ಎನ್​ಸಿಇಆರ್​​ಟಿ 8ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿನ ಭ್ರಷ್ಟಚಾರ’ ಎಂಬ ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ವ್ಯವಸ್ಥಿತ ಪಿತೂರಿ ಎಂದಿರುವ ನ್ಯಾಯಾಲಯ, ಈ ಅಧ್ಯಾಯವನ್ನು ಎಲ್ಲ ಪ್ರತಿಗಳಿಂದ ತೆಗೆದುಹಾಕಲು,  ಬೋಧನೆ ನಿಷೇಧಿಸಲು ಆದೇಶಿಸಿದೆ.

ವರದಿ- ಪ್ರಕಾಶ್​​ಗೌಡ್​ ಪಾಟೀಲ್​, ಏಷ್ಯಾನೆಟ್​ ಸುವರ್ಣ ನ್ಯೂಸ್​

Add Asianetnews Kannada as a Preferred SourcegooglePreferred

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಅಡಿಯಲ್ಲಿ 8ನೇ ತರಗತಿ ಹೊಸ ಪಠ್ಯದ ಸಮಾಜ ವಿಜ್ಞಾನ ಪುಸ್ತಕದ ಅಧ್ಯಾಯವೊಂದು ದೊಡ್ಡ ವಿವಾದವನ್ನು ಹುಟ್ಟು ಹಾಕಿದೆ. ‘ನ್ಯಾಯಾಂಗದಲ್ಲಿನ ಭ್ರಷ್ಟಚಾರ’ ಅಧ್ಯಾಯದ ಬಗ್ಗೆ ಇಂದು ಸುಪ್ರೀಂ ಕೋರ್ಟ್​ ಆಕ್ರೋಶ ಹೊರಹಾಕಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್​ ನೇತೃತ್ವದ ಪೀಠ ‘ನ್ಯಾಯಾಂಗ​ ವಿರುದ್ಧದ ಪಿತೂರಿ’ ಎಂದು ಕರೆದಿದ್ದಾರೆ. ಇದರ ನಡುವೆ ಕಾಂಗ್ರೆಸ್​ ಹಿರಿಯ ನಾಯಕ ಜೈರಾಮ್​ ರಮೇಶ್​ ಕೂಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಎನ್​​ಸಿಆರ್​ಟಿಗೆ ಸುಪ್ರೀಂ ಕೋರ್ಟ್​ ಹೇಳಿದ್ದೇನು?

8ನೇ ತರಗತಿ ಪುಸ್ತಕ ಪ್ರತಿ ಹಾರ್ಡ್​ ಕಾಪಿ, ಡಿಜಿಟಲ್ ಪ್ರತಿಗಳಿಂದಲೂ ಈ ಅಧ್ಯಾಯವನ್ನು ತೆಗೆದುಹಾಕಬೇಕು. ಸಾರ್ವಜನಿಕರಿಗೆ ಈ ಅಧ್ಯಾಯ ಎಲ್ಲಿಯೂ ಸಿಗದಂತೆ ಎಲ್ಲ ಮಾದರಿಯಿಂದ ತಕ್ಷಣವೇ ಅದನ್ನು ತಗೆದು ಹಾಕಬೇಕು ಎಂದು ಕೇಂದ್ರ, ರಾಜ್ಯ ಶಿಕ್ಷಣ ಇಲಾಖೆಗಳ ಜೊತೆಗೆ NCERTಗೆ ನಿರ್ದೇಶನ ನೀಡಿದೆ. ಈ ವಿಚಾರದಲ್ಲಿ ಯಾವುದೇ ವಿಳಂಬವನ್ನು ಸಹಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್​​ ತಿಳಿಸಿದೆ. ಇನ್ನು ಶಾಲೆಗಳಿಗೆ ಕಳುಹಿಸಿರುವ ಎಲ್ಲಾ ಪ್ರತಿಗಳನ್ನ ವಶಪಡಿಸಿಕೊಳ್ಳಬೇಕು. ಈ ಬಗ್ಗೆ ಔಪಚಾರಿಕ ಅನುಸರಣಾ ವರದಿ ಕೋರ್ಟ್​ಗೆ ಸಲ್ಲಿಸಬೇಕು. ಈ ಅಧ್ಯಾಯ ಇರುವ ಪುಸ್ತಕವನ್ನು ತಗೆದುಕೊಂಡು ಬೋಧನೆಯನ್ನು ಮಾಡುವಂತಿಲ್ಲ. ಪುಸ್ತಕ ಉತ್ಪಾದನೆ & ವಿತರಣೆಯ ಮೇಲೆ ಸಂಫೂರ್ಣ ನಿಷೇಧ ಮಾಡಬೇಕು. ಇನ್ನು ಈ ಅಧ್ಯಾಯವನ್ನು ರಚನೆ ಮಾಡಿದ ಮಂಡಳಿ, ಸದಸ್ಯರ ಹೆಸರನ್ನು ಕೋರ್ಟ್‌ಗೆ ಒದಗಿಸಬೇಕು. ಈ ಮಂಡಳಿಯು ನ್ಯಾಯಾಂಗದ ಘನತೆಯನ್ನು ಕುಗ್ಗಿಸಲು, ದುರ್ಬಲಗೊಳಿಸುವ ನಡೆ ಆಳವಾಗಿ & ಉತ್ತಮವಾಗಿ ಯೋಜಿಸಿ ಸಂಘಟಿತ ಪಿತೂರಿ ಮಾಡಿದ್ದಾರೆ. ಈ ನ್ಯಾಯಾಂಗದ ಬಗ್ಗೆ ರಚನೆಯಾಗಿರುವ ಅಧ್ಯಾಯದ ಬಗ್ಗೆ ಆಳವಾದ ತನಿಖೆ ಮಾಡಿ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್​​ ಖಡಕ್​ ಸೂಚನೆ ನೀಡಿದೆ.

8ನೇ ತರಗತಿ ಪುಸ್ತಕದಲ್ಲಿರುವ ವಿವಾದವೇನು?

ಎನ್‌ಸಿಇಆರ್‌ಟಿಯ 8ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ಪಾಠ ಅಳವಡಿಕೆ ಮಾಡಲಾಗಿದೆ. ನ್ಯಾಯಾಂಗದ ಪಾತ್ರವನ್ನು ಪ್ರಮುಖವಾಗಿದ್ದರೂ, ಅದರ ಬಗ್ಗೆ ಪ್ರಶಂಸಿಸದೇ ನ್ಯಾಯಾಂಗದ ಭ್ರಷ್ಟಾಚಾರ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ. ದೇಶದ ಕೋರ್ಟ್‌ಗಳಲ್ಲಿರುವ ಬಾಕಿ ಪ್ರಕರಣ ಅಂಕಿ ಅಂಶವನ್ನು ಅಧ್ಯಾಯದಲ್ಲಿ ಒದಗಿಸಲಾಗಿದೆ. ನ್ಯಾಯಾಧೀಶರ ಕೊರತೆ, ಸಂಕೀರ್ಣ ಕಾನೂನುಗಳ ಉಲ್ಲೇಖ ಮಾಡಲಾಗಿದೆ. ಸುಪ್ರೀಂ ಕೋರ್ಟ್​​ನಲ್ಲಿ ಸುಮಾರು 81 ಸಾವಿರ ಪ್ರಕರಣ ಬಾಕಿ ಇವೆ. ಭಾರತದ ಹೈಕೋರ್ಟ್​​ಗಳಲ್ಲಿ 62,40,000 ಪ್ರಕರಣ ಬಾಕಿ ಉಳಿದಿವೆ ಹಾಗೂ ಜಿಲ್ಲಾ ಮತ್ತು ಅಧೀನ ಕೋರ್ಟ್​​ನಲ್ಲಿ 4.70 ಕೋಟಿ ಪ್ರಕರಣ ಬಾಕಿ ಇವೆ ಎಂಬ ಮಾಹಿತಿಯನ್ನು ತಿಳಿಸಲಾಗಿದೆ.

ಜೈರಾಮ್ ರಮೇಶ್ ಕಿಡಿ

ಎನ್​ಸಿಆರ್​ಟಿ ವಿರುದ್ಧ ಸುಪ್ರೀಂ ತರಾಟೆ ತೆಗೆದುಕೊಂಡ ಬೆನ್ನಲ್ಲೇ ಕಾಂಗ್ರೆಸ್​ ಹಿರಿಯ ನಾಯಕ ಜೈರಾಮ್​ ರಮೇಶ್​ ಟ್ವೀಟ್​ನಲ್ಲಿ ಕಿಡಿ ಕಾರಿದ್ದಾರೆ. NCERT ಪಠ್ಯಪುಸ್ತಕಗಳಲ್ಲಿ ನ್ಯಾಯಾಂಗದ ಬಗ್ಗೆ ವಿಮರ್ಶಾತ್ಮಕ ಉಲ್ಲೇಖಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಆಕ್ರೋಶ ಸಮರ್ಥನೀಯ. ನಿಜಕ್ಕೂ, ಕಳೆದ ದಶಕದಲ್ಲಿ NCERT ಪಠ್ಯಪುಸ್ತಕಗಳನ್ನು ಪುನಃ ಬರೆಯಲಾದ ರೀತಿ ನಾಚಿಕೆಗೇಡಿನ ಸಂಗತಿ. ಇದು RSS ನ ನೀಚ ಮತ್ತು ದುರುದ್ದೇಶಪೂರಿತ ಕೃತ್ಯ. ನಿಜಕ್ಕೂ, ಈ ಇಡೀ ತಂಡದ ತನಿಖೆ ನಡೆಯಬೇಕು ಎಂದು ಜೈರಾಮ್​ ರಮೇಶ್​ ವಾಗ್ದಾಳಿ ಮಾಡಿದ್ದಾರೆ.

ಒಟ್ಟಿನಲ್ಲಿ ಸುಪ್ರೀಂ ಕೋರ್ಟ್​ ಮಾತ್ರ ಎನ್​ಸಿಇಆರ್​​ಟಿ ವಿರುದ್ಧ ಕಿಡಿ ಕಾರಿ ತನಿಖೆ ಮಾಡಿ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದೆ. ಅಧ್ಯಾಯ ರಚಿಸಿದವರ ಮಾಹಿತಿ ನೀಡುವಂತೆ ಆದೇಶ ನೀಡಿದೆ.