ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡದೇ ಇದ್ದಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರದ (POK) ಜನರು ಭಾರತ ಸೇರಲು ಹೋರಾಡುತ್ತಿದ್ದರು ಎಂದು ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿ ತರಲು ಸರ್ಕಾರ ಬದ್ಧವಾಗಿದೆ ಎಂದರು.

ಶ್ರೀನಗರ (ಆ.15): 2019ರಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿ, ರಾಜ್ಯದ ಸ್ಥಾನಮಾನವನ್ನು ರದ್ದು ಮಾಡದೇ ಇದ್ದಿದ್ದರೆ, ಪಾಕ್ ಆಕ್ರಮಿತ ಕಾಶ್ಮೀರದ (POK) ಜನರು ಇಂದು ಭಾರತದ ಜೊತೆ ಸೇರಲು ಬೀದಿಗಿಳಿದು ಹೋರಾಟ ಮಾಡುತ್ತಿದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಶ್ರೀನಗರದ ಬಕ್ಷಿ ಸ್ಟೇಡಿಯಂನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಹಾರಿಸಿದ ನಂತರ ಅವರು ಮಾತನಾಡಿದರು.

ಪಾಕ್‌ ಅಕ್ರಮಿತ ಕಾಶ್ಮೀರದ ಜನರನ್ನ ನಮ್ಮವರೆಂದೇ ನೋಡುತ್ತೇವೆ:

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಜನರನ್ನು ನಾವು ನಮ್ಮವರೆಂದೇ ನೋಡುತ್ತೇವೆ. ಅವರಿಗಾಗಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಈಗಲೂ ಸೀಟುಗಳನ್ನು ಮೀಸಲಿಟ್ಟಿದ್ದೇವೆ. ಎಂದಾದರೊಂದು ದಿನ ಅವರು ಬಂದು ಆ ಸೀಟುಗಳಲ್ಲಿ ಕೂರುತ್ತಾರೆ ಎಂಬ ಭರವಸೆ ನಮಗಿದೆ' ಎಂದು ಒಮರ್ ಅಬ್ದುಲ್ಲಾ ಹೇಳಿದರು.

1947ರಲ್ಲಿ ಪಾಕಿಸ್ತಾನ ಬೆಂಬಲಿತ ದಾಳಿಕೋರರ ವಿರುದ್ಧ ಹೋರಾಡಿ ಭಾರತದೊಂದಿಗೆ ಸೇರಲು ನ್ಯಾಷನಲ್ ಕಾನ್ಫರೆನ್ಸ್ ಸಂಸ್ಥಾಪಕ ಶೇಖ್ ಮೊಹಮ್ಮದ್ ಅಬ್ದುಲ್ಲಾ ಮತ್ತು ಅವರ ತಂಡ ತೆಗೆದುಕೊಂಡ ನಿರ್ಧಾರ ಸರಿಯಾಗಿತ್ತು ಎಂಬುದಕ್ಕೆ ಗಡಿಯಾಚೆಗಿನ ಇಂದಿನ ಪರಿಸ್ಥಿತಿಯೇ ಸಾಕ್ಷಿ ಎಂದರು. ಮುಂದುವರಿದು, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮತ್ತು ಇತರ ಸಾಂವಿಧಾನಿಕ ರಕ್ಷಣೆಗಳನ್ನು ಮರಳಿ ತರಲು ನನ್ನ ಸರ್ಕಾರ ಬದ್ಧವಾಗಿದೆ. ದೇಶದಲ್ಲಿ ಒಕ್ಕೂಟ ವ್ಯವಸ್ಥೆ (ಫೆಡರಲಿಸಂ) ಉಳಿಯಬೇಕಾದರೆ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಹಕ್ಕುಗಳನ್ನು ಪುನಃಸ್ಥಾಪಿಸಬೇಕು ಎಂದು ಅಭಿಪ್ರಾಯಪಟ್ಟರು.

ನೀಟ್, ಜೆಇಇ ರಾಜ್ಯಗಳ ಹಕ್ಕು ಕಸಿದುಕೊಳ್ಳೂತ್ತಿವೆ

ನೀಟ್, ಜೆಇಇಯಂತಹ ಕೇಂದ್ರೀಕೃತ ಪರೀಕ್ಷೆಗಳು ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ ಎಂದು ಒಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟರು. ಕೇಂದ್ರದ ಏಜೆನ್ಸಿಗಳು ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದರೆ, ಅದರ ಪರಿಣಾಮಗಳನ್ನು ನಾವು ಬೀದಿಗಳಲ್ಲಿ ನೋಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.