ತಮಿಳುನಾಡು ಮತ್ತು ಕೇರಳದಲ್ಲಿ ಹೊಸ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಂಡಿರುವ ಕಾಂಗ್ರೆಸ್, ಇದೀಗ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮುಂದುವರಿಸಬೇಕೇ ಅಥವಾ ಡಿಕೆ ಶಿವಕುಮಾರ್‌ಗೆ ಅವಕಾಶ ನೀಡಬೇಕೇ ಎಂಬ ಜಿಜ್ಞಾಸೆ ಪಕ್ಷದೊಳಗೆ ತೀವ್ರ

ತಮಿಳುನಾಡು ಚುನಾವಣೆಯ ಬಳಿಕ ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಲವು ವರ್ಷಗಳ ಮೈತ್ರಿ ಹೊಂದಿದ್ದ ಡಿಎಂಕೆ(Dravida Munnetra Kazhagam) ಜೊತೆಗಿನ ಸಂಬಂಧವನ್ನು ಕಡಿದು, ಹೊಸದಾಗಿ ಹೊಸದಾಗಿ ಗೆದ್ದು ಅಧಿಕಾರಕ್ಕೇರಿದ ವಿಜಯ್ ಟಿವಿಕೆ (Tamilaga Vettri Kazhagam) ಜೊತೆ ಕೈಜೋಡಿಸಿದ್ದು ಶಾಕ್ ಕೊಟ್ಟಿದ್ದಷ್ಟೇ ಅಲ್ಲ, ಕಾಂಗ್ರೆಸ್‌ನ ಹಳೆಯ ರಾಜಕೀಯ ಶೈಲಿ, ತತ್ವಗಳಿಗೆ ವಿರುದ್ಧವಾಗಿತ್ತು. ಸಾಮಾನ್ಯವಾಗಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಕಾಂಗ್ರೆಸ್, ಈ ಬಾರಿ ಹಠಾತ್‌ ನಿರ್ಧಾರ ತೆಗೆದುಕೊಂಡಿರುವುದು 'ಪಕ್ಷದಲ್ಲಿ ಹೊಸ ರಾಜಕೀಯ ಚಿಂತನೆ ಶುರುವಾಯಿತೇ?' ಎಂಬ ಪ್ರಶ್ನೆ ಹುಟ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇರಳದಲ್ಲಿ ಕಾರ್ಯಕರ್ತರ ಮಾತಿಗೆ ಮಣಿದ ಹೈಕಮಾಂಡ್!

ಇದೇ ಸಮಯದಲ್ಲಿ ಕೇರಳದಲ್ಲೂ ಕಾಂಗ್ರೆಸ್ ಹಳೆಯ ಚಿಂತನೆಗಳಿಂದ ಹೊರಬಂದಿತು. ಸಾಮಾನ್ಯವಾಗಿ ಹೈಕಮಾಂಡ್ ಹೇಳಿದವರೇ ಮುಖ್ಯಮಂತ್ರಿ ಆಗುವ ಸಂಪ್ರದಾಯ ಇದ್ದರೂ, ಈ ಬಾರಿ ಸ್ಥಳೀಯ ಕಾರ್ಯಕರ್ತರು ಮತ್ತು ಶಾಸಕರ ಅಭಿಪ್ರಾಯಕ್ಕೆ ಹೆಚ್ಚು ಮಹತ್ವ ನೀಡಲಾಯಿತು. ಹೀಗಾಗಿ ವಿಡಿ ಸತೀಶನ್ (VD Satheesan) ಅವರಿಗೆ ಅವಕಾಶ ಸಿಕ್ಕಿತು. ಇದು ಕಾಂಗ್ರೆಸ್‌ನಲ್ಲಿ 'ದೆಹಲಿ ಹೈಕಮಾಂಡ್ ಹೇಳಿದ್ದು ಅಂತಿಮ' ಎನ್ನುವ ಸಂಸ್ಕೃತಿಗೆ ಸಣ್ಣ ಮಟ್ಟಿನ ಸವಾಲು ಎಂದು ರಾಜಕೀಯ ವಿಶ್ಲೇಷಕರು ನೋಡುತ್ತಿದ್ದಾರೆ.

ಕರ್ನಾಟಕದಲ್ಲಿ ಈಗ ದೊಡ್ಡ ಪ್ರಶ್ನೆ ಸಿದ್ದರಾಮಯ್ಯ? ಡಿಕೆ ಶಿವಕುಮಾರ್?

ಇನ್ನು ಕಾಂಗ್ರೆಸ್‌ ಪಕ್ಷದ ಈ ರಾಜಕೀಯ ಬದಲಾವಣೆಯ ಅಲೆ ಈಗ ಕರ್ನಾಟಕಕ್ಕೂ ತಲುಪುವ ಸಾಧ್ಯತೆ ಬಗ್ಗೆ ಚರ್ಚೆ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮೂರು ವರ್ಷದ ಆಡಳಿತ ಪೂರ್ಣಗೊಳಿಸುತ್ತಿರುವ ಹಿನ್ನೆಲೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ (DK Shivakumar ಬೆಂಬಲಿಗರು ನಾಯಕತ್ವ ಬದಲಾವಣೆಗಾಗಿ ಒತ್ತಡ ಹೆಚ್ಚಿಸಿದ್ದಾರೆ. ಕಾಂಗ್ರೆಸ್ ಎದುರಿಸುತ್ತಿರುವ ದೊಡ್ಡ ಪ್ರಶ್ನೆ ಎಂದರೆ ಜನಮೆಚ್ಚಿನ ನಾಯಕ ಸಿದ್ದರಾಮಯ್ಯರನ್ನು ಮುಂದುವರಿಸಬೇಕಾ? ಅಥವಾ ಪಕ್ಷ ಸಂಘಟನೆಗೆ ಬಲ ತುಂಬಿರುವ, ಯಾವುದೇ ಸಮಸ್ಯೆಗಳು ಬಗೆಹರಿಸುವ ಟ್ರಬಲ್ ಶೂಟರ್ ಡಿಕೆಶಿಗೆ ಅವಕಾಶ ಕೊಡಬೇಕಾ?

ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಕಾಂಗ್ರೆಸ್‌ಗೆ ಅಪಾಯವೇ?

ಸಿದ್ದರಾಮಯ್ಯ ಕಾಂಗ್ರೆಸ್‌ನ ಅತ್ಯಂತ ದೊಡ್ಡ ಜನ ಬೆಂಬಲ ಹೊಂದಿರುವ ನಾಯಕರಲ್ಲಿ ಒಬ್ಬರು. ವಿಶೇಷವಾಗಿ ಕಾಂಗ್ರೆಸ್ ಅಹಿಂದ ವರ್ಗ, ಕುರುಬ ಸಮುದಾಯ ಮತ್ತು ಮುಸ್ಲಿಂ ಮತ ಗಳಿಸುವಲ್ಲಿ ಅವರ ಪ್ರಭಾವ ಹೆಚ್ಚು. ಒಂದು ವೇಳೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಿದರೆ, ಕಾಂಗ್ರೆಸ್ ತನ್ನ ಪ್ರಮುಖ ಮತಬ್ಯಾಂಕ್‌ಗೆ ತಪ್ಪು ಸಂದೇಶ ಹೋಗುವ ಆತಂಕವೂ ಇದೆ. 2028ರ ಚುನಾವಣೆಗೆ ಹೋಗುವಾಗ ಆಡಳಿತ ವಿರೋಧಿ ಅಲೆ ಎದುರಿಸಲು ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅಗತ್ಯ ಎಂಬ ಅಭಿಪ್ರಾಯ ಪಕ್ಷದೊಳಗೇ ಕೇಳಿಬರುತ್ತಿದೆ.

ಡಿಕೆಶಿಗೆ ಅವಕಾಶ ಕೊಡದಿದ್ದರೂ ಅಪಾಯ ತಪ್ಪಲ್ಲ!

ಇನ್ನೊಂದೆಡೆ, ಡಿಕೆ ಶಿವಕುಮಾರ್ (DK Shivakumar) ಅವರಿಗೆ ಅವಕಾಶ ಸಿಗದಿದ್ದರೆ, ಪಕ್ಷದೊಳಗಿನ ಅಸಮಾಧಾನ ಹೆಚ್ಚುವ ಸಾಧ್ಯತೆ ಇದೆ. ಸಂಘಟನೆ ಬಲಪಡಿಸುವಲ್ಲಿ ಮತ್ತು ಚುನಾವಣಾ ನಿರ್ವಹಣೆಯಲ್ಲಿ ಡಿಕೆಶಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಅವರನ್ನು ಮತ್ತೆ ನಿರೀಕ್ಷೆಯಲ್ಲಿ ಇಟ್ಟರೆ, ಅದು ಕಾಂಗ್ರೆಸ್ ಭವಿಷ್ಯಕ್ಕೂ ಹೊಡೆತ ಬೀಳಬಹುದು ಎಂಬ ಚರ್ಚೆ ಇದೆ.

ಕಾಂಗ್ರೆಸ್ ಮುಂದಿನ ನಿರ್ಧಾರವೇನು?

ಇತ್ತೀಚಿನ ರಾಜಕೀಯ ನಿರ್ಧಾರಗಳನ್ನು ಗಮನಿಸಿದರೆ, ಕಾಂಗ್ರೆಸ್ ಈಗ ಸಂಪ್ರದಾಯಬದ್ಧ ರಾಜಕೀಯದಿಂದ ನಿಧಾನವಾಗಿ ಹೊರಬರುತ್ತಿದೆ ಎಂಬ ಸಂದೇಶ ಸಿಗುತ್ತಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಕಂಡ ಆಮೂಲಾಗ್ರ ಬದಲಾವಣೆಗಳ ಬಳಿಕ, ಕರ್ನಾಟಕದಲ್ಲೂ ಅಚ್ಚರಿಯ ನಿರ್ಧಾರ ಹೊರಬರುವ ಸಾಧ್ಯತೆಯನ್ನು ತಳ್ಳಿಹಾಕುತ್ತಿಲ್ಲ. ನಾಯಕತ್ವ ಬದಲಾವಣೆ ಆಗುತ್ತದೆಯೇ? ಅಥವಾ ಸಿದ್ದರಾಮಯ್ಯ-ಡಿಕೆ ಶಿವಕುಮಾರ ಬದಲು ಮೂರನೆಯವರಿಗೆ ಲಾಭವಾಗುತ್ತದೆಯೇ? ಎಂಬುದೀಗ ರಾಜ್ಯ ರಾಜಕೀಯದ ದೊಡ್ಡ ಕುತೂಹಲವಾಗಿದೆ.