ಆಗ ತಾನೇ ಹುಟ್ಟಿದ್ದ ಮಗುವಿನ ದೇಹದಲ್ಲಿ  ದೊಡ್ಡವರು ಸೇವಿಸುವುದಕ್ಕಿಂತ 3 ಸಾವಿರ ಪಾಲು ಅಧಿಕ ನಿಕೋಟಿನ್ ಡ್ರಗ್ ಪ್ರಮಾಣ ಕಂಡು ಬಂದಿದ್ದು, ಇದನ್ನು ನೋಡಿ ಆಸ್ಪತ್ರೆಯ ವೈದ್ಯ ಸಿಬ್ಬಂದಿಯೇ ಅಚ್ಚರಿ ಹಾಗೂ ಆಘಾತಗೊಂಡಿದ್ದಾರೆ.

ಅಹ್ಮದಾಬಾದ್: ಸಿಸೇರಿಯನ್ ಹೆರಿಗೆಯಲ್ಲಿ ಜನಿಸಿದ್ದ ಆರೋಗ್ಯವಾಗಿ ಕಾಣಿಸುತ್ತಿದ್ದ ಮಗುವಿನ ದೇಹದಲ್ಲಿ ದೊಡ್ಡವರು ಸೇವಿಸುವುದಕ್ಕಿಂತ 3 ಸಾವಿರ ಪಾಲು ಅಧಿಕ ನಿಕೋಟಿನ್ ಡ್ರಗ್ ಪ್ರಮಾಣ ಕಂಡು ಬಂದಿದೆ. ಆಗ ತಾನೇ ಹುಟ್ಟಿದ್ದ ಮಗುವಿನ ದೇಹದಲ್ಲಿಇಷ್ಟೊಂದು ಪ್ರಮಾಣದ ಡ್ರಗ್ ಪ್ರಮಾಣ ನೋಡಿ ಆಸ್ಪತ್ರೆಯ ವೈದ್ಯ ಸಿಬ್ಬಂದಿಯೇ ಅಚ್ಚರಿ ಹಾಗೂ ಆಘಾತಗೊಂಡಿದ್ದಾರೆ. ಗುಜರಾತ್‌ನ ಅಹ್ಮದಾಬಾದ್‌ನ (Ahmedabad) ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು, ಇದು ವೈದ್ಯಲೋಕವನ್ನೇ ಅಚ್ಚರಿಗೆ ದೂಡಿದೆ. 

ಆರಂಭದಲ್ಲಿ, ವೈದ್ಯಕೀಯ ಸಿಬ್ಬಂದಿ ಮಗು ಹುಟ್ಟುತ್ತಲೇ ಉಸಿರುಕಟ್ಟುವಿಕೆಯ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಶಂಕಿಸಿದ್ದರು. ಹೆರಿಗೆಯ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಈ ರೀತಿ ಆಗುತ್ತದೆ. ಆದರೆ ಮಗುವಿನ ವಿಚಿತ್ರ ದೇಹದಲ್ಲಿನ ವಿಚಿತ್ರ ಲಕ್ಷಣಗಳು ವೈದ್ಯಕೀಯ ತಂಡವನ್ನು ದಂಗುಬಡಿಸಿದೆ.

ನವಜಾತ ಶಿಶುವಿನ ಈ ಗಂಭೀರ ಸ್ಥಿತಿಯ ಬಗ್ಗೆ ವೈದ್ಯರು ನಂತರ ತನಿಖೆ ನಡೆಸಿದ್ದು, ಆಗ ತಾನೇ ಹುಟ್ಟಿದ ಮಗುವಿನ ಈ ವೈದ್ಯಕೀಯ ಬಿಕ್ಕಟ್ಟಿನ ಹಿಂದೆ ಇರುವ ಕಾರಣ ಮಗುವಿನ ತಾಯಿಯೇ ಆಗಿದ್ದಳು. ತಾಯಿ ಗರ್ಭಿಣಿ ಇದ್ದಾಗಲೂ ನಿರಂತರ ಗುಟ್ಕಾ (ತಂಬಾಕು) ಅಗಿಯುವ ಚಟವನ್ನು ಹೊಂದಿದ್ದು, ಇದು ರಕ್ತದಲ್ಲಿ ಮಗುವಿನ ದೇಹವನ್ನು ಸೇರಿದೆ. ಇದರ ಪರಿಣಾಮ ಮಗುವಿನ ರಕ್ತದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಿಕೋಟಿನ್ ಅಂಶ ಕಂಡು ಬಂದಿತ್ತು. 

Health Tips : ಗುಟ್ಕಾ ಚಟ ಬಿಡಲು ಆಗ್ತಾನೇ ಇಲ್ವಾ? ಇಲ್ಲಿವೆ ಈಸಿ ವೇ, ಆಲ್ ದಿ ಬೆಸ್ಟ್

ಜೂನ್ 20 ರಂದು ಮೆಹ್ಸಾನಾದ (Mehsana) ಆಸ್ಪತ್ರೆಯಲ್ಲಿ ಎಳೆಯ ಪ್ರಾಯದ ತಾಯಿ ಸಿಸೇರಿಯನ್ (Caesarean section) ಮೂಲಕ 2.4 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಹುಟ್ಟುವಾಗ ಆರೋಗ್ಯವಾಗಿದ್ದ ಮಗು ಅಳುತ್ತಲೇ ಇರಲಿಲ್ಲ, ಅಲ್ಲದೇ ಮಗುವಿನ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು, ಅಲ್ಲದೇ ಕೂಡಲೇ ಮಗುವಿಗೆ ಕೃತಕ ಉಸಿರಾಟ ಯಂತ್ರ ಅಳವಡಿಸಬೇಕಾಗಿ ಬಂತು, ಇದರ ಜೊತೆ ಮಗುವಿನ ಹೃದಯ ಬಡಿತವೂ ವಿರಳವಾಗುತ್ತಿತ್ತು, ಇದರ ಜೊತೆಗೆ ರಕ್ತದೊತ್ತಡವೂ (BP) ಕಡಿಮೆಯಾಗುತ್ತಿತ್ತು. 

ಕೂಡಲೇ ಮೆಹ್ಸಾನ್ ಆಸ್ಪತ್ರೆಯ ವೈದ್ಯರು ಮಗುವನ್ನು ಅಹ್ಮದಾಬಾದ್‌ನ ನವಜಾತ ಶಿಶುಗಳ ವಿಶೇಷ ಆಸ್ಪತ್ರೆಗೆ ದಾಖಲಿಸಿ ಮಗುವಿನ ಜೀವ ಉಳಿಸುವ ಪ್ರಯತ್ನ ಮಾಡಿದರು. ಈ ವೇಳೆ ತಪಾಸಣೆ ಮಾಡಿದಾಗ ಮಗುವಿನ ದೇಹದಲ್ಲಿ 60 ng/ml ನಿಕೋಟಿನ್ ಪ್ರಮಾಣವಿದ್ದು, ಇದು ವಯಸ್ಕರಿಗೆ ಸೇವಿಸಲು ಅನುಮತಿ ಇರುವ ಪ್ರಮಾಣಕ್ಕಿಂತ 3000 ಪಟು ಅಧಿಕ ಎಂಬುದನ್ನು ತಿಳಿದು ವೈದ್ಯರು ಗಾಬರಿಯಾಗಿದ್ದರು. 

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಹಿರಿಯ ನವಜಾತ ಶಿಶುಗಳ ತಜ್ಞೆ, ಡಾಕ್ಟರ್ ಅಶಿತಾ ಮೆಹ್ತಾ, ಮಗುವನ್ನು ನಮ್ಮ ಬಳಿ ಕರೆತಂದಾಗ, ಆ ಮಗು ಕೋಮಾದಲ್ಲಿರುವ ಆರೋಗ್ಯವಂತ ಮಗುವಿವಂತೆ ಕಾಣಿಸುತ್ತಿತ್ತು. ಮೊದಲಿಗೆ ನಾವು ಆತನಿಗೆ ಜನ್ಮಜಾತವಾಗಿ ಬಂದ ಉಸಿರುಕಟ್ಟುವ ಸಮಸ್ಯೆ ಎಂದು ಭಾವಿಸಿದೆವು. ಆದರೆ ಈ ಸಮಸ್ಯೆಯಿಂದ ಹುಟ್ಟಿದ ಮಕ್ಕಳು ಗಮನಾರ್ಹವಾದ ನರವೈಜ್ಞಾನಿಕ ಹಾನಿ, ಪಾರ್ಶ್ವವಾಯು, ಸ್ನಾಯು ದೌರ್ಬಲ್ಯ ಮುಂತಾದ ಸಮಸ್ಯೆಯಿಂದ ಬಳಲುತ್ತಾರೆ. ಆದರೆ ಈ ಮಗುವಿಗೆ ಅದ್ಯಾವ ಸಮಸ್ಯೆಗಳು ಇರಲಿಲ್ಲ, ಈ ಮಗುವೂ ಉತ್ತಮವಾದ ಸ್ನಾಯುಗಳು ಹಾಗೂ ಶಕ್ತಿ ಮಗುವಿನ ಸಮಸ್ಯೆ ಇದಲ್ಲ ಎಂಬುದನ್ನು ಹೇಳುತ್ತಿತ್ತು. 

ತಂಬಾಕು ಉತ್ಫನ್ನಗಳ ಬಗ್ಗೆ ತಂದೆಗೆ ಮಾತುಕೊಟ್ಟಿದ್ದ ಸಚಿನ್ ತೆಂಡುಲ್ಕರ್..! ಖಾಲಿ ಚೆಕ್ ಆಫರ್ ತಿರಸ್ಕರಿಸಿದ್ದ ಕ್ರಿಕೆಟ್ ದೇವರು

ಹೀಗಾಗಿ ತಾಯಿಯ ಹಿನ್ನೆಲೆಯ ಹಿಂದೆ ವೈದ್ಯರ ತಂಡ ಬಿದ್ದಿದ್ದು, ಸ್ತ್ರೀರೋಗ ತಜ್ಞರು (gynecologist) ಆಕೆಯನ್ನು ತಪಾಸಣೆ ನಡೆಸಿ ಪ್ರಶ್ನೆಗಳನ್ನು ಕೇಳಿ ಹಲವು ವಿವರಗಳನ್ನು ಪಡೆದಿದ್ದಾರೆ. ಈ ವೇಳೆ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಈ ಮಗುವಿನ ತಾಯಿ ಗರ್ಭಾವಸ್ಥೆಯಲ್ಲೂ ದಿನಕ್ಕೆ 10 ರಿಂದ 15 ಬಾರಿ ಗುಟ್ಕಾ ಜಗಿಯುತ್ತಿದ್ದಳು ಎಂಬ ಅಂಶ ಬೆಳಕಿಗೆ ಬಂದಿದೆ. ಈಕೆಯ ಈ ಕೆಟ್ಟ ಮಗುವಿನ ಆರೋಗ್ಯವನ್ನು ಅಪಾಯಕ್ಕೆ ತಳ್ಳಿದೆ. ರಕ್ತದ ಚಲನೆಯ ಮೂಲಕ ಆಕೆ ಜಗಿಯುತ್ತಿದ್ದ ತಂಬಾಕಿನಲ್ಲಿದ್ದ ನಿಕೋಟಿನ್ ಪ್ರಮಾಣ ಮಗುವಿನ ದೇಹ ಸೇರಿದೆ. 

ಆಸ್ಟ್ರೇಲಿಯಾ (Australia) ಹಾಗೂ ಯುನೈಟೆಡ್ ಕಿಂಗ್‌ಡಮ್( ಬ್ರಿಟನ್) ನಲ್ಲಿ ಮಕ್ಕಳು ತಮ್ಮ ತಾಯಿಯರ ಮಾದಕ ವ್ಯಸನದ ಚಟದಿಂದಾಗಿ ಹುಟ್ಟುತ್ತಲೇ ಕೊಕೆನ್ ಹಾಗೂ ಹೆರಾಯಿನ್‌ ಚಟಕ್ಕೆ ಒಳಗಾಗಿ ಹುಟ್ಟುತ್ತಾರೆ. ಹೀಗಾಗಿ ನಾವು ಮಗುವಿನ ತಾಯಿಗೆ ಟಾಕ್ಸಕೊಲಾಜಿ ಪರೀಕ್ಷೆ ಮಾಡಲು ನಿರ್ಧರಿಸಿದೆವು. ಈ ವೇಳೆ ನಮ್ಮ ಸಂಶಯಕ್ಕೆ ಪುರಾವೆ ಸಿಕ್ಕಿತ್ತು. ಆಕೆಯ ಕೆಟ್ಟ ಚಟವೇ ಮಗುವಿನ ರಕ್ತದಲ್ಲಿ ಈ ಪ್ರಮಾಣದ ನಿಕೋಟಿನ್ ಕಂಡು ಬರಲು ಕಾರಣ ಎಂಬುದು ತಿಳಿದು ಬಂತು ಎಂದು ವೈದ್ಯ ಡಾ. ಮೆಹ್ತಾ ಹೇಳಿದ್ದಾರೆ. ನೋಡಿದ್ರಲ್ಲಾ, ತಂಬಾಕು, ಜರ್ದಾ, ಪಾನ್ ಮಸಾಲಾ, ಜರ್ದಾ ಮುಂತಾದವುಗಳಲ್ಲಿರುವ ತಂಬಾಕು ಎಷ್ಟೊಂದು ಹಾನಿಕರಕ ಎಂಬುದು. ಈ ಚಟ ನಿಮ್ಮನ್ನು ಮಾತ್ರವಲ್ಲದೇ ನಿಮ್ಮ ಮುಂದಿನ ತಲೆಮಾರನ್ನು ಸಂಕಷ್ಟಕ್ಕೆ ದೂಡುವುದು.