ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಹೈವೋಲ್ಟೇಜ್‌ ಸಭೆಯ ನಂತರ, ಸಿಎಂ ಸಿದ್ದರಾಮಯ್ಯ ರಹಸ್ಯ ಚರ್ಚೆ ನಡೆಸಿ ಬೆಂಗಳೂರಿಗೆ ಮರಳಿದ್ದಾರೆ. ಆದರೆ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲೇ ಉಳಿದುಕೊಂಡಿದ್ದು, ಬುಧವಾರ ನಡೆಯಲಿರುವ ಮಹತ್ವದ ಉಪಹಾರ ಕೂಟಕ್ಕೆ ಹಾಜರಾಗಲಿದ್ದಾರೆ. ಕುತೂಹಲಕರ ಮಾಹಿತಿ ಇಲ್ಲಿದೆ ನೋಡಿ

ಬೆಂಗಳೂರು (ಮೇ.27): ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಗಳ ಬಗ್ಗೆ ಮಂಗಳವಾರ ದೆಹಲಿಯಲ್ಲಿ ನಡೆದ ಹೈವೋಲ್ಟೇಜ್‌ ಸಭೆ ಬಳಿಕ ಕಾಂಗ್ರೆಸ್‌ ವಲಯದಲ್ಲಿ ಅಚ್ಚರಿ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಬೆಂಗಳೂರಿಗೆ ವಾಪಸ್ ಆಗುವ ಮುನ್ನ ದೆಹಲಿಯಲ್ಲಿರುವ ಸಚಿವ ಕೆಜೆ ಜಾರ್ಜ್ (KJ George) ನಿವಾಸದಲ್ಲಿ ಆಪ್ತರೊಂದಿಗೆ ರಹಸ್ಯ ಚರ್ಚೆ ನಡೆಸಿದರು ಬಳಿಕ ತಡರಾತ್ರಿ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ.

ಡಿಕೆಶಿ ದೆಹಲಿಯಲ್ಲೇ ಉಳಿದದ್ದು ಏಕೆ?

ಆದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಮಾತ್ರ ಬೆಂಗಳೂರಿಗೆ ಮರಳದೆ ದೆಹಲಿಯಲ್ಲೇ ಉಳಿದಿರುವುದು ಕುತೂಹಲ ಹುಟ್ಟಿಸಿದೆ. ವರಿಷ್ಠರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಗಳ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ಚರ್ಚೆಗಳು ಜೋರಾಗಿವೆ. ಸಿದ್ದರಾಮಯ್ಯ ಅವರು 'ಮೂರು ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುತ್ತೇನೆ' ಎಂದು ಹೇಳಿರುವುದು ರಾಜಕೀಯ ಲೆಕ್ಕಾಚಾರಗಳಿಗೆ ಇನ್ನಷ್ಟು ತಿರುವು ಪಡೆದುಕೊಂಡಿವೆ.

ನಾಳೆ ಸಿಎಂ ನಿವಾಸ ‘ಕಾವೇರಿ’ಯಲ್ಲಿ ಬ್ರೇಕ್‌ಫಾಸ್ಟ್‌ ಡಿಕೆಶಿ ಹಾಜರ್

ಬುಧವಾರ ಬೆಳಗ್ಗೆ 9 ಗಂಟೆಗೆ ಸಿಎಂ ನಿವಾಸ ‘ಕಾವೇರಿ’ಯಲ್ಲಿ ಮಹತ್ವದ ಉಪಹಾರ ಕೂಟ ನಿಗದಿಯಾಗಿದ್ದು, ಸಚಿವರು ಹಾಗೂ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ. ಈ ಉಪಾಹಾರ ಕೂಟಕ್ಕೆ ಡಿಕೆ ಶಿವಕುಮಾರ್‌ ದೆಹಲಿಯಿಂದ ಬೆಳಗ್ಗೆ 5:45ಕ್ಕೆ ಬೆಂಗಳೂರಿಗೆ ಆಗಮಿಸಿ, ನೇರವಾಗಿ ಈ ಸಭೆಗೆ ಹಾಜರಾಗಲಿದ್ದಾರೆ ಈ ಬಗ್ಗೆ ಡಿಸಿಎಂ ‌ಡಿಕೆ ಶಿವಕುಮಾರ್ ಅವರ ಕಾರ್ಯಕ್ರಮ ವೇಳಾಪಟ್ಟಿಯಲ್ಲೇ ಉಲ್ಲೇಖವಾಗಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತಷ್ಟು ಬದಲಾವಣೆಗಳ ಸುಳಿವು?

ದೆಹಲಿ ಸಭೆಯ ನಂತರ ನಡೆಯುತ್ತಿರುವ ಈ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್‌ನಲ್ಲಿ ದೊಡ್ಡ ಬದಲಾವಣೆಗಳ ಮುನ್ಸೂಚನೆ ನೀಡುತ್ತಿವೆ ಎಂಬ ಮಾತು ಕೇಳಿಬರುತ್ತಿದೆ. ಸಿಎಂ ಮತ್ತು ಡಿಸಿಎಂ ನಡುವಿನ ಮುಂದಿನ ರಾಜಕೀಯ ನಡೆ ಏನಾಗಲಿದೆ ಎಂಬುದರತ್ತ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.