Kerala flyover girder collaps: ನಿರ್ಮಾಣ ಹಂತದ ಮೇಲ್ಸೇತುವೆಯೊಂದರ ಗ್ರಿಡರ್( ಸಿಮೆಂಟ್ ಕಂಬ) ಕೆಳಗೆ ರಸ್ತೆಯಲ್ಲಿ ಚಲಿಸುತ್ತಿದ್ದ ಪಿಕಪ್ ವಾಹನವೊಂದರ ಮೇಲೆ ಬಿದ್ದ ಪರಿಣಾಮ ಪಿಕಪ್ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಸಿಮೆಂಟ್ ಪಿಲ್ಲರ್ ಬಿದ್ದ ಏಟಿಗೆ ಪಿಕಪ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಪಿಕಪ್ ವಾಹನದ ಮೇಲೆ ಬಿದ್ದ ಮೇಲ್ಸೇತುವೆಯ ಗ್ರೀಡರ್: ಚಾಲಕ ಸಾವು
ಆಲಪ್ಪುಳ: ನಿರ್ಮಾಣ ಹಂತದ ಮೇಲ್ಸೇತುವೆಯೊಂದರ ಗ್ರಿಡರ್( ಸಿಮೆಂಟ್ ಕಂಬ) ಕೆಳಗೆ ರಸ್ತೆಯಲ್ಲಿ ಚಲಿಸುತ್ತಿದ್ದ ಪಿಕಪ್ ವಾಹನವೊಂದರ ಮೇಲೆ ಬಿದ್ದ ಪರಿಣಾಮ ಪಿಕಪ್ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಸಿಮೆಂಟ್ ಪಿಲ್ಲರ್ ಬಿದ್ದ ಏಟಿಗೆ ಪಿಕಪ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೇರಳದ ಎರಾಮಲ್ಲೂರಿನಲ್ಲಿ ಅರೂರ್-ತುರವೂರು ಎಲಿವೇಟೆಡ್ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ದುರಂತ ನಡೆದಿದೆ. ಮೃತಪಟ್ಟ ಪಿಕಪ್ ವಾಹನ ಚಾಲಕನನ್ನು ಪಲ್ಲಿಪ್ಪಡ್ ಮೂಲದ ರಾಜೇಶ್ (48) ಎಂದು ಗುರುತಿಸಲಾಗಿದೆ. ಘಟನೆ ನಡೆದ ಸುಮಾರು 4 ಗಂಟೆಗಳ ನಂತರ ನಜ್ಜುಗುಜ್ಜಾದ ವಾಹನದೊಳಗೆ ಸಿಲುಕಿಕೊಂಡಿದ್ದ ಅವರ ದೇಹವನ್ನು ಹೊರಗೆ ತೆಗೆಯಲಾಯಿತು.
ರಾಜೇಶ್ ಅವರು ತಮ್ಮ ಪಿಕಪ್ ವಾಹನದಲ್ಲಿ ಎರ್ನಾಕುಲಂನಿಂದ ಪತ್ತನಂತಿಟ್ಟಕ್ಕೆ ಮೊಟ್ಟೆಗಳನ್ನು ಸಾಗಿಸುತ್ತಿದ್ದರು. ಗ್ರಿಡರ್ ಬಿದ್ದ ಏಟಿಗೆ ಅವರ ಪಿಕಪ್ ವಾಹನ ಸಂಪೂರ್ಣ ನಜುಗುಜ್ಜಾಗಿದೆ. ಈ ಅಪಘಾತದ ಬಗ್ಗೆ ತನಿಖೆಗೆ ಕೇರಳ ಸಚಿವ ಪಿಎ ಮೊಹಮ್ಮದ್ ರಿಯಾಸ್ ಆದೇಶಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೊಂದಿಗೆ ಸಮಾಲೋಚಿಸಿದ ನಂತರ ತನಿಖೆ ನಡೆಸಿ ಇಂದೇ ವರದಿ ಸಲ್ಲಿಸುವಂತೆ ಲೋಕೋಪಯೋಗಿ ಕಾರ್ಯದರ್ಶಿಗೆ ಅವರು ಸೂಚಿಸಿದ್ದಾರೆ.
4 ಗಂಟೆಗಳ ಬಳಿಕ ಕ್ರೇನ್ ತರಿಸಿ ಶವ ಹೊರಕ್ಕೆ
ನಜ್ಜುಗುಜ್ಜಾದ ವಾಹನದಿಂದ ಶವವನ್ನು ಹೊರತೆಗೆಯುವುದಕ್ಕೆ ಬೃಹತ್ ಗಾತ್ರದ ಗ್ರೀಡರ್‌ಗಳ ಅವಶೇಷಗಳನ್ನು ಮೇಲೆತ್ತಲು ಕ್ರೇನ್ ಅನ್ನೇ ಸ್ಥಳಕ್ಕೆ ತರಬೇಕಾಯ್ತು. ನಂತರ ಚಾಲಕ ರಾಜೇಶ್ ಅವರ ಶವವನ್ನು ಹೊರ ತೆಗೆದು ಆಲಪ್ಪುಳ ಜಿಲ್ಲಾ ಜನರಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸಲಾಯಿತು.
ಅಪಘಾತದ ನಂತರ, ಪೊಲೀಸರು ಆರೂರ್-ತುರವೂರು ರಸ್ತೆಯಲ್ಲಿ ಸಂಚಾರ ತಡೆ ಮಾಡಿದ್ದರು. ಆದರೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದರಿಂದ ಈ ಮಾರ್ಗದಲ್ಲಿ ಸಂಚಾರ ಪುನಃಸ್ಥಾಪಿಸಲಾಯಿತು. ಪ್ರಸ್ತುತ, ಅಪಘಾತ ಸ್ಥಳದ ಪೂರ್ವ ಭಾಗದಲ್ಲಿರುವ ಸರ್ವಿಸ್ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಈ ನಡುವೆ ಚೆರ್ತಲಾದಿಂದ ಎರ್ನಾಕುಲಂಗೆ ಪ್ರಯಾಣಿಸುವ ವಾಹನಗಳನ್ನು ಆರೂರ್ ದೇವಸ್ಥಾನದ ಬಳಿ ಅರೂಕುಟ್ಟಿ ಮೂಲಕ ತಿರುಗಿಸಲಾಗುತ್ತಿದೆ.
ಹೊಸ ಗ್ರೀಡರ್‌ಗಳ ಇರಿಸುವ ವೇಳೆ ದುರಂತ
ನಿರ್ಮಾಣದ ಸಮಯದಲ್ಲಿ ಸುಮಾರು 80 ಟನ್ ತೂಕದ ಎರಡು ಗ್ರೀಡರ್‌ಗಳು ಕೆಳಗೆ ಕುಸಿದಾಗ ದುರಂತ ಸಂಭವಿಸಿದೆ. ಹೊಸ ಗ್ರೀಡರ್‌ಗಳನ್ನು ಇರಿಸುವಾಗ, ಹಿಂದೆ ಅಳವಡಿಸಲಾದ ಎರಡು ಗ್ರೀಡರ್‌ಗಳು ಜಾರಿ ಕೆಳಗೆ ಬಿದ್ದ ಪರಿಣಾಮ ದುರಂತ ನಡೆದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಗ್ರೀಡರ್‌ಗಳೂ ಜ್ಯಾಕ್‌ನಿಂದ ಜಾರಿ ನೆಲಕ್ಕೆ ಬಿದ್ದಿವೆ. 12.75 ಕಿಲೋಮೀಟರ್ ಉದ್ದದ ಮೇಲ್ಸೇತುವೆ ಹೆದ್ದಾರಿ ಯೋಜನೆಯ ಸುಮಾರು 70% ದಷ್ಟು ಕಾಮಗಾರಿ ಇಲ್ಲಿಯವರೆಗೆ ಪೂರ್ಣಗೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಕಾಮಗಾರಿ ವೇಳೆ ರಸ್ತೆ ಸಂಚಾರ ನಿರ್ಬಂಧ ಮಾಡಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಷ್ಟೊಂದು ದೊಡ್ಡ ಗ್ರೀಡರ್‌ಗಳನ್ನು ಅಳವಡಿಸುವಾಗ ರಸ್ತೆಯನ್ನು ಮುಚ್ಚಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರಸ್ತೆಯನ್ನು ಮುಚ್ಚಿದ್ದರೆ, ಈ ಅಪಘಾತವನ್ನು ತಪ್ಪಿಸಬಹುದಿತ್ತು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅರೂರು ಶಾಸಕಿ ದಲೀಮಾ ಜೊಜೊ, ಗ್ರೀಡರ್‌ಗನ್ನು ಅಳವಡಿಸುವ ಸಮಯದಲ್ಲಿ ಸಂಚಾರವನ್ನು ನಿಲ್ಲಿಸಲಾಗಿಲ್ಲ ಎಂದು ಹೇಳಿದರು. ಚಾಲಕನ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ ಶಾಸಕರು, ರಾಷ್ಟ್ರೀಯ ಹೆದ್ದಾರಿ 66 ಪ್ರಮುಖ ಮಾರ್ಗವಾಗಿರುವುದರಿಂದ ನಿರ್ಮಾಣ ಸ್ಥಳದ ಸಮೀಪ ವಾಹನಗಳನ್ನು ಹಾದುಹೋಗಲು ಅನುಮತಿಸಲಾಗಿತ್ತು ಎಂದು ಹೇಳಿದರು.
ಪ್ರಸ್ತುತ ಎಲಿವೇಟೆಡ್ ಹೆದ್ದಾರಿಯ ನಿರ್ಮಾಣ ಕಾರ್ಯ ನಡೆಯುತ್ತಿರುವ ಈ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಸೇವಾ ರಸ್ತೆಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಇದುವರೆಗೆ ಸುಮಾರು 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಳೆದ ಆಗಸ್ಟ್‌ನಲ್ಲಿ, ನಿರ್ಮಾಣದ ಸಮಯದಲ್ಲಿ ಅದೇ ಮೇಲೇತುವೆಯ ಒಂದು ಬೀಮ್ ಕುಸಿದು ಬಿದ್ದಿತ್ತು. ಆದರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲದ ಕಾರಣ ಅಧಿಕಾರಿಗಳು ಯಾವುದೇ ಸಂಚಾರ ನಿರ್ಬಂಧಗಳನ್ನು ವಿಧಿಸದೆ ಕೆಲಸವನ್ನು ಮುಂದುವರೆಸಿದರು. ಈ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಿಸಲಾದ ಆರೂರು-ತುರವೂರು ಎಲಿವೇಟೆಡ್ ಹೆದ್ದಾರಿಯು ದೇಶದ ಅತಿ ಉದ್ದದ ಫ್ಲೈಒವರ್ ಎನಿಸಲಿದೆ.
ಇದನ್ನೂ ಓದಿ: ಡಾ ಉಮರೇ ದೆಹಲಿ ಬಾಂಬರ್ ಡಿಎನ್‌ಎ ಪರೀಕ್ಷೆಯಿಂದ ಸಾಬೀತು: ಅಯೋಧ್ಯೆಯೂ ಆಗಿತ್ತು ಟಾರ್ಗೆಟ್
ಇದನ್ನೂ ಓದಿ: ಜಿಎಸ್ಪಿ ಇಳಿಕೆ ಎಫೆಕ್ಟ್ ಹಣದುಬ್ಬರ ಶೇ.0.25ಕ್ಕೆ ಇಳಿಕೆ:11 ವರ್ಷದಲ್ಲೇ ಕನಿಷ್ಠ
