ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಡಿಎಂಕೆ, ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ಜೊತೆಗೆ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷದ ಭವಿಷ್ಯ ಇಂದು ನಿರ್ಧಾರವಾಗಲಿದೆ. ದಾಖಲೆಯ 85.10% ಮತದಾನವಾಗಿದ್ದು, ಬಿಗಿ ಭದ್ರತೆಯ ನಡುವೆ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.

ಚೆನ್ನೈ (ಮೇ 4): ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಇಂದು (ಸೋಮವಾರ) ಆರಂಭವಾಗಿದೆ. ಕಳೆದ ಏಪ್ರಿಲ್ 23 ರಂದು ನಡೆದ ಮತದಾನದ ಫಲಿತಾಂಶ ಇಂದು ಹೊರಬೀಳಲಿದ್ದು, ತಮಿಳುನಾಡಿನ ಮುಂದಿನ ಸರ್ಕಾರ ಯಾರದ್ದು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತಿಹಾಸ ನಿರ್ಮಿಸುತ್ತಾರಾ ದಳಪತಿ?

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಈ ಬಾರಿ ಹಿಂದೆಂದೂ ಕಾಣದ ಕುತೂಹಲ ಮೂಡಿದೆ. ಡಿಎಂಕೆ ಮತ್ತೆ ಅಧಿಕಾರ ಉಳಿಸಿಕೊಂಡು ಇತಿಹಾಸ ಸೃಷ್ಟಿಸುತ್ತದೆಯೇ? ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ ಮತ್ತೆ ಗದ್ದುಗೆ ಹಿಡಿಯಲಿದೆಯೇ? ಎಲ್ಲಕ್ಕಿಂತ ಹೆಚ್ಚಾಗಿ, ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಅಧ್ಯಕ್ಷ, ನಟ ವಿಜಯ್ ಅಧಿಕಾರ ಹಿಡಿಯುತ್ತಾರಾ? ಅಥವಾ ಬಲಿಷ್ಠ ವಿರೋಧ ಪಕ್ಷದ ನಾಯಕರಾಗಿ ವಿಧಾನಸಭೆ ಪ್ರವೇಶಿಸುತ್ತಾರಾ? ಎಂಬ ಪ್ರಶ್ನೆಗಳಿಗೆ ಇಂದು ಸಂಜೆಯ ವೇಳೆಗೆ ಉತ್ತರ ಸಿಗಲಿದೆ.

ಮತ ಎಣಿಕೆ ಸಿದ್ಧತೆ ಮತ್ತು ಭದ್ರತೆ

ರಾಜ್ಯಾದ್ಯಂತ ಸ್ಥಾಪಿಸಲಾದ 62 ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಇವಿಎಂ ಯಂತ್ರಗಳನ್ನು ಇರಿಸಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. 15 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಮತ ಎಣಿಕೆ ಕೇಂದ್ರಗಳ ಸುತ್ತ 18 ಸಾವಿರ ಪೊಲೀಸರು ಹಾಗೂ 70 ಕಂಪನಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಒಟ್ಟು 1 ಲಕ್ಷ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಬೆಳಿಗ್ಗೆ 11 ಗಂಟೆಯ ವೇಳೆಗೆ ಆರಂಭಿಕ ಟ್ರೆಂಡ್ ತಿಳಿಯಲಿದ್ದು, ಸಂಜೆ ಅಥವಾ ಮಧ್ಯರಾತ್ರಿಯ ವೇಳೆಗೆ ಅಧಿಕೃತ ಫಲಿತಾಂಶಗಳು ಹೊರಬೀಳಲಿವೆ.

ಪ್ರಮುಖ ಅಭ್ಯರ್ಥಿಗಳು ಮತ್ತು ದಾಖಲೆ ಮತದಾನ

ತಮಿಳುನಾಡಿನಲ್ಲಿ ಈ ಬಾರಿ ಒಟ್ಟು 4,023 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 5.73 ಕೋಟಿ ಮತದಾರರ ಪೈಕಿ 4.88 ಕೋಟಿ ಜನರು ಹಕ್ಕು ಚಲಾಯಿಸಿದ್ದು, ದಾಖಲೆಯ 85.10% ಮತದಾನವಾಗಿದೆ. ಇದು ರಾಜ್ಯದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರೆ, ಎಡಪ್ಪಾಡಿ ಕೆ. ಪಳನಿಸ್ವಾಮಿ, ಎಡಪ್ಪಾಡಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಇನ್ನು ನಟ ಜೋಸೆಫ್‌ ವಿಜಯ್ ತಿರುಚ್ಚಿ ಪೂರ್ವ ಮತ್ತು ಪೆರಂಬೂರ್ ಕ್ಷೇತ್ರಗಳಿಂದ ಕಣದಲ್ಲಿದ್ದಾರೆ. ನಾಮ್ ತಮಿಳರ್ ಕಕ್ಷಿಯ ಮುಖ್ಯಸ್ಥ ಸೀಮನ್ ಕಾರೈಕುಡಿ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.