Asianet Suvarna News Asianet Suvarna News

ತಮಿಳ್ನಾಡು ಮೀನುಗಾರರ ಹಿತ ಬಲಿ ಕೊಟ್ಟಿದ್ದು ಇಂದಿರಾ ಗಾಂಧಿ, ಡಿಎಂಕೆ: ಪ್ರಧಾನಿ ಮೋದಿ ಆರೋಪ

ಭಾರತ-ಶ್ರೀಲಂಕಾ ನಡುವಿನ ಕಚತೀವು ದ್ವೀಪವನ್ನು ನೆಹರು-ಇಂದಿರಾ ಗಾಂಧಿ ಕಾಲದಲ್ಲಿ ಲಂಕೆಗೆ ಬಿಟ್ಟು ಕೊಟ್ಟ ವಿವಾದ ಸತತ 2ನೇ ದಿನವೂ ಬಿಜೆಪಿ ಹಾಗೂ ಕಾಂಗ್ರೆಸ್‌-ಡಿಎಂಕೆ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಿದೆ.

Katchatheevu Island dispute Indira Gandhi and Tamil Nadu DMK sacrificed greater good of Tamil Nadu fishers PM modi allegation akb
Author
First Published Apr 2, 2024, 9:03 AM IST

ಪಿಟಿಐ ನವದೆಹಲಿ/ಚೆನ್ನೈ:  ಭಾರತ-ಶ್ರೀಲಂಕಾ ನಡುವಿನ ಕಚತೀವು ದ್ವೀಪವನ್ನು ನೆಹರು-ಇಂದಿರಾ ಗಾಂಧಿ ಕಾಲದಲ್ಲಿ ಲಂಕೆಗೆ ಬಿಟ್ಟು ಕೊಟ್ಟ ವಿವಾದ ಸತತ 2ನೇ ದಿನವೂ ಬಿಜೆಪಿ ಹಾಗೂ ಕಾಂಗ್ರೆಸ್‌-ಡಿಎಂಕೆ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಿದೆ. ನೆಹರು ಇಂದಿರಾ ನೇತೃತ್ವದ ಸರ್ಕಾರಗಳು ಹಾಗೂ ಡಿಎಂಕೆ, ಈ ದ್ವೀಪವನ್ನು ಲಂಕೆಗೆ ಕೊಟ್ಟು ಭಾರತದ ಮೀನುಗಾರರ ಹಿತ ಬಲಿ ಕೊಟ್ಟಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್‌ ಆರೋಪಿಸಿದ್ದಾರೆ.

ಆದರೆ ಇದಕ್ಕೆ ಕಾಂಗ್ರೆಸ್‌ ಹಾಗೂ ಡಿಎಂಕೆ ತಿರುಗೇಟು ನೀಡಿದ್ದು, ಯಾವತ್ತೂ ಮೀನುಗಾರರ ಮೇಲೆ ಇಲ್ಲದ ಪ್ರೇಮ ಚುನಾವಣೆ ಸಮಯದಲ್ಲಿ ಏಕೆ ಬಿಜೆಪಿಯಲ್ಲಿ ಉಕ್ಕಿ ಹರಿಯತ್ತಿದೆ? ದ್ವೀಪವನ್ನು ಬಿಟ್ಟು ಕೊಟ್ಟ ಸಂದರ್ಭವನ್ನು ಮನಗಾಣದೇ ಬಿಜೆಪಿ ಸತ್ಯ ತಿರುಚಿ ಪ್ರಚಾರದಲ್ಲಿ ತೊಡಗಿದೆ ಎಂದು ಕಿಡಿಕಾರಿವೆ. ಪ್ರಧಾನಿ ಮೋದಿ ಟ್ವೀಟ್‌ ಮಾಡಿ, ‘ಕಚತೀವನ್ನು ಲಂಕೆಗೆ ಬಿಟ್ಟು ಕೊಡುವ ಇಂದಿರಾ ಗಾಂಧಿ ಪ್ರಸ್ತಾವಕ್ಕೆ ಅಸ್ತು ಎಂದಿದ್ದು ಅಂದಿನ ತಮಿಳುನಾಡು ಮುಖ್ಯಮಂತ್ರಿ ಎಂ. ಕರುನಾನಿಧಿ. ತಮಿಳುನಾಡಿನ ಹಿತ ಕಾಯಲು ಡಿಎಂಕೆ ಏನೂ ಮಾಡಲಿಲ್ಲ ಎಂಬುದಕ್ಕೆ ಇದು ತಾಜಾ ನಿರ್ದರ್ಶನ’ ಎಂದಿದ್ದಾರೆ.

ಕಚ್ಚತೀವು ವಿವಾದದಲ್ಲಿ ಬಸವಳಿದ ಕಾಂಗ್ರೆಸ್-ಡಿಎಂಕೆ, ತಮಿಳುನಾಡಿನಲ್ಲಿ ಬದಲಾಗುತ್ತಾ ಇತಿಹಾಸ?

ಇನ್ನು ದಿಲ್ಲಿ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡಿದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ 1974ರಲ್ಲಿ ಒಪ್ಪಂದ ಏರ್ಪಟ್ಟು ಭಾರತೀಯ ಮೀನುಗಾರರಿಗೆ ಕಚತೀವು ಮೇಲೆ ಹಕ್ಕು ಸಿಕ್ಕಿತ್ತು. 1976ರ ಒಪ್ಪಂದವು ಈ ಹಕ್ಕಿಗೆ ಅಂತ್ಯ ಹಾಡಿತು. ಬದಲಾದ ಇಂದಿರಾ ಗಾಂಧಿ ನಿಲುವು, ಕಚತೀವುನಲ್ಲಿನ ಭಾರತೀಯ ಬೆಸ್ತರ ಹಿತ ಬಲಿಕೊಟ್ಟಿತು ಎಂದು ಕಿಡಿಕಾರಿದರು.

ಇದಕ್ಕೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ತಿರುಗೇಟು ನೀಡಿ,‘2015ರಲ್ಲಿ ಲಭಿಸಿದ ಆರ್‌ಟಿಐ ಉತ್ತರವು ಈ ದ್ವೀಪವನ್ನು ಭಾರತ ಏಕೆ ಬಿಟ್ಟುಕೊಟ್ಟಿತು ಎಂಬ ಸಕಾರಣ ತಿಳಿಸುತ್ತದೆ. ಆದರೆ ಈಗ ಮತ್ತೆ ಕೆ. ಅಣ್ಣಾಮಲೈ ಹಾಕಿದ್ದ ಇನ್ನೊಂದು ಆರ್‌ಟಿಐ ಮೂಲಕ ಇದನ್ನು ಕೆದಕಿ ತಿರುಚುವ ಯತ್ನಗಳು ನಡೆದಿವೆ. ಕಾಂಗ್ರೆಸ್‌ ಮೀನುಗಾರರ ಹಿತ ಬಲಿ ಕೊಟ್ಟಿದೆ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಹಾಗಿದ್ದರೆ ಮೋದಿ ಹಾಗೂ ಅಟಲ್‌ ಸರ್ಕಾರದ ಅವಧಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಒಬ್ಬ ಭಾರತೀಯ ಮೀನುಗಾರನ ಬಂಧನವೂ ಆಗಿಲ್ಲವೆ?’ ಎಂದು ಪ್ರಶ್ನಿಸಿದ್ದಾರೆ.

ಡಿಎಂಕೆ-ಕಾಂಗ್ರೆಸ್‌ಗೆ ಕಚತೀವು ತಲೆನೋವು, ಲೋಕಸಭೆಯಲ್ಲಿ ಉಲ್ಟಾ ಆಗುತ್ತಾ ಲೆಕ್ಕಾಚಾರ?

ಡಿಎಂಕೆ ನಾಯಕ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮಾತನಾಡಿ, ‘ಯಾವತ್ತೂ ಬಿಜೆಪಿ ನೆನಪಿಗೆ ಬಾರದ ತಮಿಳುನಾಡು ಮೀನುಗಾರರು ಈಗ ನೆನಪಿಗೆ ಬಂದಿದ್ದೇಕೆ? ತಮಿಳುನಾಡು ಪ್ರವಾಹದಲ್ಲಿ ತತ್ತರಿಸಿ 37 ಸಾವಿರ ಕೋಟಿ ರು. ಪರಿಹಾರ ಬೇಡಿದರೂ ನಯಾಪೈಸೆ ನೀಡದ ಕೇಂದ್ರದಿಂದ ಈಗ ತಮಿಳರ ಹಿತ ಕಾಯುವ ಮಾತೇಕೆ?’ ಎಂದು ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios