ಕನ್ನಡ ಭಾಷೆ ಕುರಿತ ಹೇಳಿಕೆ ವಿವಾದದ ಹಿನ್ನೆಲೆಯಲ್ಲಿ ಮಕ್ಕಳ್ ನೀಧಿ ಮೈಯಂ ಪಕ್ಷವು ಕಮಲಹಾಸನ್ ಬೆಂಬಲಕ್ಕೆ ನಿಂತಿದೆ. 'ಸತ್ಯಕ್ಕೆ ಕ್ಷಮೆಯ ಅಗತ್ಯವಿಲ್ಲ' ಎಂಬ ಪೋಸ್ಟರ್‌ಗಳನ್ನು ಚೆನ್ನೈನಲ್ಲಿ ಹಾಕಲಾಗಿದೆ.

ಚೆನ್ನೈ (ಜೂ.4): ಕನ್ನಡ ಭಾಷೆ ಕುರಿತ ಹೇಳಿಕೆಯು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಮಕ್ಕಳ್ ನೀಧಿ ಮೈಯಂ ಪಕ್ಷ (ಎಂಎನ್‌ಎಂ)ವು ತನ್ನ ಅಧ್ಯಕ್ಷ ಕಮಲಹಾಸನ್‌ ಬೆಂಬಲಕ್ಕೆ ನಿಂತಿದೆ. ನಟನನ್ನು ಬೆಂಬಲಿಸಿ ''''ಸತ್ಯಕ್ಕೆ ಕ್ಷಮೆಯ ಅಗತ್ಯವಿಲ್ಲ'''' ಎಂಬ ಪೋಸ್ಟರ್‌ಗಳನ್ನು ಚೆನ್ನೈನೆಲ್ಲೆಡೆ ಮಂಗಳವಾರ ಹಾಕಲಾಗಿದೆ.

ಈಗಾಗಲೇ ಜಗತ್ತಿಗೆ ಗೊತ್ತಿರುವುದನ್ನು ಕಮಲಹಾಸನ್‌ ಅವರು ಹೇಳಿದ್ದಾರೆ. ಎರಡು ಭಾಷೆಗಳ ನಡುವಿನ ಸಂಬಂಧ ಏನಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಪ್ರೀತಿಯು ಯಾವತ್ತಿಗೂ ಕ್ಷಮೆ ಕೋರುವುದಿಲ್ಲ ಮತ್ತು ಸತ್ಯವು ಯಾವತ್ತೂ ತನ್ನ ತಲೆ ಬಾಗಿಸುವುದಿಲ್ಲ ಎಂಬ ಒಕ್ಕಣೆಯ ಪೋಸ್ಟರ್‌ಗಳನ್ನು ಕಮಲ ಹಾಸನ್‌ರಿಂದಲೇ ಸ್ಥಾಪಿತ ಎಂಎನ್‌ಎಂ ಪಕ್ಷದ ಕಾರ್ಯಕರ್ತರು ಚೆನ್ನೈನಾದ್ಯಂತ ಹಾಕಿದ್ದಾರೆ.

ಕರ್ನಾಟಕದಲ್ಲಿ ಕಮಲಹಾಸನ್ ಅವರ ನಟನೆಯ ಥಗ್‌ ಲೈಫ್‌ ಸಿನಿಮಾ ಬಿಡುಗಡೆ ಸಂಬಂಧ ನಿರ್ಧಾರ ತೆಗೆದುಕೊಳ್ಳುವ ಕರ್ನಾಟಕ ಫಿಲ್ಮ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ನ ಮಹತ್ವದ ಸಭೆಗೂ ಮುನ್ನ ಈ ಪೋಸ್ಟರ್‌ಗಳು ತಮಿಳುನಾಡಿನಾದ್ಯಂತ ಪ್ರತ್ಯಕ್ಷವಾಗಿವೆ.

ಕನ್ನಡವು ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆಗೆ ಸಂಬಂಧಿಸಿ ಕಮಲ್‌ ಹಾಸನ್‌ ಅವರು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣರಾಗಿದ್ದರು. ಈ ಹೇಳಿಕೆಗೆ ಕ್ಷಮೆಕೋರಬೇಕು, ಇಲ್ಲದಿದ್ದರೆ ಅವರ ಥಗ್‌ ಲೈಫ್‌ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಸಂಘಟನೆಗಳು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಎಂಎನ್‌ಎಂಪಕ್ಷದ ಕಾರ್ಯಕರ್ತರು ನಾವು ನಟ ಕಮಲ್‌ ಜತೆಗಿದ್ದೇವೆ. ಅವರು ಯಾವುದೇ ಕಾರಣಕ್ಕೂ ತಮ್ಮ ಹೇಳಿಕೆ ಸಂಬಂಧ ಕ್ಷಮೆ ಕೋರಬೇಕೆಂದೇನಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.