ಡಿಎಂಕೆ-ಕಾಂಗ್ರೆಸ್‌ಗೆ ಕಚತೀವು ತಲೆನೋವು, ಲೋಕಸಭೆಯಲ್ಲಿ ಉಲ್ಟಾ ಆಗುತ್ತಾ ಲೆಕ್ಕಾಚಾರ?
ಕಚತೀವು ದ್ವೀಪ ಭಾರಿ ಕೋಲಾಹಲ ಸೃಷ್ಟಿಸಿದೆ. ದೇಶದ ಹಿತಾಸಕ್ತಿ ಬದಿಗಿಟ್ಟ ಅಂದಿನ ಕಾಂಗ್ರೆಸ್ ಸರ್ಕಾರ, ಈ ದ್ವೀಪವನ್ನು ಶ್ರೀಲಂಕಾಗೆ ಹಸ್ತಾಂತರಿಸಲಾಗಿದೆ ಅನ್ನೋ ಅದಿಕೃತ ಸರ್ಕಾರಿ ಮಾಹಿತಿ ಕಾಂಗ್ರೆಸ್ ಹಾಗೂ ಡಿಎಂಕೆಗೆ ನುಂಗಲಾರದ ತುತ್ತಾಗಿ ಪರಿಣಿಸಿದೆ. ಆದರೆ ಬಿಜೆಪಿ ಇದೇ ಅಸ್ತ್ರವನ್ನು ಹಿಡಿದು ತಮಿಳುನಾಡಿನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.ಈ ಕಚತೀವು ದ್ವೀಪ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ವರವಾಗುತ್ತಾ? ಡಿಎಂಕೆ-ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸುತ್ತಾ? ಇಲ್ಲಿದೆ ಒಳನೋಟ.
ಶಿವರಾಜ್, ಬುಲೆಟಿನ್ ಪ್ರೊಡ್ಯುಸರ್
ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಹಾಗೂ ಡಿಎಂಕೆ ವಿರುದ್ಧ ತಮಿಳುನಾಡಲ್ಲಿ ಬಿಜೆಪಿ ನಾಯಕರು ಒಂದು ಹೊಸ ಅಸ್ತ್ರವನ್ನ ಹುಡುಕಿ ತಂದಿದ್ದಾರೆ. ಇದು ದ್ರಾವಿಡ ನಾಡಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಆಘಾತ ಉಂಟುಮಾಡಿದೆ.. ಇತ್ತೀಚೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆರ್‌ಟಿಐ ಅರ್ಜಿಯೊಂದನ್ನ ಹಾಕಿದ್ದರು. ಅದಕ್ಕೆ ಅಧಿಕೃತ ಇಲಾಖೆ ಇತ್ತೀಚೆಗಷ್ಟೇ ಉತ್ತರ ನೀಡಿತ್ತು. ಈ ಉತ್ತರ ಇದೀಗ ತಮಿಳುನಾಡಿನಲ್ಲಿ ಬಿಜೆಪಿಗೆ ಖಾತೆ ತೆರೆಸುವ ಬ್ರಹ್ಮಾಸ್ತ್ರದಂತೆ ಭಾಸವಾಗುತ್ತಿದೆ.
ತಮಿಳುನಾಡಿನ ರಾಮೇಶ್ವರಂ ದ್ವೀಪದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಕಚತೀವು ಎಂಬ ದ್ವೀಪವಿದ್ದು, ಇದು ಬಿಜೆಪಿ ಪಾಲಿಗೆ ಈಗ ಚುನಾವಣಾ ಅಸ್ತ್ರವಾಗಿ ಪರಿಣಮಿಸಿದೆ.. 1974ರ ವರೆಗೂ ಭಾರತದ ಭೂ ಭಾಗವಾಗಿದ್ದ ದ್ವೀಪವನ್ನ ಶ್ರೀಲಂಕಾಗೆ ಬಿಟ್ಟು ಕೊಡಲಾಯಿತು. ಈ ಬಗ್ಗೆ ಅಣ್ಣಾಮಲೈ ಕಾರಣ ಕೇಳಿ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರ ಇದಕ್ಕೆ ನೀಡಿದ ಉತ್ತರ ನೋಡಿ ತಮಿಳುನಾಡಿನ ಸಿಂಗಂ ಸಿಡಿದೆದ್ದಿದ್ದಾರೆ.
ಲಂಕಾದಿಂದ ಕಚ್ಚತೀವು ದ್ವೀಪ ಮರಳಿ ಪಡೆಯಲು ಮೋದಿ ಸರ್ಕಾರ ಯತ್ನ, ಅಣ್ಣಾಮಲೈ ಹೇಳಿಕೆ ಸಂಚಲನ!
ಅಣ್ಣಾಮಲೈ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಕಚತೀವು ದ್ವೀಪ ಕೈ ತಪ್ಪಲು. ಆಗಿನ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಕೇಂದ್ರ ಸರ್ಕಾರ ಉತ್ತರ ನೀಡಿದೆ.. ಕೇಂದ್ರದ ಉತ್ತರದಲ್ಲಿ ‘1875ರಲ್ಲಿ ಬ್ರಿಟಿಷರು ಜಮೀನ್ದಾರಿ ಕಾಯ್ದೆಯಡಿ ರಾಮನಾಥಪುರಂ ರಾಜನಿಗೆ ಈ ದ್ವೀಪದ ಮಾಲೀಕತ್ವ ನೀಡಿದ್ರು, ಸ್ವಾತಂತ್ರ್ಯ ಬಳಿಕ 1947ರಲ್ಲಿ ಈ ದ್ವೀಪದ ಮೇಲೆ ವಾಯುಪಡೆ ಸಮರಾಭ್ಯಾಸ ನಡೆದಾಗ, ಅಂದಿನ ಸಿಲೋನ್ ವಾಯುಪಡೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಆ ದ್ವೀಪ ನಮಗೆ ಸೇರಬೇಕೆಂದು ಶ್ರೀಲಂಕಾ ವಾದ ಮಾಡಲು ಶುರು ಮಾಡಿತು. 1955ರಲ್ಲಿ ಕಚತೀವು ದ್ವೀಪದಲ್ಲಿ ಶ್ರೀಲಂಕಾ ಸಹ ಸಮರಾಭ್ಯಾಸ ಮಾಡಿತ್ತು. ಬಳಿಕ ಬ್ರಿಟಿಷರು ಹಾಗೂ ಚೀನಿಯರು ಸಿದ್ಧಪಡಿಸಿದ್ದ ನಕ್ಷೆಯ ಆಧಾರದಲ್ಲಿ ಈ ದ್ವೀಪ ನಮಗೆ ಸೇರಬೇಕೆಂದು ವಾದ ಮುಂದುವರೆಸಿತ್ತು.. ಈ ಬಗ್ಗೆ 1960ರಲ್ಲಿ ಕಚತೀವು ವಿವಾದದ ಬಗ್ಗೆ ಲೋಕಸಭೆಯಲ್ಲಿ ಉತ್ತರ ನೀಡಿದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು, ಆ ಚಿಕ್ಕ ದ್ವೀಪದ ಬಗ್ಗೆ ತಕಾರರು ತೆಗೆಯಲು ಇಷ್ಟವಿಲ್ಲ, ಆ ದ್ವೀಪದ ಮೇಲೆ ಹಕ್ಕು ಸಾಧಿಸುವುದನ್ನ ಕೈ ಬಿಡುತ್ತೇವೆ ಎಂದಿದ್ರು. ಅವರ ಬಳಿಕ ಬಂದ ಮುಂದಿನ ಪ್ರಧಾನಿ ಇಂದಿರಾ ಗಾಂಧಿ ಕಚತೀವು ದ್ವೀಪ ಹಸ್ತಾಂತರ ಪ್ರಕ್ರಿಯೆ ಶುರು ಮಾಡಿದ್ರು. ಈ ಬಗ್ಗೆ ಅಂದಿನ ಮದ್ರಾಸ್ ಸರ್ಕಾರದ ಅಭಿಪ್ರಾಯ ಕೇಳಿ ಕೇಂದ್ರ ಸರ್ಕಾರ ಪತ್ರ ಬರೆದಿತ್ತು. ಆಗ ಅಧಿಕಾರದಲ್ಲಿದ್ದ ಡಿಎಂಕೆ ಸಿಎಂ ಕರುಣಾನಿಧಿ ಸೂಕ್ತ ಉತ್ತರ ನೀಡಿ ಕಚತೀವು ಹಸ್ತಾಂತರವನ್ನ ವಿರೋಧಿಸಿದ್ರು. ಆದರೆ ಕೇಂದ್ರ ಸರ್ಕಾರ ಮದ್ರಾಸ್ ಸರ್ಕಾರದ ಉತ್ತರಕ್ಕೆ ಸಾಕ್ಷ್ಯಾಧಾರ ಕೊರತೆ ಎಂದು ತಿರಸ್ಕರಿಸಿ.. 1974ರಲ್ಲಿ ಅಧಿಕೃತವಾಗಿ ದ್ವೀಪ ಹಸ್ತಾಂತರ ಮಾಡಿದೆ’ ಎಂದು ಕೇಂದ್ರ ಸರ್ಕಾರ ಆರ್ಟಿಐ ಅರ್ಜಿಗೆ ಉತ್ತರ ನೀಡಿದೆ.
ಅಚ್ಚರಿಯ ವಿಷಯ ಅಂದರೆ ಈ ದ್ವೀಪ ಶ್ರೀಲಂಕಾಗಿಂತ ಭಾರತಕ್ಕೆ ಹೆಚ್ಚು ಹತ್ತಿರವಿದೆ.. ಭಾರತದಿಂದ ಕಚತೀವು ಕೇವಲ 14 ನಾಟಿಕಲ್ ಮೈಲು ದೂರದಲ್ಲಿದ್ರೆ.. ಶ್ರೀಲಂಕಾದಿಂದ 34 ನಾಟಿಕಲ್ ಮೈಲು ದೂರದಲ್ಲಿದೆ.. ಭಾರತ ಈ ದ್ವೀಪವನ್ನ ಶ್ರೀಲಂಕಾಗೆ ಬಿಟ್ಟು ಕೊಟ್ಟಿದ್ರಿಂದ ಭದ್ರತೆ ಸಮಸ್ಯೆ ಸಹ ತಲೆದೋರಿದೆ. ಈ ಕಚತೀವು ದ್ವೀಪದ ಬಳಿ ಭಾರತೀಯ ಮೀನುಗಾರರು ಮೀನುಗಾರಿಕೆಗೆ ಹೋದರೆ ಜಲಗಡಿ ಉಲ್ಲಂಘನೆ ಆರೋಪದಲ್ಲಿ ಭಾರತೀಯ ಮೀನುಗಾರರನ್ನ ಬಂಧಿಸಿ ಜೈಲಿಗೆ ತಳ್ಳುತ್ತಿದೆ. ಅಷ್ಟೇ ಅಲ್ಲದೆ ಅವರ ಮೀನುಗಾರಿಕಾ ಬೋಟ್ಗಳನ್ನು ವಶಕ್ಕೆ ಪಡೆಯುತ್ತಿದೆ. ಸದ್ಯ ಈ ಕಚತೀವು ದ್ವೀಪ 1.9 ಚದರ ಕಿಲೋ ಮೀಟರ್ ವಿಸ್ತೀರ್ಣವಿದ್ದು, ಇಲ್ಲಿ ಯಾವುದೇ ಜನರು ವಾಸಿಸೋದಿಲ್ಲ.. ಇಡೀ ದ್ವೀಪದಲ್ಲಿ ಒಂದೇ ಒಂದು ಚರ್ಚ್ ಇದೆ.. ಇಲ್ಲಿ ವರ್ಷಕ್ಕೆ ಒಮ್ಮೆ ಪೂಜೆ ಮಾಡುತ್ತಾರಂತೆ..
ಸದ್ಯ ಚುನಾವಣೆ ಘೋಷಣೆಯಾಗಿರೋ ಹೊತ್ತಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಕಾಂಗ್ರೆಸ್ ಹಾಗೂ ಡಿಎಂಕೆ ಕಚತೀವು ವಿಚಾರದಲ್ಲಿ ನಡೆದುಕೊಂಡ ರೀತಿಯನ್ನ ತಮಿಳುನಾಡಿನ ಜನರ ಮುಂದೆ ಬಿಚ್ಚಿಟ್ಟಿದ್ದು. ಎರಡು ಪಕ್ಷಗಳು ಅಧಿಕಾರದಲ್ಲಿದ್ದಾಗ ಸುರಕ್ಷಿತ ಗಡಿ ಪ್ರದೇಶ, ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಗಮನ ನೀಡಿರಲಿಲ್ಲ.. ಈ ಅವಾಂತರಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಕಿಡಿ ಕಾರಿದ್ದಾರೆ..
ಕಚ್ಚತೀವು ದ್ವೀಪ ಶ್ರೀಲಂಕಾಗೆ ನೀಡಿ ಭಾರತಕ್ಕೆ ದ್ರೋಹ ಬಗೆದ ಕಾಂಗ್ರೆಸ್, ಬಿಜೆಪಿ ಸುದ್ದಿಗೋಷ್ಠಿ!
ಇನ್ನೂ ಕಚತೀವು ದ್ವೀಪದ ವಿವಾದದ ಬಗ್ಗೆ ಟ್ವೀಟ್ ಮಾಡಿರೋ ಪ್ರಧಾನಿ ಮೋದಿ, ‘ತಮಿಳುನಾಡಿನ ಹಿತಾಸಕ್ತಿಗಳನ್ನು ಕಾಪಾಡಲು ಡಿಎಂಕೆ ಏನನ್ನೂ ಮಾಡಿಲ್ಲ #Katchatheevu ಬಗ್ಗೆ ಬಯಲಾದ ಹೊಸ ಸತ್ಯಗಳು ಡಿಎಂಕೆಯ ಎರಡು ಮುಖಗಳನ್ನ ಬಯಲು ಮಾಡಿದೆ. ಕಾಂಗ್ರೆಸ್ ಮತ್ತು ಡಿಎಂಕೆ ಕುಟುಂಬ ಪಕ್ಷಗಳಾಗಿದೆ. ಅವರು ತಮ್ಮ ಮಕ್ಕಳು ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಅವರು ಬೇರೆಯವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಚ್ಚತೀವು ಮೇಲಿನ ಅವರ ನಿರ್ಲಕ್ಷ್ಯದಿಂದ ನಮ್ಮ ಬಡ ಮೀನುಗಾರರು ಮತ್ತು ವಿಶೇಷವಾಗಿ ಮೀನುಗಾರ ಮಹಿಳೆಯರ ಹಿತಾಸಕ್ತಿಗಳಿಗೆ ಧಕ್ಕೆ ತಂದಿದೆ’ ಎಂದು ಕಿಡಿ ಕಾರಿದ್ದಾರೆ.
ತಮಿಳುನಾಡು ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಖಾತೆ ತೆರೆಯುವ ನಿರೀಕ್ಷೆಯಲ್ಲಿರೋ ಬಿಜೆಪಿ, ಕಚತೀವು ವಿವಾದವನ್ನ ತನ್ನ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದು, ಇದಕ್ಕೆ ತಮಿಳುನಾಡಿನ ಜನತೆ ಯಾವ ರೀತಿ ಉತ್ತರ ನೀಡ್ತಾರೆ ಎಂಬುದು ಚುನಾವಣಾ ಫಲಿತಾಂಶದ ಬಳಿಕವಷ್ಟೇ ಗೊತ್ತಾಗಲಿದೆ.