Newborn Baby Girl Found Dead on Hoskote Roadside ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ, ಜನಿಸಿದ ಕೆಲವೇ ಗಂಟೆಗಳಲ್ಲಿ ನವಜಾತ ಹೆಣ್ಣು ಶಿಶುವನ್ನು ರಸ್ತೆ ಬದಿಯ ಪೊದೆಯಲ್ಲಿ ಎಸೆದು ಹೋಗಿರುವ ಅಮಾನುಷ ಘಟನೆ ನಡೆದಿದೆ. 

ಬೆಂಗಳೂರು (ನ.1): ಆ ಮಗು ಹುಟ್ಟಿ ಕೆಲವೇ ಗಂಟೆಗಳಾಗಿರಬಹುದು ಅಷ್ಟೇ. ಆದರೆ, ಹುಟ್ಟಿದ ಮಗುವಿಗೆ ಭೂಮಿಯ ಮೇಲೆ ಬದುಕುವ ಅದೃಷ್ಟವಿರಲಿಲ್ಲ. ಯಾಕೆಂದರೆ, ಆಕೆ ಪಾಪಿಗಳ ಕುಟುಂಬದಲ್ಲಿ ಹುಟ್ಟಿದ್ದಳು. ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ನಡೆದ ಅಮಾನುಷ ಘಟನೆಯಲ್ಲಿ ಆಗಷ್ಟೇ ಹುಟ್ಟಿದ ನವಜಾತ ಹೆಣ್ಣು ಶಿಶುವನ್ನು ಪಾಪಿಗಳು ಕಸದ ಪೊಟ್ಟಣ ಎಸೆಯುವಂತೆ ರಸ್ತೆ ಬದಿ ಎಸೆದು ಹೋಗಿರುವ ಘಟನೆ ನಡೆದಿದೆ.

ಜನಿಸಿದ ಕೆಲವೇ ಗಂಟೆಗಳಲ್ಲಿ ನವಜಾತ ಹೆಣ್ಣು ಶಿಶು ಬೀದಿ ಹೆಣವಾಗಿದೆ. ಕಪ್ಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಮಗುವನ್ನು ಪೊದೆಯ ನಡುವೆ ಎಸೆದು ಹೋಗಿರುವ ಘಟನೆ ಹೊಸಕೋಟೆ ನಗರದ ದೊಡ್ಡಕೆರೆ ಏರಿ ಬಳಿ ನಡೆದಿದೆ. ಸ್ಥಳೀಯರಿಂದ ಮಾಹಿತಿ ಬಂದ ಹಿನ್ನೆಲೆ ಸ್ಥಳಕ್ಕೆ ಬಂದ ಹೊಸಕೋಟೆ ಪೊಲೀಸರು ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಗುವಿನ ಹೊಕ್ಕುಳ ಬಳ್ಳಿ ಹಾಗೆಯೇ ಇದ್ದದ್ದು ಕಂಡಿದೆ. ಆದರೆ, ಪೊದೆಯಲ್ಲಿ ಬಿದ್ದ ಶಿಶುವಿನ ಮೈ ಪೂರ್ತಿ ಇರುವೆಗಳು ಕಚ್ಚಿದ್ದು, ಎಸೆದು ಹೋದ ಕೆಲವೇ ಗಂಟೆಗಳಲ್ಲಿ ಅಳುತ್ತಲೇ ಪ್ರಾಣ ಬಿಟ್ಟಿರುವ ಹಾಗೆ ಕಂಡಿದೆ. ಸಾವನ್ನಪ್ಪಿರುವ ಮಗುವನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮಗುವಿನ ತಾಯಿ ಹಾಗೂ ಈ ಕೃತ್ಯ ಎಸಗಿದವರು ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.