್ಯಕಂಡಿದ್ದು ದುರಂತ.
ಹರ್ಷವರ್ಧನ ಕಿಕ್ಕೇರಿ ಯಾರು?
ಹರ್ಷವರ್ಧನ ಕಿಕ್ಕೇರಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನವರು. ಅವರು ಮೈಸೂರಿನಲ್ಲಿರುವ ರೊಬೊಟಿಕ್ಸ್ ಸ್ಟಾರ್ಟ್‌ಅಪ್ ಹೊಲೊವರ್ಲ್ಡ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿದ್ದರು. ಅವರ ಪತ್ನಿ ಶ್ವೇತಾ ಪನ್ಯಂ ಸಹ-ಸಂಸ್ಥಾಪಕಿ. ಹರ್ಷವರ್ಧನ್ ಹಲವು ಪ್ರತಿಷ್ಠಿತ ಸ್ಟಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮೈಸೂರಿನಲ್ಲಿ ಉಳಿದುಕೊಂಡಿದ್ದರು. ಆದರೆ ಮೈಸೂರಿನಲ್ಲ ಹರ್ಷವರ್ಧನ್ ಸಂಬಂಧಿಕರು ಯಾರೂ ಇಲ್ಲ ಎಂದು ಮೂಲಗಳು ಹೇಳುತ್ತಿವೆ.
ಕೋವಿಡ್ ಸಮಯದಲ್ಲಿ ಭಾರತಕ್ಕೆ ಬಂದಿದ್ದರು
2017 ರಲ್ಲಿ ಅವರು ಅಮೆರಿಕದಿಂದ ಭಾರತಕ್ಕೆ ಬಂದು ಹೊಲೊವರ್ಲ್ಡ್ ಅನ್ನು ಪ್ರಾರಂಭಿಸಿದರು. ಆದರೆ, ಕೋವಿಡ್ ಸಮಯದಲ್ಲಿ ಕಂಪನಿ ಮುಚ್ಚಬೇಕಾಯಿತು ಮತ್ತು ನಂತರ ಹರ್ಷವರ್ಧನ ಅಮೆರಿಕಕ್ಕೆ ಹಿಂತಿರುಗಿದ್ದರು. ಭಾರತದಿಂದ ಹಿಂದಿರುಗುವ ವೇಳೆ ಭಾರಿ ನಷ್ಟ ಅನುಭವಿಸಿದ್ದರು. ನಷ್ಟ ಸರಿದೂಗಿಸಲು ಅಮೆರಿಕಕ್ಕೆ ಅನಿವಾರ್ಯವಾಗಿ ಹಿಂದಿರುಗಿದ್ದರು.
ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಮಾಡಿದ್ದರು
ತಂತ್ರಜ್ಞಾನದಲ್ಲಿ ಪರಿಣತರಾಗಿದ್ದ ಹರ್ಷವರ್ಧನ ಅವರು ಮೈಕ್ರೋಸಾಫ್ಟ್‌ನಂತಹ ದೈತ್ಯ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಗಡಿ ಭದ್ರತೆಯಲ್ಲಿ ರೋಬೋಟ್‌ಗಳ ಬಳಕೆಯ ಕುರಿತು ಪ್ರಸ್ತುತಿ ನೀಡಿದ್ದರು. ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಹಲವು ಅಧಿಕಾರಿಗಳ ಈ ಭೇಟಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಗಡಿಯಲ್ಲಿ ರೋಬೋಟಿಕ್ಸ್ ನಿಯೋಜನೆ ಕುರಿತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಯೋಜನೆ ಕಾರ್ಯಗರ್ತಗೊಳಿಸಲು ಮತ್ತಷ್ಟು ತಂತ್ರಜ್ಞಾನ ಅಭಿವೃದ್ಧಿ ಕುರಿತು ಹರ್ಷವರ್ಧನ್ ಹೇಳಿದ್ದರು.
ಕೊಲೆಯ ಕಾರಣ ಇನ್ನೂ ತಿಳಿದುಬಂದಿಲ್ಲ
ಕಿಂಗ್ ಕೌಂಟಿ ಶೆರಿಫ್ ಕಚೇರಿಯ ಪ್ರಕಾರ, ಕೊಲೆಯ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ತನಿಖೆ ಮುಂದುವರೆದಿದೆ. ನೆರೆಹೊರೆಯವರು ಈ ಕುಟುಂಬ ಶಾಂತ ಮತ್ತು ಸ್ನೇಹಪರವಾಗಿತ್ತು ಆದರೆ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ. ಆರ್ಥಿಕ ಸಮಸ್ಯೆ ಈ ಘಟನಗೆ ಕಾರವಾಗಿರಬಹುದು ಅನ್ನೋ ಅನುಮಾನಗಳು ವ್ಯಕ್ತವಾಗಿದೆ.
ವೈಯಕ್ತಿಕ ಸಮಸ್ಯೆಗಳೇ ಕಾರಣ?
ಈ ದುರಂತಕ್ಕೆ ಕೌಟುಂಬಿಕ ಕಲಹ, ಮಾನಸಿಕ ಸಮಸ್ಯೆ ಅಥವಾ ಆರ್ಥಿಕ ಒತ್ತಡ ಕಾರಣವೇ ಎಂಬುದು ತನಿಖೆಯ ವಿಷಯ. ಟೆಕ್ ಸ್ಟಾರ್ಟ್‌ಅಪ್‌ನ ವೈಫಲ್ಯ ಮತ್ತು ಅಮೆರಿಕಕ್ಕೆ ಹಿಂತಿರುಗಿದ ನಂತರದ ಪರಿಸ್ಥಿತಿಗಳು, ಆರ್ಥಿಕ ಸಮಸ್ಯೆ ಸೇರಿದಂತೆ ಇತರ ಕಾರಣಗಳು ಈ ಗಂಭೀರ ನಿರ್ಧಾರಕ್ಕೆ ಕಾರವಾಗಿರಬಹುದು ಎಂದು ಹೇಳಲಾಗುತ್ತಿದೆ.