ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು, ಮುಂದಿನ ಆಡಳಿತ ಯಾರು ನಡೆಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಮರುಆಯ್ಕೆಯ ವಿಶ್ವಾಸದಲ್ಲಿದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವಿನ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದೆ.

ತಿರುವನಂತಪುರಂ (ಮೇ 4): ಕೇರಳ ರಾಜಕೀಯವು ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮುಂದಿನ ಐದು ವರ್ಷಗಳ ಕಾಲ ಮಲಯಾಳಂ ನಾಡನ್ನು ಆಳುವವರು ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ರಾಜ್ಯದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಪ್ರತಿ ಪಕ್ಷಗಳೂ ತಮ್ಮದೇ ಆದ ಲೆಕ್ಕಾಚಾರದಲ್ಲಿವೆ. ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಅಥವಾ ಎಲ್‌ಡಿಎಫ್ (LDF) ಮತ್ತೊಮ್ಮೆ ಆಡಳಿತ ಹಿಡಿಯುವ ಪೂರ್ಣ ವಿಶ್ವಾಸದಲ್ಲಿದೆ. ಈ ಬಾರಿ ಆಡಳಿತ ಬದಲಾವಣೆ ಖಚಿತ ಎಂದು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಯುಡಿಎಫ್ (UDF) ಬಲವಾಗಿ ಪ್ರತಿಪಾದಿಸುತ್ತಿದ್ದು, ಅದಕ್ಕೆ ತಕ್ಕಂತೆ ಎಕ್ಸಿಟ್‌ ಪೋಲ್‌ ಸಮೀಕ್ಷೆಗಳೂ ಬಂದಿವೆ. ಇನ್ನೊಂದೆಡೆ ಬಿಜೆಪಿ ಒಂದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ತನ್ನ ಶಕ್ತಿ ಪ್ರದರ್ಶಿಸುವ ನಿರೀಕ್ಷೆಯಲ್ಲಿದೆ.

ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ತಯಾರಿ

ಮತ ಎಣಿಕೆಗೂ ಮುನ್ನವೇ ಕಾಂಗ್ರೆಸ್ ಗೆಲುವಿನ ವಿಶ್ವಾಸದಲ್ಲಿದೆ. ಹತ್ತು ವರ್ಷಗಳ ನಂತರ ಅಧಿಕಾರಕ್ಕೆ ಬರುತ್ತಿದ್ದೇವೆ ಎಂದು ನಂಬಿರುವ ಕೆಪಿಸಿಸಿ, ತನ್ನ ಕಚೇರಿಯ ಮುಂದೆ ಈಗಾಗಲೇ ಬೃಹತ್ ಪೆಂಡಾಲ್‌ ಹಾಕಿಸಿದೆ. ಪಾಯಸ, ಸಿಹಿತಿಂಡಿ, ಪಟಾಕಿ ಎಲ್ಲವೂ ಸಜ್ಜಾಗಿದ್ದು, ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮತ್ತು ಕೆ.ಸಿ. ವೇಣುಗೋಪಾಲ್ ಸೇರಿದಂತೆ ಪ್ರಮುಖ ನಾಯಕರು ತಿರುವನಂತಪುರಂನಲ್ಲಿ ಮೊಕ್ಕಾಂ ಹೂಡಿದ್ದಾರೆ. ಆಡಳಿತ ವಿರೋಧಿ ಅಲೆಯಿಂದಾಗಿ ಯುಡಿಎಫ್ 90ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬುದು ಅವರ ಲೆಕ್ಕಾಚಾರ.

"ಪೆಂಡಾಲ್‌ ಧೂಳೀಪಟವಾಗಲಿದೆ" ಎಂದ ಸಿಪಿಎಂ!

ಕಾಂಗ್ರೆಸ್ ಹಾಕಿರುವ ಪೆಂಡಾಲ್‌ ನೋಡಿ ಸಿಪಿಎಂ ವ್ಯಂಗ್ಯವಾಡಿದೆ. "ಅಧಿಕಾರ ಸಿಗುತ್ತದೆ ಎಂಬ ಭ್ರಮೆಯಲ್ಲಿ ಹಾಕಿರುವ ಪೆಂಡಾಲ್‌ ಸಂಜೆಯ ವೇಳೆಗೆ ಧೂಳೀಪಟವಾಗಲಿದೆ" ಎಂದು ಎಡರಂಗದ ನಾಯಕರು ಹೇಳಿದ್ದಾರೆ. ಎಕ್ಸಿಟ್ ಪೋಲ್‌ಗಳು ವಿರುದ್ಧವಾಗಿದ್ದರೂ, ಪಿಣರಾಯಿ ವಿಜಯನ್ ಅವರು ತಮ್ಮ ಆಡಳಿತದ ಮೇಲೆ ನಂಬಿಕೆ ಇಟ್ಟಿದ್ದು, ಫಲಿತಾಂಶ ಬಂದ ನಂತರವಷ್ಟೇ ಕಣ್ಣೂರಿನಿಂದ ರಾಜಧಾನಿಗೆ ಆಗಮಿಸಲಿದ್ದಾರೆ.

ಬದಲಾವಣೆಯ ನಿರೀಕ್ಷೆಯಲ್ಲಿ ಬಿಜೆಪಿ

ಬಿಜೆಪಿ ಕೂಡ ಈ ಬಾರಿ ದೊಡ್ಡ ಬದಲಾವಣೆಯನ್ನು ನಿರೀಕ್ಷಿಸುತ್ತಿದೆ. ತಿರುವನಂತಪುರಂನ ಮುರಾರ್ಜಿ ಭವನದಲ್ಲಿ ಫಲಿತಾಂಶ ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ರಾಜೀವ್ ಚಂದ್ರಶೇಖರ್ ಮತ್ತು ವಿ. ಮುರಳೀಧರನ್ ಸೇರಿದಂತೆ ಪ್ರಮುಖ ನಾಯಕರು ಹಾಜರಿರಲಿದ್ದಾರೆ. ಕೇರಳದ ಇತಿಹಾಸದಲ್ಲಿ ಈ ಬಾರಿ ಕಮಲದ ಹೂವುಗಳು ಹೆಚ್ಚು ಅರಳಲಿವೆ ಎಂಬ ನಂಬಿಕೆ ಅವರದ್ದು. ಬೆಳಿಗ್ಗೆ 8 ಗಂಟೆಗೆ ಮತಪೆಟ್ಟಿಗೆಗಳು ತೆರೆಯುತ್ತಿದ್ದಂತೆ ಕೇರಳದ ರಾಜಕೀಯ ತಾಪಮಾನ ಕೂಡ ಏರಿಕೆಯಾಗಲಿದೆ. ಅಂತಿಮವಾಗಿ ಕೇರಳದ ಜನತೆ ಯಾರನ್ನು ಕೈಹಿಡಿಯಲಿದ್ದಾರೆ ಎಂಬುದು ಮಧ್ಯಾಹ್ನದ ವೇಳೆಗೆ ಬಹುತೇಕ ಸ್ಪಷ್ಟವಾಗಲಿದೆ.