Asianet Suvarna News Asianet Suvarna News

ಬಡವರಿಗೆ ಸಹಾಯ ಮಾಡಲು ಮನೆಯನ್ನೇ ಅಡವಿಟ್ಟ ಬಿಹಾರದ ಚಹಾ ಮಾರಾಟಗಾರ

 

  • ಮಾನವೀಯತೆಗೆ ಮತ್ತೊಂದು ಹೆಸರು ಈ ಬಿಹಾರದ ಚಹಾ ಮಾರಾಟಗಾರ
  • ನಿರ್ಗತಿಕರಿಗೆ 200 ಹೊದಿಕೆ ನೀಡಿದ ಸಂಜಯ್‌ ಚಂದ್ರವಂಶಿ
  • ಹಿರಿಯರಿಂದ ಬಳುವಳಿಯಾಗಿ ಬಂದ ಈ ಮಾನವೀಯ ಕಾರ್ಯ
A tea seller in Gaya spends a part of his income on underprivileged people akb
Author
Bangalore, First Published Feb 1, 2022, 9:52 AM IST

ಬಿಹಾರ: ಕೆಲವರಿಗೆ ಎಷ್ಟೇ ಆಸ್ತಿ ಹಣ ಸಿರಿವಂತಿಕೆ ಇದ್ದರೂ ಮತ್ತಷ್ಟು ಸಂಪಾದಿಸುವ ಹುಚ್ಚು, ತಮ್ಮ ಮಕ್ಕಳು ಮೊಮ್ಮಕಳ ಕಾಲಕ್ಕೂ ಆಗುವಷ್ಟು ಆಸ್ತಿ ಮಾಡುವ ಕೆಲವರು, ಹಾರುವ ಹಕ್ಕಿಗೂ ಒಂದು ಹಿಡಿ ಆಹಾರ ನೀಡಲು ಹಿಂದೆ ಮುಂದೆ ನೋಡುತ್ತಾರೆ. ಅಂತಹದರಲ್ಲಿ ಬಿಹಾರದ ಟೀ ಮಾರಾಟಗಾರರೊಬ್ಬರು ತಮಗೆ ಬರುವ ಸಣ್ಣ ಮಟ್ಟಿನ ಸಂಪಾದನೆಯಲ್ಲೇ ನೂರಾರು ಬಡವರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಬಿಹಾರದ ಗಯಾದಲ್ಲಿರುವ ಧರ್ಮನಗರಿಯಲ್ಲಿ ವಾಸಿಸುವ ಸಂಜಯ್‌ ಚಂದ್ರವಂಶಿ ಎಂಬುವವರು ಹೀಗೆ ಮಾನವೀಯ ಕಾರ್ಯ ಮಾಡುತ್ತಿರುವ ವ್ಯಕ್ತಿ. ಬಡ ಹಾಗೂ ನಿರ್ಗತಿಕರಿಗೆ 200 ಬೆಡ್‌ಶೀಟ್‌ಗಳನ್ನು ನೀಡಿರುವ ಇವರು, ಈ ದಾನದ ಕಾರ್ಯ ನನಗೆ, ತಂದೆ ಹಾಗೂ ತಾತನಿಂದ ಬಂದ ಬಳುವಳಿ ಅವರು ಕೂಡ ಹೀಗೆ ಬಡವರಿಗೆ ದಾನ  ಮಾಡುತ್ತಿದ್ದರು ಎಂದು ಹೇಳುತ್ತಾರೆ ಸಂಜಯ್.

ಹಾಗಂತ ಸಂಜಯ್ ಕುಟುಂಬವೇನೂ ಅಂತಹ ಶ್ರೀಮಂತ ಹಿನ್ನೆಲೆಯಿಂದ ಬಂದಿದ್ದಲ್ಲ. ತಳ್ಳುಗಾಡಿಯೊಂದರಲ್ಲಿ ಚಹಾ ಮಾರುವ ಸಾಮಾನ್ಯ ವೃತ್ತಿ ಇವರದು. ಸಂಜಯ್‌ ಚಂದ್ರವಂಶಿ ಗಯಾದ ಗೌತಮ ಬುದ್ಧ ಮಾರ್ಗದಲ್ಲಿ ತಳ್ಳು ಗಾಡಿಯಲ್ಲಿ ಚಹಾ ಮಾರುತ್ತಾರೆ. ತಮ್ಮ ಹೊಟ್ಟೆಪಾಡಿಗಾಗಿ ಸದಾ ಕಷ್ಟ ಪಡುವ ಇವರು ತಮ್ಮ ಸಂಪಾದನೆಯಲ್ಲಿ ಸಿಗುವ ಹಣದಲ್ಲಿ ಕೈಲಾದಷ್ಟು ಬಡವರ ಹೊಟ್ಟೆ ತುಂಬಿಸಲು ನೋಡುತ್ತಾರೆ. ಇವರು ತಮ್ಮ ತಂದೆ ಬನ್ವರಿ ರಾಮ್‌  (Banwari Ram) ಹಾಗೂ ಅಜ್ಜ ಜಂಡು ರಾಮ್‌ (Zandu Ram) ಅವರಿಂದ ಪ್ರಭಾವಿತರಾಗಿ ಈ ಕಾರ್ಯ ಮಾಡುತ್ತಿದ್ದಾರೆ. ಇವರ ತಂದೆ ಹಾಗೂ ಅಜ್ಜ ಯಾವಾಗಲೂ ತಮ್ಮ ಕೈಲಾಗಿದ್ದನ್ನು ಈ ಸಮಾಜಕ್ಕೆ ಮರಳಿ ನೀಡುವಂತೆ ಜನರಿಗೆ ಉತ್ತೇಜನ ನೀಡುತ್ತಿದ್ದರು. 

MNC ಕೆಲಸ ಬಿಟ್ಟು ಟೀ ಮಾರಿ ಲಕ್ಷ ಸಂಪಾದಿಸುತ್ತಿರುವ ಎಂಜಿನಿಯರ್

ಗಯಾದ ಕೆಂಡುವಾ (Kendua) ಗ್ರಾಮದ ಇಮಾಮ್‌ಗಂಜ್‌ನಲ್ಲಿ(Imamganj) ವಾಸ ಮಾಡುವ ಸಂಜಯ್ ತಮ್ಮ ಆದಾಯದ ಸಿಂಹಪಾಲನ್ನು ಬಡವರಿಗೆ ಮೀಸಲಿರಿಸಿದ್ದಾರೆ. ದಿನವೂ 20 ರಿಂದ  25 ಜನರಿಗೆ ಇವರು ಸಹಾಯ ಮಾಡುತ್ತಾರೆ. ಈ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, 6 ದಶಕದಿಂದ ನನ್ನ ಕುಟುಂಬ ಈ ಕಾರ್ಯ ಮಾಡುತ್ತಿದೆ. ನಾನು ಬೆಳಗ್ಗೆ ಟೀ ಅಂಗಡಿ ತೆರೆಯುವ ಮೊದಲೇ ಬಡವರು, ಭಿಕ್ಷುಕರು ನಿರ್ಗತಿಕರ ಗುಂಪು ಅಲ್ಲಿ ನೆರೆದಿರುತ್ತದೆ. ನನಗಾಗಿ ನಾನು ಕೊಡುವ ಟೀ ಬಿಸ್ಕೆಟ್‌ಗಾಗಿ ಅವರು ಕಾಯುತ್ತಿರುತ್ತಾರೆ. ಇನ್ನು ಬೇಸಿಗೆ ಸಮಯದಲ್ಲಿ ನಾನು ಅವರಿಗೆ ಎರಡು ಗ್ಲಾಸ್‌ ಸತು ನೀಡುತ್ತೇನೆ ಎಂದು ಹೇಳಿದರು. 

ಚಳಿಗಾಲದ ಸಮಯದಲ್ಲಿ ನಾನು ನನ್ನ ಗಾಡಿಯ ಸಮೀಪವೇ ಚಳಿ ಕಾಯಿಸುವುದಕ್ಕಾಗಿ ಬೆಂಕಿ ಹಾಕುತ್ತೇನೆ. ಮನೆ ಇಲ್ಲದ ನಿರ್ಗತಿಕರು ಅಲ್ಲಿಗೆ ಬಂದು ಚಳಿ ಕಾಯಿಸಿಕೊಳ್ಳುತ್ತಾರೆ. ಇದಲ್ಲದೇ ನಾನು ಅವರಿಗೆ ಹೊದಿಕೆಗಳನ್ನು ಸ್ವೆಟರ್ ಹಾಗೂ ಉಣ್ಣೆಯಿಂದ ಮಾಡಿದ ಬಟ್ಟೆಗಳನ್ನು ಪ್ರತಿ ವರ್ಷ ನೀಡುತ್ತೇನೆ. ಅಲ್ಲದೇ ತುಂಬಾ ಕಷ್ಟದಲ್ಲಿರುವ ಕೆಲವರಿಗೆ ವೈದ್ಯಕೀಯ ಸಹಾಯವನ್ನು ಕೂಡ ಇವರು ಮಾಡುತ್ತಾರೆ. ಇವರ ಕಾರ್ಯವನ್ನು ಮೆಚ್ಚಿದ ವೈದ್ಯರು. ಇವರು ಕಳುಹಿಸುವ ರೋಗಿಗೆ ರಿಯಾಯಿತಿ ದರದಲ್ಲಿ ವೈದ್ಯಕೀಯ ಸೌಲಭ್ಯ ನೀಡುತ್ತಾರೆ. 

ಸೈಕಲ್‌ನಲ್ಲಿ ಚಹಾ ಮಾರಿ ಬಡವರ ಹೊಟ್ಟೆ ತುಂಬಿಸೋ ತಮಿಳರಸನ್..!

ಇವಿಷ್ಟೇ ಅಲ್ಲದೇ ಬಡವರಿಗೆ ಸಹಾಯ ಮಾಡುವ ಸಲುವಾಗಿ ಇವರು ಮನೆಯನ್ನು ಕೂಡ ಅಡವಿಟ್ಟಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಇವರು ರಾತ್ರಿ ಉಳಿಯುವುದಕ್ಕಾಗಿ ನಿರ್ಗತಿಕರಿಗೆ ವಸತಿ ಕೇಂದ್ರವನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಇನ್ನು ಸಂಕಷ್ಟದಲ್ಲಿರುವವರಿಗೆ ನೆರವು ನೀಡಬೇಕು ಎಂದು ನಾನು ಬಿಹಾರ ಸರ್ಕಾರಕ್ಕೆ ಹಾಗೂ ಹಿಂದಿನ ಪ್ರಧಾನಿಗೆ ಪತ್ರ ಬರೆದಿದ್ದೆ. ಆದರೆ ಇದುವರೆಗೆ ನನಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಬಿಹಾರ ಸರ್ಕಾರ ನನ್ನ ಗ್ರಾಮದಲ್ಲಿ ನಿರ್ಗತಿಕರಿಗೊಂದು ವಸತಿ ಕೇಂದ್ರ ನಿರ್ಮಿಸಿ ಕೊಡಬಹುದು ಎಂಬ ನಿರೀಕ್ಷೆಯಲ್ಲಿ ನಾನಿದ್ದೇನೆ ಎಂದು ಸಂಜಯ್ ಹೇಳಿದರು. 

ಬರೀ ಗಯಾ ಮಾತ್ರವಲ್ಲದೇ ಬೇರೆ ಜಿಲ್ಲೆಯ ನಿರ್ಗತಿಕರು ಕೂಡ ಸಹಾಯ ಯಾಚಿಸಿ ಇವರ ಬಳಿ ಬರುತ್ತಾರಂತೆ. ಆರಂಭದ ದಿನಗಳಲ್ಲಿ ಇವರ ಈ ದಾನ ಕಾರ್ಯವನ್ನು ಇವರ ಪತ್ನಿ ಅನಿತಾ ದೇವಿ (Anita Devi) ಇಷ್ಟಪಟ್ಟಿರಲಿಲ್ಲವಂತೆ. ಆದರೆ ಈಗ ಪತ್ನಿ ಜೊತೆ ಪುತ್ರ ಗೌತಮ್ ಕುಮಾರ್‌ (Gowtham Kumar) ಕೂಡ ಇವರ ಉದ್ಯಮಕ್ಕೆ ಸಹಕರಿಸುವುದರ ಜೊತೆ ಇವರ ಸಮಾಜಮುಖಿ ಕಾರ್ಯಕ್ಕೆ ನೆರವಾಗುತ್ತಿದ್ದಾರೆ. 

ನಾನು ನನ್ನ ಕೊನೆಯ ಉಸಿರಿರುವವರೆಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುತ್ತೇನೆ. ನನ್ನ ಮುಂದಿನ ಪೀಳಿಗೆಯೂ ಕೂಡ ಈ ಕಾರ್ಯವನ್ನು ಮುಂದುವರೆಸುತ್ತದೆ ಎಂಬ ಭರವಸೆ  ನನಗಿದೆ ಎಂದು ಸಂಜಯ್ ಚಂದ್ರವಂಶಿ ಹೇಳಿದರು. 

Follow Us:
Download App:
  • android
  • ios