ಬಾಲಕನ ಒಂದೊಳ್ಳೆ ಕೆಲಸಕ್ಕೆ ನೆಟ್ಟಿಗರು ಫಿದಾ ಬೇಸಿಗೆಯ ನೀರಿನ ದಾಹ ತೀರಿಸಿದ ಬಾಲಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಹೇಳಿ ಕೇಳಿ ಇದು ಬಿರು ಬೇಸಿಗೆ, ಕೆಲವೆಡೆ ಒಂದು ಗುಟುಕು ನೀರಿಗೂ ಪರದಾಡುವಂತಹ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಪುಟ್ಟ ಬಾಲಕನೋರ್ವ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಜನರಿಗೆ ಬಿಸ್ಲೆರಿ ನೀರನ್ನು ನೀಡುತ್ತಿದ್ದು, ಬಾಲಕ ನೀರು ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ(social Media) ವೈರಲ್ (viral) ಆಗಿದೆ. ಮಾನವೀಯ ಕಾರ್ಯಗಳು ಯಾವಾಗಲೂ ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯರ ಮಧ್ಯೆ ಮಾನವೀಯತೆ ಪ್ರೀತಿ ದೂರವಾಗಿದೆ. ಮಾನವೀಯ ದೃಷ್ಟಿಯಿಂದ ಸಮಾಜವನ್ನು ನೋಡುವವರ ಸಂಖ್ಯೆ ಕಡಿಮೆಯಾಗಿದೆ.
ಹೀಗಿರುವಾಗ ಅಯಾನ್ (Ayaan) ಎಂಬ ಒಬ್ಬ ಚಿಕ್ಕ ಹುಡುಗ ಜೀವನೋಪಾಯಕ್ಕಾಗಿ ಬೀದಿ ಬದಿ ಹೂ ಮಾರುತ್ತಿರುವ ಜನರಿಗೆ ಕುಡಿಯುವ ನೀರನ್ನು ನೀಡುತ್ತಾನೆ. ಸ್ಪೋರ್ಟ್ಸ್ ಟೀ ಶರ್ಟ್ ಧರಿಸಿರುವ ಬಾಲಕ ಅಲ್ಲಿರುವ ಎಲ್ಲರಿಗೂ ನೀರು ನೀಡುತ್ತಾನೆ. ನೀರು ಪಡೆದ ಹಿರಿಯಜ್ಜಿಯೊಬ್ಬರು ಬಾಲಕನ್ನು ಆಶೀರ್ವದಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಭಾರತೀಯ ಆಡಳಿತ ಸೇವೆಯ ಅಧಿಕಾರಿ ಅವನೀಶ್ ಶರಣ್ (Awanish Sharan) ಅವರು ಹಂಚಿಕೊಂಡಿರುವ ಈ ವಿಡಿಯೋವನ್ನು 2 ಗಂಟೆಗಳಲ್ಲಿ 20,000 ಹೆಚ್ಚು ಜನ ವೀಕ್ಷಿಸಿದ್ದಾರೆ.
ಬಡವರಿಗೆ ಸಹಾಯ ಮಾಡಲು ಮನೆಯನ್ನೇ ಅಡವಿಟ್ಟ ಬಿಹಾರದ ಚಹಾ ಮಾರಾಟಗಾರ
ದಿವ್ಯಾಂಗನಿಗೆ ನೆರವಾದ ಪೊಲೀಸ್
ಮುಂಬೈ ಟ್ರಾಫಿಕ್ ಪೋಲೀಸ್ ಒಬ್ಬರು, ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗೆ ರಸ್ತೆ ದಾಟಲು ಸಹಾಯ ಮಾಡುತ್ತಿರುವ ಹೃದಯಸ್ಪರ್ಶಿ ವೀಡಿಯೊವೊಂದು ಕಳೆದ ವರ್ಷ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಮುಂಬೈನ ಹೆಡ್ ಕಾನ್‌ಸ್ಟೇಬಲ್ ರಾಜೇಂದ್ರ ಸೋನಾವಾನೆ ಅವರು ವಿಶೇಷ ಚೇತನ ವ್ಯಕ್ತಿಗೆ ಸಹಾಯ ಹಸ್ತ ನೀಡುತ್ತಿರುವ ದೃಶ್ಯವಿದೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (CSMT) ರಸ್ತೆಯ ಜನನಿಬಿಡ ಜಂಕ್ಷನ್ ಅನ್ನು ದಾಟಲು ಕಷ್ಟ ಪಡುತ್ತಿದ್ದ ವಿಶೇಷ ಚೇತನ ವ್ಯಕ್ತಿಯ ಕೈ ಹಿಡಿದ ಸೋನಾವಾನೆ ಆತನನ್ನು ರಸ್ತೆ ದಾಟಿಸುತ್ತಿದ್ದಾರೆ.
ಬಾಯಾರಿ ಬಳಲಿದ ಕೋತಿಗೆ ನೀರುಣಿಸಿದ ಟ್ರಾಫಿಕ್ ಪೊಲೀಸ್
ಅದಕ್ಕೂ ಮೊದಲು ಚೆನ್ನೈ (Chennai)ನಲ್ಲಿ ಭಾರಿ ಮಳೆಯಿಂದ ಅನಾಹುತವಾದ ಸಂದರ್ಭದಲ್ಲಿ ಮಹಿಳಾ ಪೋಲೀಸ್ ಒಬ್ಬರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದ ವೀಡಿಯೊ ವೈರಲ್ ಆಗಿತ್ತು. ಮಹಿಳಾ ಪೋಲೀಸ್ ರಾಜೇಶ್ವರಿ (Rajeswari) ಅವರು ಜಲಾವೃತ ಪ್ರದೇಶದಲ್ಲಿ ರಕ್ಷಣಾ ಕಾರ್ಯವನ್ನು ಮಾಡುತ್ತಿದ್ದರು. ಮಳೆಗೆ ರಭಸವಾಗಿ ಬೀಸಿದ ಗಾಳಿಯಿಂದ ಮರವೊಂದರ ಕೊಂಬೆಗಳನ್ನು ರಕ್ಷಣಾ ಸಿಬ್ಬಂದಿ ಕತ್ತರಿಸಿದಾಗ, ರಾಜೇಶ್ವರಿ ಅವರು ತಮ್ಮ ಯುನಿಫಾರ್ಮ್ ಪ್ಯಾಂಟ್ ಮಡಚಿಕೊಂಡು, ತುಂಡು ಮಾಡಿದ ಕೊಂಬೆಗಳನ್ನು ದಾರಿಯಿಂದ ಪಕ್ಕಕ್ಕೆ ಹಾಕುತ್ತಿದ್ದರು. ಈ ವೇಳೆ ಅಲ್ಲಿ ಕೊಂಬೆಗಳ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿ ಕಾಣಿಸಿದ್ದು, ಆತನನ್ನು ಎತ್ತಿದ ರಾಜೇಶ್ವರಿ ಆಟೋ ಕಡೆಗೆ ಕರೆದೊಯ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನೆರವಾಗಿದ್ದರು.
ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್ ಆಗಿತ್ತು. ಈ ವೇಳೆ ರಾಜೇಶ್ವರಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಲಾಗಿತ್ತು. ನಂತರ ಈ ಬಗ್ಗೆ ಮಾಧ್ಯಮದವರು ಅವರ ಪ್ರತಿಕ್ರಿಯೆ ಕೇಳಿದಾಗ ಮಾತನಾಡಿದ ಮಹಿಳಾ ಅಧಿಕಾರಿ ರಾಜೇಶ್ವರಿ, 'ನಾನು ಪ್ರಥಮ ಚಿಕಿತ್ಸೆ ನೀಡಿದ ನಂತರ ಅಸ್ವಸ್ಥ ವ್ಯಕ್ತಿಯನ್ನು ಎತ್ತಿಕೊಂಡು ಹೋಗಿ ಆಟೋದಲ್ಲಿ ಹಾಕಿ ಆಸ್ಪತ್ರೆಗೆ ಕಳುಹಿಸಿದೆವು. ಬಳಿಕ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಅಲ್ಲಿ ಆತನ ತಾಯಿ ಇದ್ದರು, ನಾನು ಅವರಿಗೆ ಆತಂಕಪಡಬೇಡಿ ಎಂದು ಭರವಸೆ ನೀಡಿದ್ದೇನೆ ಮತ್ತು ಪೊಲೀಸ್ ಇಲಾಖೆಯು ಅವರಿಗೆ ಬೆಂಬಲ ನೀಡಲಿದೆ ಎಂದು ಹೇಳಿದ್ದರು. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು ಚಿಕಿತ್ಸೆ ಮುಂದುವರೆದಿದೆ ಯಾರೂ ಚಿಂತಿಸಬೇಕಾಗಿಲ್ಲ ಎಂದಿದ್ದರು.