ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇಟ್ಟೀದ್ದೀರಾ? ನಿಮ್ಮಲ್ಲಿ ಎಲ್ಲಾ ದಾಖಲೆ ಇದೆ. ಆದರೆ ಬ್ಯಾಂಕ್‌ನಲ್ಲಿ ಚಿನ್ನ ಇದೆಯಾ ಎಂದು ಚೆಕ್ ಮಾಡಿದ್ದೀರಾ? ಹೀಗೆ ಮಹಿಳೆ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟ ಚಿನ್ನ ಮಾಯವಾದ ಘಟನೆ ನಡೆದಿದೆ.
ಕಾನ್ಪುರ (ಆ.11) ಮನೆಯಲ್ಲಿಟ್ಟರೆ ಚಿನ್ನ...ಸುರಕ್ಷಿತವಲ್ಲ ಎಂದು ಹಲವರು ಬ್ಯಾಂಕ್ ಲಾಕರ್‌ನಲ್ಲಿ ಇಡುತ್ತಾರೆ. ಆದರೆ ಬ್ಯಾಂಕ್ ಲಾಕರ್ ಕೂಡ ಸುರಕ್ಷಿತವಲ್ಲ ಅನ್ನೋದು ಕೆಲುವು ಬಾರಿ ಬಯಲಾಗಿದೆ. ಮಹಿಳೆಯೊಬ್ಬರು ತಮ್ಮ ಎಲ್ಲಾ ಚಿನ್ನಾಭರಣಗಳನ್ನು ಅಂದರೆ ಸರಿಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದಾರೆ. ಆದರೆ ಕೆಲವೇ ವರ್ಷಗಳಲ್ಲಿ ಮಹಿಳೆಯ ಎಲ್ಲಾ ಚಿನ್ನಾಭರಣ ಬ್ಯಾಂಕ್ ಲಾಕರ್‌ನಿಂದ ನಾಪತ್ತೆಯಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದಲ್ಲಿ ಸ್ವರೂಪ್ ನಗರದಲ್ಲಿರುವ ಎಸ್‌ಬಿಐ ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದೆ. 55 ರಶ್ಮಿ ಅರೋರಾ 2003ರಲ್ಲಿ ತಮ್ಮ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಸುರಕ್ಷಿತವಾಗಿರಲಿ ಎಂದು ಎಸ್‌ಬಿಐ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದರು. ಲಾಕರ್ ಸಂಖ್ಯೆ 23ರಲ್ಲಿ ಚಿನ್ನಾಭರಣ ಇಟ್ಟಿದ್ದರು. ಪ್ರತಿ ವರ್ಷ ಲಾಕರ್ ಬಾಡಿಗೆ ಪಾವತಿ ಮಾಡಿದ್ದಾರೆ. ಇದರ ನಡುವೆ ಪತಿ ನಿಧನದಿಂದ ರಶ್ಮಿ ಅರೋರಾ ಮಗಳ ಮನೆಗೆ ಸ್ಥಳಾಂತರಗೊಂಡಿದ್ದರು. ಇಷ್ಟಾದರೂ ಪ್ರತಿ ವರ್ಷ ಬಾಡಿಗೆ ಪಾವತಿ ಮಾಡಿದ್ದಾರೆ.ಆದರೆ ಲಾಕರ್ ಪರಿಶೀಲಿಸಲು ಸಾಧ್ಯವಾಗರಿಲಿಲ್ಲ.
ಜುಲೈ 2026ರ ಅಂತ್ಯದಲ್ಲಿ ಬ್ಯಾಂಕ್‌ಗೆ ತೆರಳಿದ್ದ ರಶ್ಮಿ ಅರೋರಾ ಲಾಕರ್ ಪರಿಶೀಲಿಸಿದಾಗ ಅಚ್ಚರಿಯಾಗಿದೆ. ಲಾಕರ್‌ನಲ್ಲಿ ಒಂದೇ ಒಂದು ಆಭರಣ ಇರಲಿಲ್ಲ. ಈ ಕುರಿತು ಬ್ಯಾಂಕ್ ಸಿಬ್ಬಂದಿಯನ್ನು ಕೇಳಿದರ ತಮಗೇನು ಗೊತ್ತಿಲ್ಲ ಎಂದಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಸ್ಪಂದನೆ ಸಿಗಲಿಲ್ಲ. ಹೀಗಾಗಿ ರಶ್ಮಿ ಅರೋರೋ, ಕಾನ್ಪುರ ಕಮಿಷನರ್‌ಗೆ ದೂರು ನೀಡಿದ್ದಾರೆ. ಪ್ರಕರಣ ಕಮಿಷನರ್ ಮೆಟ್ಟಿಲೇರುತ್ತಿದ್ದಂತೆ ಪ್ರಕರಣ ದಾಖಲಾಗಿದೆ. ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು
ಪೊಲೀಸ್ ಪ್ರಕರಣ ದಾಖಲಿಸಿ ಬ್ಯಾಂಕ್ ಲಾಕರ್ ರಿಜಿಸ್ಟರ್ಡ್ ಪರಿಶೀಲಿಸಿದ್ದಾರೆ. ಈ ವೇಳೆ 2020ರಲ್ಲಿ ಎರಡು ಬಾರಿ ಲಾಕರ್ ತೆರೆಯಲಾಗಿದೆ ಎಂದು ಉಲ್ಲೇಖವಾಗಿದೆ. ಆದರೆ ರಶ್ಮಿ ಅರೋರಾ ಈ ವೇಳೆ ಕೋವಿಡ್ ಕಾರಣದಿಂದ ಮಗಳ ಮನೆಯಿಂದ ಹೊರಬಂದಿರಲಿಲ್ಲ. ಬ್ಯಾಂಕ್‌ಗೂ ತೆರಳಿಲ್ಲ. ತಾವು ಲಾಕರ್ ತರೆದೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಅಕ್ರಮವಾಗಿ ಲಾಕರ್ ತೆರೆದು ಚಿನ್ನಾಭರಣ ದೋಚಲಾಗಿದೆ ಅನ್ನೋದು ಮೇಲ್ನೋಟಕ್ಕೆ ಖಚಿತವಾಗಿದೆ. ಇದೀಗ ಸಿಬ್ಬಂಧಿಗಳು ಹಾಗೂ ಬ್ಯಾಂಕ್ ಮ್ಯಾನೇಜರ್ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ.

