ಚಿರತೆಯನ್ನು ರಕ್ಷಿಸುತ್ತಿರುವ ವಿಡಿಯೋ ವೈರಲ್ 50 ಅಡಿ ಆಳದ ಬಾವಿಗೆ ಬಿದ್ದ ಚಿರತೆ ವೈಲ್ಡ್‌ಲೈಫ್ ಎಸ್‌ಒಎಸ್ ಹಾಗೂ ಅರಣ್ಯ ಸಿಬ್ಬಂದಿಯಿಂದ ರಕ್ಷಣೆ
ಮಹಾರಾಷ್ಟ್ರದಲ್ಲಿ 50 ಅಡಿ ಆಳದ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಚಿರತೆಯನ್ನು ರಕ್ಷಿಸಲು ಕೈಗೊಂಡ ಕಾರ್ಯಾಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈಲ್ಡ್‌ಲೈಫ್ ಎಸ್‌ಒಎಸ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ. ಕೆಲವೊಮ್ಮೆ ಕಾಡು ಪ್ರಾಣಿಗಳು ಆಹಾರ ಹುಡುಕುತ್ತಾ ಬಂದು ತಮ್ಮ ಜೀವವನ್ನೇ ಅಪಾಯಕ್ಕೊಡುತ್ತವೆ. ಆದರೆ ಇಲ್ಲಿ ಚಿರತೆ ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಎಸ್‌ಒಎಸ್ ತಂಡ ಸಕಾಲದಲ್ಲಿ ಸ್ಥಳಕ್ಕೆ ಬಂದು ಈ ಚಿರತೆಯನ್ನು ರಕ್ಷಿಸಿದ್ದಾರೆ.
ವೈಲ್ಡ್‌ಲೈಫ್ ಎಸ್‌ಒಎಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಚಿರತೆಯ ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳನ್ನು ತೋರಿಸುತ್ತಿದೆ. ಮತ್ತು ಈ ದೃಶ್ಯಗಳು ನಿಮ್ಮ ಮೊಗದಲ್ಲಿ ಖಂಡಿತವಾಗಿಯೂ ನಗು ತರಿಸುವುದು. ಅಳವಾದ ಬಾವಿಯಲ್ಲಿ ಚಿರತೆ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿರುವುದನ್ನು ಕಾಣಬಹುದು. ನೀರು ಇದ್ದಿದ್ದರಿಂದ ಈ ಚಿರತೆ ಬಹುತೇಕ ಮುಳುಗುವ ಸ್ಥಿತಿಯಲ್ಲಿತ್ತು. ಆದಾಗ್ಯೂ, ವನ್ಯಜೀವಿ ಎಸ್‌ಒಎಸ್‌ನ ರಕ್ಷಕರ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದು ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ ಬೋನನ್ನು ಬಾವಿಗೆ ಇಳಿಸಿ ಚಿರತೆಯನ್ನು ರಕ್ಷಿಸಿದ್ದಾರೆ.
ಮಹಾರಾಷ್ಟ್ರದಲ್ಲಿ 50 ಅಡಿ ಆಳದ ತೆರೆದ ಬಾವಿಯಿಂದ ಮುಳುಗುತ್ತಿದ್ದ ಚಿರತೆಯನ್ನು ರಕ್ಷಿಸಲು ವನ್ಯಜೀವಿ ಎಸ್‌ಒಎಸ್ ಮತ್ತು ಅರಣ್ಯ ಇಲಾಖೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತು. ಚಿರತೆಯನ್ನು ಸುರಕ್ಷಿತವಾಗಿ ಹೊರತೆಗೆಯಲು ಬೋನನ್ನು ಕೆಳಗೆ ಇಳಿಸಲಾಯಿತು. ಚಿರತೆಗೆ ಯಾವುದೇ ಗಾಯಗಳಾಗಿಲ್ಲ ಎಂದು ಖಚಿತಪಡಿಸಿದ ನಂತರ, ಅವನನ್ನು ಮರಳಿ ಕಾಡಿಗೆ ಬಿಡಲಾಯಿತು ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ತೆರೆದ ಬಾವಿಗಳಿಗೆ ಪ್ರಾಣಿಗಳು ಬೀಳದಂತೆ ತಡೆಯಲು ಅವುಗಳ ಮೇಲೆ ರಕ್ಷಣಾತ್ಮಕವಾಗಿ ಏನನ್ನಾದರು ಇಡುವಂತೆ ಅವರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದರು.
Watch Terrifying video: ಗೇಟ್ ಹಾರಿ ಬಂದು ಸಾಕು ನಾಯಿ ಹೊತ್ತೊಯ್ದ ಚಿರತೆ..
ಕೆಲದಿನಗಳ ಹಿಂದೆ ಮಹಾರಾಷ್ಟ್ರದ ಬದ್ಲಾಪುರದಲ್ಲಿ ಪ್ಲಾಸ್ಟಿಕ್ ಡಬ್ಬಿಯೊಳಗೆ ತಲೆ ಸಿಲುಕಿಕೊಂಡು ಒದ್ದಾಡುತ್ತಿದ್ದ ಚಿರತೆ ಮರಿಯೊಂದನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದರು. ಥಾಣೆ ಜಿಲ್ಲೆಯ ಬದ್ಲಾಪುರ ಗ್ರಾಮದ ಬಳಿ ದಾರಿಹೋಕರೊಬ್ಬರು ಪ್ಲಾಸ್ಟಿಕ್ ನೀರಿನ ಕ್ಯಾನ್‌ನಲ್ಲಿ ತಲೆ ಸಿಲುಕಿಕೊಂಡಿದ್ದ ಚಿರತೆಯನ್ನು ಮೊದಲು ನೋಡಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳು, ಸ್ವಯಂಸೇವಕರು ಮತ್ತು ಗ್ರಾಮಸ್ಥರನ್ನು ಒಳಗೊಂಡ ತಂಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಸುಮಾರು 48 ಗಂಟೆಗಳ ನಂತರ ಚಿರತೆ ಮರಿಯನ್ನು ಸೆರೆ ಹಿಡಿದು ಪ್ಲಾಸ್ಟಿಕ್ ಬಾಟಲಿಯಿಂದ ಅದಕ್ಕೆ ಮುಕ್ತಿ ನೀಡಲಾಗಿದೆ. ಈ ಬಾಟಲ್ ತಲೆಯಲ್ಲಿ ಸಿಲುಕಿಕೊಂಡ ಪರಿಣಾಮ ಈ ಚಿರತೆ ಮರಿಗೆ ಸುಮಾರು ಎರಡು ದಿನಗಳವರೆಗೆ ಸರಿಯಾಗಿ ಉಸಿರಾಡಲು ಅಥವಾ ತಿನ್ನಲು ಅಥವಾ ಕುಡಿಯಲು ಸಾಧ್ಯವಾಗದ ಕಾರಣ ತೀವ್ರವಾಗಿ ದಣಿದಿತ್ತು.