ಬರೋಬ್ಬರಿ 8 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ ರೋಹಿತ್ ಶರ್ಮಾ, ಸಿಕ್ಕಿಂ ವಿರುದ್ಧ ಸ್ಪೋಟಕ ಶತಕ ಸಿಡಿಸಿದರು. ಪಂದ್ಯದ ವೇಳೆ ಅಭಿಮಾನಿಯೊಬ್ಬರು ವಡಾ ಪಾವ್ ಆಫರ್ ಮಾಡಿದಾಗ, 2027ರ ವಿಶ್ವಕಪ್‌ಗಾಗಿ ಫಿಟ್ನೆಸ್ ಕಡೆ ಗಮನ ಹರಿಸುತ್ತಿರುವ ಅವರು ನಯವಾಗಿ ನಿರಾಕರಿಸಿದ ಘಟನೆ ವೈರಲ್ ಆಗಿದೆ.
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ, ಬರೋಬ್ಬರಿ 8 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡರು. ಇನ್ನು ತಾವಾಡಿದ ಮೊದಲ ವಿಜಯ್ ಹಜಾರೆ ಪಂದ್ಯದಲ್ಲೇ ಹಿಟ್‌ಮ್ಯಾನ್ ಖ್ಯಾತಿಯರ ರೋಹಿತ್ ಶರ್ಮಾ, ಸಿಕ್ಕಿಂ ಎದುರು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದರು. ಸಿಕ್ಕಿಂ ಎದುರು ರೋಹಿತ್ ಶರ್ಮಾ ಕೇವಲ 94 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 9 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಆಕರ್ಷಕ 155 ರನ್ ಸಿಡಿಸಿ ಮಿಂಚಿದರು. ರೋಹಿತ್ ಶರ್ಮಾ ಅವರ ಈ ಅದ್ಭುತ ಬ್ಯಾಟಿಂಗ್ ನೆರವಿನಿಂದ ಸಿಕ್ಕಿಂ ಎದುರು ಮುಂಬೈ ತಂಡವು ಸುಲಭ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ವಡಾ ಪಾವ್ ತಿನ್ನಲು ಆಫರ್ ನೀಡಿದ ಅಭಿಮಾನಿ:
ಇನ್ನು ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಮುಂಬೈ ಹಾಗೂ ಸಿಕ್ಕಿಂ ನಡುವಿನ ಪಂದ್ಯದ ವೇಳೆಯಲ್ಲಿ ಒಂದು ತಮಾಷೆಯ ಘಟನೆಗೆ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಸಾಕ್ಷಿಯಾಯಿತು. ಬೌಂಡರಿ ಲೈನ್ ಬಳಿ ರೋಹಿತ್ ಶರ್ಮಾ ಕ್ಷೇತ್ರರಕ್ಷಣೆ ಮಾಡುವ ವೇಳೆಯಲ್ಲಿ, ಅವರನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಟೇಡಿಯಂಗೆ ಆಗಮಿಸಿದ್ದರು. ಈ ಪೈಕಿ ಓರ್ವ ಅಭಿಮಾನಿ ರೋಹಿತ್ ಶರ್ಮಾ ಅವರಿಗೆ ವಡಾ ಪಾವ್ ತಿನ್ನುತ್ತೀರಾ ಎಂದು ಕೇಳಿದ್ದಾರೆ. ಆಗ ರೋಹಿತ್ ಶರ್ಮಾ ನಸುನಗುತ್ತಾ ಕೈ ಮೇಲೆತ್ತಿ ಇಲ್ಲ ಎನ್ನುವಂತೆ ಸನ್ನೆ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫಿಟ್ನೆಸ್ ಕಡೆ ಗಮನ ಕೊಡುತ್ತಿರುವ ರೋಹಿತ್ ಶರ್ಮಾ:
ರೋಹಿತ್ ಶರ್ಮಾ ತಿನ್ನುವ ವಿಚಾರದಲ್ಲಿ ಎತ್ತಿದ ಕೈ. ತಮಗೆ ವಡಾಪಾವ್ ಅಂದ್ರೆ ಇಷ್ಟ ಎಂದು ಹಲವು ಸಂದರ್ಶನಗಳಲ್ಲಿ ರೋಹಿತ್ ಶರ್ಮಾ ಈ ಹಿಂದೆ ಹೇಳಿದ್ದರು. ಆದರೆ ಇದೀಗ ರೋಹಿತ್ ಶರ್ಮಾ ತಮ್ಮ ಫಿಟ್ನೆಸ್ ಕಡೆ ಹೆಚ್ಚು ಗಮನ ನೀಡಲು ಮುಂದಾಗಿದ್ದಾರೆ. ಈಗಾಗಲೇ ಭಾರತ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ, 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾ 10 ಕೆ.ಜಿ ತೂಕ ಕಳೆದುಕೊಂಡಿದ್ದರು. ಪರ್ಸನಲ್ ಕೋಚ್ ಅಭಿಷೇಕ್ ನಾಯರ್ ಅವರ ಜತೆಗೂಡಿ ರೋಹಿತ್ ಶರ್ಮಾ ಫಿಟ್ನೆಸ್ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಇದೇ ಕಾರಣಕ್ಕಾಗಿ ಇತ್ತೀಚೆಗಷ್ಟೇ ಯಶಸ್ವಿ ಜೈಸ್ವಾಲ್ ಅವರ ಬರ್ತ್‌ಡೇ ಸಂದರ್ಭದಲ್ಲಿ ಕೊಹ್ಲಿ ಕೇಕ್ ತಿನ್ನಲು ರೋಹಿತ್ ಅವರನ್ನು ಆಹ್ವಾನಿಸಿದ್ದರೂ, ಹಿಟ್‌ಮ್ಯಾನ್ ಕೇಕ್ ತಿನ್ನಲಿಲ್ಲ.
ದೇಸಿ ಕ್ರಿಕೆಟ್‌ನಲ್ಲೂ ರೋ-ಕೊ ಶತಕದಬ್ಬರ!
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಬ್ಬರದ ಆಟವಾಡುತ್ತಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, ಈಗ ದೇಸಿ ಕ್ರಿಕೆಟ್‌ನಲ್ಲೂ ಅಭೂತಪೂರ್ವ ಪ್ರದರ್ಶನ ಮುಂದುವರಿದಿದ್ದಾರೆ. ವಿಜಯ್ ಹಜಾರೆಯಲ್ಲಿ ಇಬ್ಬರೂ ಶತಕ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್‌ನಲ್ಲಿ ಆಂಧ್ರ ವಿರುದ್ಧ ಆಡಿದ ಡೆಲ್ಲಿಯ ವಿರಾಟ್ ಕೊಹ್ಲಿ ಆಕರ್ಷಕ ಶತಕ ಪೂರ್ಣಗೊಳಿಸಿದರು. ಅವರು 101 ಎಸೆತಕ್ಕೆ 133 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಆಂಧ್ರ 8 ವಿಕೆಟ್‌ಗೆ 298 ರನ್ ಸಿಡಿಸಿದರೆ, ಡೆಲ್ಲಿ ತಂಡ 37.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ ಗೆದ್ದಿತು.
ಜೈಪುರದಲ್ಲಿ ನಡೆದ ಸಿಕ್ಕಿಂ ವಿರುದ್ಧ ಪಂದ್ಯದಲ್ಲಿ ಮುಂಬೈನ ರೋಹಿತ್ 94 ಎಸೆತಕ್ಕೆ 155 ರನ್ ಸಿಡಿಸಿದರು. ಸಿಕ್ಕಿಂ 50 ಓವರಲ್ಲಿ 7 ವಿಕೆಟ್‌ಗೆ 236 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಮುಂಬೈಗೆ ರೋಹಿತ್ ಶತಕ ನೆರವಾಯಿತು. ತಂಡ 30.3 ಓವರ್‌ಗಳಲ್ಲೇ ಜಯಗಳಿಸಿತು.
150 ರನ್: ರೋಹಿತ್ ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ 9ನೇ ಬಾರಿ 150+ ರನ್ ಗಳಿಸಿದ್ದು, ವಿಶ್ವದಲ್ಲೇ ಜಂಟಿ ಗರಿಷ್ಠ. ಆಸ್ಟ್ರೇಲಿಯಾದ ವಾರ್ನರ್ ಕೂಡಾ 9 ಬಾರಿ ಈ ಸಾಧನೆ ಮಾಡಿದ್ದಾರೆ.


