ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವಿನ ವೈಯಕ್ತಿಕ ದ್ವೇಷವು ಡಕಾಯಿತಿ ಪ್ರಕರಣವಾಗಿ ಮಾರ್ಪಟ್ಟಿದೆ. ಕೇರಳ ಮೂಲದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ತಮಿಳುನಾಡಿನಿಂದ ಸ್ನೇಹಿತರನ್ನು ಕರೆಸಿದ್ದ ವಿದ್ಯಾರ್ಥಿ ಮತ್ತು ಆತನ ಗ್ಯಾಂಗ್, ಹಲ್ಲೆ ನಡೆಸಿ ಹಣ, ಮೊಬೈಲ್, ಲ್ಯಾಪ್ಟಾಪ್ ದೋಚಿದೆ.
ಬೆಂಗಳೂರು (ಏ.26): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವಿನ ವೈಯಕ್ತಿಕ ದ್ವೇಷ ಈಗ ದೊಡ್ಡ ಕ್ರೈಮ್ ಸ್ಟೋರಿಯಾಗಿ ಬದಲಾಗಿದೆ. ಕೇರಳ ಮೂಲದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ತಮಿಳುನಾಡಿನಿಂದ ಸ್ನೇಹಿತರನ್ನು ಕರೆಸಿದ್ದ ವಿದ್ಯಾರ್ಥಿ ಹಾಗೂ ಆತನ ಗ್ಯಾಂಗ್, ಹಲ್ಲೆ ಮಾತ್ರವಲ್ಲದೆ ಡಕಾಯಿತಿ ನಡೆಸಿ ಈಗ ಪೊಲೀಸರ ಬಲೆಗೆ ಬಿದ್ದಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಬಂಧಿತ ಆರೋಪಿಗಳನ್ನು ಅಭಿನೇಶ್, ಕಲೈ ವೆಂದನ್, ವಿಮಲ್ ರಾಜ್, ಕುಮಾರನ್, ಪ್ರೇಮ್ ಕುಮಾರ್ ಹಾಗೂ ನವೀನ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಪೈಕಿ ಅಭಿನೇಶ್ ತಮಿಳುನಾಡು ಮೂಲದವನಾಗಿದ್ದು, ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಮಾಡುತ್ತಿದ್ದ. ಇದೇ ಕಾಲೇಜಿನಲ್ಲಿ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗಳಿಗೂ ಹಾಗೂ ಅಭಿನೇಶ್‌ನಿಗೂ ಸಣ್ಣ ವಿಚಾರಕ್ಕೆ ಗಲಾಟೆಯಾಗಿತ್ತು. ಈ ದ್ವೇಷವನ್ನು ತೀರಿಸಿಕೊಳ್ಳಲು ಅಭಿನೇಶ್ ತಮಿಳುನಾಡಿನಲ್ಲಿದ್ದ ತನ್ನ ಸ್ನೇಹಿತರಿಗೆ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಹೇಳಿದ್ದ.
ಮನೆಗೆ ನುಗ್ಗಿ ದಾಂಧಲೆ:
ಹಲ್ಲೆಗೊಳಗಾದ ಇರ್ಫಾನ್ ಮೊಹಮ್ಮದ್, ಆದರ್ಶ, ಡಾರ್ವಿನ್ ಸೇರಿದಂತೆ ಒಟ್ಟು 11 ಮಂದಿ ವಿದ್ಯಾರ್ಥಿಗಳು ಕೋಣನಕುಂಟೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಕಳೆದ ಏಪ್ರಿಲ್ 17ರಂದು ರಾತ್ರಿ 10.30ರ ಸುಮಾರಿಗೆ ಅಭಿನೇಶ್ ತನ್ನ ಗ್ಯಾಂಗ್ ಜೊತೆ ಈ ಮನೆಗೆ ನುಗ್ಗಿದ್ದಾನೆ. ಆ ಸಮಯದಲ್ಲಿ ಮನೆಯಲ್ಲಿದ್ದ ಏಳು ಮಂದಿ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಮಾಡಲು ಬಂದು ಡಕಾಯಿತಿ ಮಾಡಿದರು!
ಕೇವಲ ಹಲ್ಲೆ ನಡೆಸುವುದಕ್ಕೆ ಬಂದಿದ್ದ ಈ ಗ್ಯಾಂಗ್, ಅಲ್ಲಿನ ಪರಿಸ್ಥಿತಿ ಕಂಡು ಡಕಾಯಿತಿಗೆ ಇಳಿದಿದೆ. ವಿದ್ಯಾರ್ಥಿಗಳನ್ನು ಬೆದರಿಸಿ ಅವರ ಮೊಬೈಲ್‌ಗಳಿಂದ ಬರೋಬ್ಬರಿ 10 ಬಾರಿ ಫೋನ್ ಪೇ (PhonePe) ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ನಾಲ್ಕು ಮೊಬೈಲ್ ಫೋನ್‌ಗಳು, ಲ್ಯಾಪ್ಟಾಪ್‌ಗಳು ಮತ್ತು ಒಂದು ಬೈಕ್ ಅನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಪೊಲೀಸರ ಭರ್ಜರಿ ಕಾರ್ಯಾಚರಣೆ:
ಘಟನೆ ಸಂಬಂಧ ಸಂತ್ರಸ್ತ ವಿದ್ಯಾರ್ಥಿಗಳು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ, ಆರೋಪಿಗಳು ತಮಿಳುನಾಡಿಗೆ ಪರಾರಿಯಾಗಿರುವುದನ್ನು ಪತ್ತೆ ಹಚ್ಚಿದರು. ತಮಿಳುನಾಡಿಗೆ ತೆರಳಿದ ವಿಶೇಷ ಪೊಲೀಸ್ ತಂಡ ಆರು ಮಂದಿ ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
ಬಂಧಿತರ ಪೈಕಿ ಅಭಿನೇಶ್ ಹೊರತುಪಡಿಸಿ ಉಳಿದವರೆಲ್ಲರೂ ವಿದ್ಯಾಭ್ಯಾಸ ಮುಗಿಸಿ ಕೆಲಸ ಮಾಡುತ್ತಿದ್ದವರು. ಇವರ ಮೇಲೆ ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣಗಳಿರಲಿಲ್ಲ. ಕೇವಲ ಸ್ನೇಹಿತನ ಮೇಲಿನ ಅಭಿಮಾನಕ್ಕೆ ಬಂದು ಈಗ ಡಕಾಯಿತಿ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಆರೋಪಿಗಳಿಂದ 3 ಲಕ್ಷ ರೂಪಾಯಿ ಮೌಲ್ಯದ ಎರಡು ದ್ವಿಚಕ್ರ ವಾಹನಗಳು, ನಾಲ್ಕು ಮೊಬೈಲ್ ಹಾಗೂ ಎರಡು ಲ್ಯಾಪ್ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.


