ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಸಾಧ್ಯತೆಯಿಂದಾಗಿ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ, ದಲಿತ ಸಿಎಂ ಕೂಗು ಕೇಳಿಬರುತ್ತಿದ್ದು, ಜಿ. ಪರಮೇಶ್ವರ್ ಅವರ ಹೆಸರು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿದೆ.

ಬೆಂಗಳೂರು (ಮೇ.28): ಇಂದು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಲೋಕಭವನದ ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ರಾಜೀನಾಮೆ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಬಲಿಗರು, ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಲೋಕಭವನದ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, ಮಧ್ಯಾಹ್ನದ ಬಳಿಕ ಸಿಎಂ ರಾಜೀನಾಮೆ ಸಲ್ಲಿಸಬಹುದು ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜೀನಾಮೆ ಪ್ರಕ್ರಿಯೆ ಹೇಗೆ ನಡೆಯಲಿದೆ?

ಮೂಲಗಳ ಪ್ರಕಾರ, ರಾಜ್ಯಪಾಲರು ಬೇರೆಡೆ ಪ್ರಯಾಣದಲ್ಲಿರುವುದರಿಂದ ಸಿಎಂ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ಸಲ್ಲಿಸಲು ತೀರ್ಮಾನಿಸಿದ್ದಾರೆ. ಆದರೆ ಅಂತಿಮವಾಗಿ ರಾಜ್ಯಪಾಲರೇ ರಾಜೀನಾಮೆ ಖಚಿತಪಡಿಸಿಕೊಳ್ಳಬೇಕಾಗುತ್ತದೆ. ರಾಜಭವನದಿಂದಲೂ ಇದೇ ನಿಯಮ ಅನ್ವಯವಾಗುತ್ತದೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ. ನಾಳೆ ಉಪರಾಷ್ಟ್ರಪತಿಗಳ ಕರ್ನಾಟಕಕ್ಕೆ ಆಗಮಿಸುತ್ತಿರುವುದರಿಂದ ರಾಜ್ಯಪಾಲರು ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದು, ಬಳಿಕ ರಾಜಕೀಯ ಪ್ರಕ್ರಿಯೆ ವೇಗ ಪಡೆಯುವ ಸಾಧ್ಯತೆ ಇದೆ.

ಸಿಎಂ ಸ್ಥಾನಕ್ಕೆ ಪರಮೇಶ್ವರ್ ಹೆಸರು ಮುನ್ನೆಲೆಗೆ!

ಸಿಎಂ ಬದಲಾವಣೆ ಚರ್ಚೆಗಳ ನಡುವೆಯೇ ಜಿ ಪರಮೇಶ್ವರ (G.Parameshwara) ಅವರ ಹೆಸರು ಕಾಂಗ್ರೆಸ್ ವಲಯದಲ್ಲಿ ಮುನ್ನೆಲೆಗೆ ಬಂದಿದೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಆದರೆ ಸಿದ್ದರಾಮಯ್ಯ ಅವರ ಒಂದು ಬಣ ದಲಿತ ಸಿಎಂ ದಾಳ ಉರುಳಿಸಿದರೆ ಜಿ ಪರಮೇಶ್ವರ್ ಅವರೇ ಸಿಎಂ ಮಾಡುವಂತೆ ಪಟ್ಟು ಹಿಡಿಯುವ ಸಾಧ್ಯತೆಯೂ ಇದೆ. ಈ ಹಿನ್ನೆಲೆ ಇಂದು ಸಿಎಲ್‌ಪಿ ಸಭೆ ನಡೆಯಲಿದ್ದು, ಪರಮೇಶ್ವರ್ ಹೆಸರನ್ನು ಪ್ರಸ್ತಾಪಿಸಲು ಕೆಲ ಶಾಸಕರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ದಲಿತ ನಾಯಕನಿಗೆ ಅವಕಾಶ ನೀಡಬೇಕು ಎಂಬ ಒತ್ತಾಯವೂ ಪಕ್ಷದೊಳಗೆ ಕೇಳಿಬರುತ್ತಿದೆ. ಸಿದ್ದರಾಮಯ್ಯ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಲಕ್ಷಣ ಕಾಣದ ಹಿನ್ನೆಲೆ, ಪರ್ಯಾಯ ನಾಯಕತ್ವದ ಚರ್ಚೆ ತೀವ್ರಗೊಂಡಿದೆ.

ಪರಮೇಶ್ವರ್ ನಿವಾಸಕ್ಕೆ ಶಾಸಕ ರಂಗನಾಥ್ ಭೇಟಿ!

ಈ ಎಲ್ಲ ರಾಜಕೀಯ ಬೆಳವಣಿಗೆಗಳ ನಡುವೆ ಕುಣಿಗಲ್ ಶಾಸಕ ಡಾ ಹೆಚ್‌ಡಿ ರಂಗನಾಥ(Dr HD Ranganath) ಅವರು ಗೃಹ ಸಚಿವ ಪರಮೇಶ್ವರ್ ನಿವಾಸಕ್ಕೆ ದಿಢೀರ್ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಸ್ವತಃ ಕಾರು ಚಾಲನೆ ಮಾಡಿಕೊಂಡು ಬಂದ ರಂಗನಾಥ್ ಸುಮಾರು 15 ನಿಮಿಷಗಳ ಕಾಲ ಪರಮೇಶ್ವರ್ ಜೊತೆ ಮಾತುಕತೆ ನಡೆಸಿದರು. ಆದರೆ ಭೇಟಿಯ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದೇ ‘ನೋ ಕಾಮೆಂಟ್’ ಎಂದಷ್ಟೇ ಹೇಳಿ ತೆರಳಿದರು. ನಾಯಕರ ಮೌನ ರಾಜ್ಯ ರಾಜಕೀಯದಲ್ಲಿ ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.