ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವಾಗಲೇ, ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಉಪ ಕಮಾಂಡರ್ ಸೈಫುಲ್ಲಾ ಕಸೂರಿಯ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.

ಪಾಕ್ ಆಕ್ರಮಿತ ಕಾಶ್ಮೀರ (PoK) ಪಾಕಿಸ್ತಾನ ಸರ್ಕಾರದ ವಿರುದ್ಧದ ಪ್ರತಿಭಟನೆಗಳಿಂದ ಹೊತ್ತಿ ಉರಿಯುತ್ತಿದೆ. ನಾಗರಿಕರ ಮೇಲೆ ಪಾಕಿಸ್ತಾನ ಸೈನಿಕರು ನಿರ್ದಯವಾಗಿ ಗುಂಡು ಹಾರಿಸಲಾಗುತ್ತಿದೆ. ಪಿಒಕೆ ಜನರು ಪಾಕಿಸ್ತಾನ ವಿರುದ್ಧ ಸಂಘರ್ಷಕ್ಕಿಳಿದು ತೀವ್ರ ಹಿಂಸಾಚಾರ, ಸಾವು ನೋವು ಸಂಭವಿಸಿರುವ ಹೊತ್ತಲ್ಲಿ ಉಗ್ರ ಸಂಘಟನೆಗಳು ತಮ್ಮ ಹಳೆಯ ಚಾಳಿ ಮುಂದುವರಿಸಿವೆ. ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಉಪ ಕಮಾಂಡರ್ ಸೈಫುಲ್ಲಾ ಕಸೂರಿಯ ಹೊಸ ವಿಡಿಯೋವೊಂದು ಹೊರಬಿದ್ದಿದ್ದು, ಇದರಲ್ಲಿ ಆತ ಕಾಶ್ಮೀರದ ಬಗ್ಗೆ ವಿಷ ಕಾರಿದ್ದಾನೆ.

ಸೈಫುಲ್ಲಾ ಕಸೂರಿ ವಿಡಿಯೋದಲ್ಲಿ ಏನಿದೆ?

ಈ ವಿಡಿಯೋದಲ್ಲಿ ಕಸೂರಿ, ಭಾರತದ ವಿರುದ್ಧ ಅತ್ಯಂತ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾನೆ. ಕಾಶ್ಮೀರದಲ್ಲಿ 'ಗೆಲುವು' ಸಾಧಿಸುವುದನ್ನು 'ಗಜ್ವಾ-ಎ-ಹಿಂದ್'ಗೆ ಹೋಲಿಸಿರುವ ಆತ, 'ಕಯಾಮತ್' ಬರುವವರೆಗೂ ಈ ಸಂಘರ್ಷ ಮುಂದುವರಿಯಲಿದೆ ಎಂದು ಹೇಳಿಕೊಂಡಿದ್ದಾನೆ. ಪಿಒಕೆಯಲ್ಲಿ ಜನರು ಬೀದಿಗಿಳಿದು ಹೋರಾಡುತ್ತಿರುವಾಗ, ಉಗ್ರರು ಮಾತ್ರ ಕಾಶ್ಮೀರದ ಬಗ್ಗೆಯೇ ಮಾತನಾಡುತ್ತಿರುವುದು ವಿಪರ್ಯಾಸ.

ಯಾರೀ ಸೈಫುಲ್ಲಾ ಕಸೂರಿ?

ಸೈಫುಲ್ಲಾ ಕಸೂರಿ, ಕುಖ್ಯಾತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಪ್ರಮುಖ ನಾಯಕರಲ್ಲಿ ಒಬ್ಬ. ಈತನನ್ನು ಜಾಗತಿಕ ಉಗ್ರ ಹಫೀಜ್ ಸಯೀದ್‌ನ ಆಪ್ತ ಎಂದೇ ಪರಿಗಣಿಸಲಾಗುತ್ತದೆ. ಭಾರತದ ವಿರುದ್ಧ ನಡೆದ ಅನೇಕ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಈತನ ಹೆಸರು ಈ ಹಿಂದೆಯೂ ಕೇಳಿಬಂದಿತ್ತು.

ಭಾರತೀಯ ಸೇನೆಯು ಈ ಹಿಂದೆ ಪಹಲ್ಗಾಮ್ ಮೇಲಿನ ದಾಳಿಗೆ ಪ್ರತೀಕಾರವಾಗಿ 'ಆಪರೇಷನ್ ಸಿಂದೂರ್' ನಡೆಸಿತ್ತು. ಈ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಮತ್ತು ಪಿಒಕೆಯಲ್ಲಿದ್ದ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಲಾಗಿತ್ತು. ಇಷ್ಟೆಲ್ಲಾ ಕಠಿಣ ಕ್ರಮಗಳ ಬಳಿಕವೂ, ಕಸೂರಿಯಂತಹ ಉಗ್ರರು ಮತ್ತೆ ತಲೆ ಎತ್ತುತ್ತಿರುವುದು, ಉಗ್ರ ಸಂಘಟನೆಗಳ ಹಳೆಯ ನಿರೂಪಣೆಗೆ ಹಿಡಿದ ಕನ್ನಡಿಯಾಗಿದೆ.