ಪ್ರಧಾನಿ ಮೋದಿ ಲಕ್ನೋ ಭೇಟಿಯ ನಂತರ, ಕಾರ್ಯಕ್ರಮದ ವೇದಿಕೆಯನ್ನು ಅಲಂಕರಿಸಲು ತಂದಿದ್ದ ಹೂವಿನ ಕುಂಡಗಳನ್ನು ಸ್ಥಳೀಯರು ಕದ್ದೊಯ್ದಿದ್ದಾರೆ. ಸ್ಕೂಟರ್ ಮತ್ತು ಬೈಕ್‌ಗಳಲ್ಲಿ ಬಂದು ಜನರು ಹೂವಿನ ಗಿಡಗಳನ್ನು ಕೊಂಡೊಯ್ಯುತ್ತಿರುವ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.  

ಲಕ್ನೋ (ಡಿ.26): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನಾಚರಣೆಯ ಅಂಗವಾಗಿ 'ರಾಷ್ಟ್ರ ಪ್ರೇರಣಾ ಸ್ಥಳ' ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಉತ್ತರ ಪ್ರದೇಶದ ಲಕ್ನೋಗೆ ಭೇಟಿ ನೀಡಿದ್ದರು. ಆದರೆ, ಪ್ರಧಾನಿ ಕಾರ್ಯಕ್ರಮ ಮುಗಿಸಿ ನಿರ್ಗಮಿಸುತ್ತಿದ್ದಂತೆಯೇ ಅಲ್ಲಿನ ಸ್ಥಳೀಯರು ತೋರಿದ ವರ್ತನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹಾಗೂ ಟೀಕೆಗೆ ಗುರಿಯಾಗಿದೆ.

ಸ್ಕೂಟರ್, ಬೈಕ್‌ಗಳಲ್ಲಿ ಬಂದು ಹೂಕುಂಡಗಳ ಕಳ್ಳತನ

ಪ್ರಧಾನಿ ಮತ್ತು ಗಣ್ಯರ ಸ್ವಾಗತಕ್ಕಾಗಿ ರಸ್ತೆ ಬದಿಯಲ್ಲಿ ಸಾಲಾಗಿ ಜೋಡಿಸಿದ್ದ ಸಾವಿರಾರು ವರ್ಟಿಕಲ್ ಹೂವಿನ ಕುಂಡಗಳನ್ನು ಸ್ಥಳೀಯರು ಕೊಂಡೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಹಾಗೂ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಹೂವಿನ ಕುಂಡಗಳಷ್ಟೇ ಅಲ್ಲದೆ, ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರ ಕಟೌಟ್‌ಗಳನ್ನು ಸಹ ಕೆಲವರು ಬಿಡದೆ ಹೊತ್ತೊಯ್ದಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಬಂದವರು ತಮಗೆ ಎಷ್ಟು ಸಾಧ್ಯವೋ ಅಷ್ಟು ಕುಂಡಗಳನ್ನು ಲೇಡಿಟ್ಟುಕೊಂಡು ಪರಾರಿಯಾಗುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.

ಪ್ರಶ್ನಿಸಿದರೂ ಕೇಳ್ತಾ ಇಲ್ಲ ಜನರು: ಆರ್ಥಿಕವಾಗಿ ಸಬಲರಿದ್ದರೂ ಲೂಟಿ!

ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ 'ನೀವು ಯಾಕೆ ಇದನ್ನು ಒಯ್ಯುತ್ತಿದ್ದೀರಿ? ನಿಮ್ಮ ವಾಹನದ ನಂಬರ್ ನೋಟ್ ಆಗಿದೆ' ಎಂದು ಎಚ್ಚರಿಸಿದರೂ ಜನರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹೂಕುಂಡಗಳನ್ನು ಕದ್ದೊಯ್ಯುತ್ತಿದ್ದಾರೆ. ವಿಶೇಷವೆಂದರೆ, ಹೀಗೆ ಹೂಕುಂಡಗಳನ್ನು ಕದ್ದವರಲ್ಲಿ ಬಡವರಿಗಿಂತ ಮಧ್ಯಮ ವರ್ಗದ ಮತ್ತು ಸುಸ್ಥಿತಿಯಲ್ಲಿರುವವರೇ ಹೆಚ್ಚಾಗಿದ್ದರು. ಕೆಲವರು ತಮ್ಮ ಮಕ್ಕಳನ್ನೂ ಜೊತೆಯಲ್ಲಿ ಕರೆತಂದು ಈ 'ಹೂಕುಂಡ ಲೂಟಿ'ಯಲ್ಲಿ ಭಾಗಿಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Scroll to load tweet…

4,000ಕ್ಕೂ ಹೆಚ್ಚು ಕುಂಡಗಳ ನಾಪತ್ತೆ

ಲಕ್ನೋ ಅಭಿವೃದ್ಧಿ ಪ್ರಾಧಿಕಾರದ (LDA) ಅಧಿಕಾರಿಗಳ ಪ್ರಕಾರ, ಸೌಂದರ್ಯೀಕರಣಕ್ಕಾಗಿ ಇಟ್ಟಿದ್ದ ಸುಮಾರು 4,000ಕ್ಕೂ ಹೆಚ್ಚು ಹೂವಿನ ಕುಂಡಗಳು ಕಳುವಾಗಿವೆ. ಪೊಲೀಸರು ಸ್ಥಳದಲ್ಲಿದ್ದರೂ ಜನರನ್ನು ತಡೆಯಲು ಸಾಧ್ಯವಾಗಿಲ್ಲ ಎಂಬುದು ವಿಪರ್ಯಾಸ. ಈಗ ವಿಡಿಯೋ ಆಧಾರದ ಮೇಲೆ ಕಳ್ಳತನ ಮಾಡಿದವರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ನವಾಬರ ನಗರದ ನಾಗರಿಕ ಪ್ರಜ್ಞೆ ಎಲ್ಲಿ?' ನೆಟ್ಟಿಗರ ಕಿಡಿ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇಂಟರ್ನೆಟ್‌ನಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಲಕ್ನೋದ ಅಬ್ದ್ ಮತ್ತು ಸಂಸ್ಕೃತಿ ಎಲ್ಲಿ ಹೋಯಿತು?' ಎಂದು ಅನೇಕರು ಪ್ರಶ್ನಿಸಿದ್ದಾರೆ. 'ಸರ್ಕಾರಿ ಆಸ್ತಿಯನ್ನು ಲೂಟಿ ಮಾಡುವುದು ಹೆಮ್ಮೆಯ ವಿಷಯವೇ? ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಒಟ್ಟಿನಲ್ಲಿ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸ್ಮಾರಕದ ಉದ್ಘಾಟನೆಯ ದಿನವೇ ನಡೆದ ಈ ಘಟನೆ ಲಕ್ನೋದ ಆಡಳಿತಕ್ಕೆ ಮುಜುಗರ ತಂದಿದೆ.