ಅಸ್ಸಾಂ, ಪ.ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಲಿದ್ದು, ಫಲಿತಾಂಶ ಕುತೂಹಲ ಕೆರಳಿಸಿದೆ. ಬಿಜೆಪಿ, ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರಮುಖ ಪಕ್ಷಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು ಚುನಾವಣೋತ್ತರ ಸಮೀಕ್ಷೆಗಳು ಮಿಶ್ರ ಫಲಿತಾಂಶದ ಭವಿಷ್ಯ ನುಡಿದಿವೆ.

ನವದೆಹಲಿ (ಮೇ.4): ದೇಶದಲ್ಲಿ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಬಹುದು ಎಂದು ನಿರೀಕ್ಷಿಸಲಾಗಿರುವ ಅಸ್ಸಾಂ, ಪ.ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಮಧ್ಯಾಹ್ನ ಅಥವಾ ಸಂಜೆಯ ಹೊತ್ತಿಗೆ ನಿಚ್ಚಳ ಫಲಿತಾಂಶ ಹೊರಬೀಳಲಿದೆ.

Add Asianetnews Kannada as a Preferred SourcegooglePreferred

ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್, ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ-ಬಿಜೆಪಿ ಕೂಟ, ಡಿಎಂಕೆ-ಕಾಂಗ್ರೆಸ್‌ ಕೂಟ ಹಾಗೂ ವಿಜಯ್ ಅವರ ಟಿವಿಕೆ, ಕೇರಳದಲ್ಲಿ ಯುಡಿಎಫ್‌, ಎಲ್‌ಡಿಎಫ್‌, ಬಿಜೆಪಿ, ಪ.ಬಂಗಾಳದಲ್ಲಿ ಟಿಎಂಸಿ-ಬಿಜೆಪಿ ಹಾಗೂ ಪುದುಚೇರಿಯಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಕೂಟಗಳ ನಡುವೆ ಹಣಾಹಣಿ ಏರ್ಪಟ್ಟಿದೆ.

ಇದರ ಜತೆಗೆ ಈ ಬಾರಿ ಸಾಂಪ್ರದಾಯಿಕ ರೀತಿಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗದೇ ಅಚ್ಚರಿಯ ಫಲಿತಾಂಶದ ಭವಿಷ್ಯ ನುಡಿದಿವೆ. ಹೀಗಾಗಿ ಅವು ನಿಜವಾಗಲಿವೆಯೇ ಎಂಬುದು ಎಣಿಕೆ ಬಳಿಕ ಗೊತ್ತಾಗಲಿದೆ.

ಹಾಗೆಯೇ ಕೆಲವು ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣಾ ಮತ ಎಣಿಕೆ ಕೂಡ ಸೋಮವಾರವೇ ನಡೆಯಲಿದೆ.

ಅಸ್ಸಾಂ:

ಅಸ್ಸಾಂನಲ್ಲಿ ಬಿಜೆಪಿ 3ನೇ ಬಾರಿ ಗೆಲ್ಲುವ ತವಕದಲ್ಲಿದ್ದರೆ, ಕಾಂಗ್ರೆಸ್ ಪಕ್ಷ 10 ವರ್ಷಗಳ ಜಯದ ಬರ ನೀಗಿಸುವ ಇರಾದೆ ಹೊಂದಿದೆ. ರಾಜ್ಯದ 126 ವಿಧಾನಸಭಾ ಕ್ಷೇತ್ರಗಳಲ್ಲಿ 722 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹಾಲಿ ಸಿಎಂ, ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ 3ನೇ ಬಾರಿ ಸಿಎಂ ಆಗುವ ಇರಾದೆ ಹೊಂದಿದ್ದಾರೆ. ಕಾಂಗ್ರೆಸ್‌ನ ಗೌರವ್‌ ಗೊಗೋಯ್‌ ಮೊದಲ ಬಾರಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಮರಳಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.

ಪ. ಬಂಗಾಳ:

5 ರಾಜ್ಯಗಳ ಭಾರೀ ಹಣಾಹಣಿಗೆ ಸಾಕ್ಷಿಯಾಗಿರುವ 294 ಸದಸ್ಯ ಬಲದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ-ಬಿಜೆಪಿ ನಡುವೆ ಕಂಡು ಕೇಳರಿಯದ ನೇರ ಸ್ಪರ್ಧೆ ಏರ್ಪಟ್ಟಿದೆ. 77 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಫಲ್ಟಾ ಎಂಬ ಕ್ಷೇತ್ರದಲ್ಲಿ ಮೇ 21ಕ್ಕೆ ಮರುಮತದಾನ ನಡೆಯಲಿರುವ ಕಾರಣ ಆ ಕ್ಷೇತ್ರ ಹೊರತುಪಡಿಸಿ ಮಿಕ್ಕ 293 ಸ್ಥಾನಗಳ ಫಲಿತಾಂಶ ಘೋಷಣೆಗೆ ವೇದಿಕೆ ಸಜ್ಜಾಗಿದೆ. 6 ಸಮೀಕ್ಷೆಗಳು ಮೊದಲ ಬಾರಿ ಬಿಜೆಪಿ ಗೆಲ್ಲಲಿದೆ ಎಂದಿವೆ, 2 ಟಿಎಂಸಿ ಪರ ಭವಿಷ್ಯ ಹೇಳಿವೆ.

ತ.ನಾಡು:

ಡಿಎಂಕೆ, ಅಣ್ಣಾಡಿಎಂಕೆ ಮತ್ತು ವಿಜಯ್‌ರ ಟಿವಿಕೆ ಪಕ್ಷದ ತ್ರಿಕೋನ ಹಣಾಹಣಿಗೆ ಸಾಕ್ಷಿಯಾದ 234 ಸ್ಥಾನ ಬಲದ ತಮಿಳ್ನಾಡಲ್ಲಿ ಫಲಿತಾಂಶ ಕುತೂಹಲ ಕೆರಳಿಸಿದೆ. ಕಾರಣ, ಸಾಂಪ್ರದಾಯಿಕ ಅಣ್ಣಾಡಿಎಂಕೆ-ಡಿಎಂಕೆ ಬದಲು ವಿಜಯ್‌ ಅವರ ಟಿವಿಕೆ ಗೆಲ್ಲಲಿದೆ ಎಂದು ಕೆಲವು ಸಮೀಕ್ಷೆಗಳು ಹೇಳಿವೆ. ಆದಾಗ್ಯೂ ಎಂ.ಕೆ. ಸ್ಟಾಲಿನ್ ಪರ ಕೆಲವು, ಅಣ್ಣಾಡಿಎಂಕೆ ಪರ ಕೆಲವು ಸಮೀಕ್ಷೆಗಳು ಒಲವು ತೋರಿವೆ. 62 ಎಣಿಕೆ ಕೇಂದ್ರಗಳಲ್ಲಿ ಎಣಿಕೆ ನಡೆಯಲಿದೆ.

ಕೇರಳ:

140 ಸ್ಥಾನ ಬಲದ ಕೇರಳದಲ್ಲಿ ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್‌, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಹಾಗೂ ಬಿಜೆಪಿ ನಡುವೆ ತ್ರಿಕೋನ ಕದನ ನಡೆದಿದೆ.ಒಟ್ಟು 883 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಹೆಚ್ಚಿನ ಸಮೀಕ್ಷೆಗಳು ನಿಕಟ ಸ್ಪರ್ಧೆ ಊಹಿಸಿದ್ದರೂ ಯುಡಿಎಫ್‌ಗೆ ಮುನ್ನಡೆ ನೀಡಿವೆ.

ಪುದುಚೇರಿ:

30 ಸ್ಥಾನ ಬಲದ ಪುದುಚೇರಿಯಲ್ಲಿ ಎನ್‌ಡಿಎ ಕೂಟದ ಭಾಗವಾದ ಎನ್‌ಆರ್‌ ಕಾಂಗ್ರೆಸ್‌ ಹಾಗೂ ಡಿಎಂಕೆ-ಕಾಂಗ್ರೆಸ್‌ ಕೂಟಗಳ ನಡುವೆ ಸ್ಪರ್ಧೆ ಇದೆ. ಹಾಲಿ ಸಿಎಂ, ಎನ್‌ಡಿಎನ ರಂಗಸ್ವಾಮಿ ಸೇರಿ 294 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಎನ್‌ಡಿಎ ಪುನಃ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ.

- ಬಂಗಾಳದಲ್ಲಿ ಸಿಎಂ ಮಮತಾ ಭದ್ರಕೋಟೆ ಬಿಜೆಪಿ ಛಿದ್ರಮಾಡುತ್ತಾ?

- ತ.ನಾಡಲ್ಲಿ ಸ್ಟಾಲಿನ್‌ಗೆ ಪಳನಿ, ವಿಜಯ್‌ ಪೈಕಿ ಏಟು ನೀಡೋರ್‍ಯಾರು?

- ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್‌ ನಿರೀಕ್ಷೆ । ಕೇರಳ ಕಾಂಗ್ರೆಸ್‌ನ ಪಾಲು?

- ಪುದುಚೇರೀಲಿ ಸತತ 2ನೇ ಬಾರಿ ಎನ್‌ಡಿಎ ಕೂಟಕ್ಕೆ ಅಧಿಕಾರ ನಿರೀಕ್ಷೆ

ಪಶ್ಚಿಮ ಬಂಗಾಳ

  • ಒಟ್ಟು ಸ್ಥಾನ 294
  • ಬಹುಮತಕ್ಕೆ 148

ತಮಿಳುನಾಡು

  • ಒಟ್ಟು ಸ್ಥಾನ 234
  • ಬಹುಮತಕ್ಕೆ 118

ಕೇರಳ

  • ಒಟ್ಟು ಸ್ಥಾನ 140
  • ಬಹುಮತಕ್ಕೆ 71

ಅಸ್ಸಾಂ

  • ಒಟ್ಟು ಸ್ಥಾನ 126
  • ಬಹುಮತಕ್ಕೆ 63

ಪುದುಚೇರಿ

  • ಒಟ್ಟು ಸ್ಥಾನ 30
  • ಬಹುಮತಕ್ಕೆ 16