ಕನ್ನಡ ಭಾಷೆಯ ಬಗ್ಗೆ ನೀಡಿದ ಹೇಳಿಕೆಗಳಿಗೆ ಕ್ಷಮೆ ಕೇಳದ ಹೊರತು ಕಮಲ್ ಹಾಸನ್ ಅವರ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ನ್ಯಾಯಾಲಯವು ಸಿನಿಮಾ ಪ್ರದರ್ಶನಕ್ಕೆ ಮುನ್ನ ಕಮಲ್ ಹಾಸನ್ ಕ್ಷಮೆ ಕೇಳುವಂತೆ ಸೂಚಿಸಿದೆ.
ಬೆಂಗಳೂರು (ಜೂ.03): ಕರ್ನಾಟಕದಲ್ಲಿ ಕಮಲ್ ಹಾಸನ್ ಸಿನಿಮಾ ಥಗ್ ಲೈಫ್ ಬಿಡುಗಡೆ ಮಾಡದಂತೆ ಹೈಕೋರ್ಟ್‌ನಿಂದ ಆದೇಶ ಹೊರಡಿಸಲಾಗಿದೆ. ಕನ್ನಡ ಭಾಷೆಯ ಬಗ್ಗೆ ಮಾತನಾಡಿದ್ದಕ್ಕೆ ಕ್ಷಮೆ ಕೇಳಿದ ನಂತರವೇ ಅವರ ಸಿನಿಮಾಗೆ ಭದ್ರತೆ ಕೊಡುವ ವಿಚಾರಕ್ಕಾಗಿ ಸಲ್ಲಿಕೆ ಮಾಡಿದ ಅರ್ಜಿಯನ್ನು ಪರಿಗಣಿಸಲಾಗುವುದು. ಈ ಸಮಸ್ಯೆ ಪರಿಹಾರ ಆಗುವವರೆಗೂ ಸಿನಿಮಾ ಬಿಡುಗಡೆ ಮಾಡುವಂತಿಲ್ಲ. ಮುಂದಿನ ವಿಚಾರಣೆ ಜೂ.10ಕ್ಕೆ ಮುಂದೂಡಿಕೆ ಮಾಡಿ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಆದೇಶ ಹೊರಡಿಸಿದ್ದಾರೆ.
ಪ್ರಸಿದ್ಧ ನಟ ಮತ್ತು ರಾಜಕಾರಣಿಯಾಗಿರುವ ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಸಿನಿಮಾದ ಪ್ರದರ್ಶನಕ್ಕೆ ಪೊಲೀಸ್ ಭದ್ರತೆ ನೀಡುವ ಬಗ್ಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ಸಂದರ್ಭ ಕಮಲ್ ಹಾಸನ್ ಅವರ ಹಿಂದಿನ ಹೇಳಿಕೆಗಳ ಕುರಿತಂತೆ ಹತ್ತಿರದ ಗಂಭೀರ ವಿಚಾರಣೆಯೇ ನಡೆಯಿತು. ನ್ಯಾಯಾಲಯವು ಸಿನಿಮಾ ಪ್ರದರ್ಶನಕ್ಕೆ ಮುನ್ನ ಕಮಲ್ ಹಾಸನ್ ಕ್ಷಮೆ ಕೇಳಲೇಬೇಕೆಂದು ತೀವ್ರ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರ ಪರ ವಕೀಲರಾದ ಅಮೃತೇಶ್ ಅವರು ನ್ಯಾಯಾಲಯದ ಮುಂದೆ ವಾದ ಮಂಡಿಸಿ, “ಕಮಲ್ ಹಾಸನ್ ಅವರು ಕನ್ನಡಿಗರ ಆತ್ಮಾಭಿಮಾನಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಲೇಬೇಕು. ಇಲ್ಲವಾದರೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬಾರದು” ಎಂದು ಮನವಿ ಮಾಡಿದರು.
ಹಾಸನ್ ಪರ ವಾದ: ಭಾವನೆ ನೋಯಿಸುವ ಉದ್ದೇಶವಿಲ್ಲ
ಈ ಕುರಿತು ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು ಪ್ರತಿವಾದ ಮಂಡಿಸಿ, "ಕಮಲ್ ಹಾಸನ್ ಅವರು ಯಾವುದೇ ದುರುದ್ದೇಶದಿಂದ ಹೇಳಿಕೆ ನೀಡಿಲ್ಲ. ಅವರು ತಮ್ಮ ಅಭಿಪ್ರಾಯವನ್ನಷ್ಟೇ ವ್ಯಕ್ತಪಡಿಸಿದ್ದು, ಕನ್ನಡದ ಬಗ್ಗೆ ಅವರಿಗೆ ಪ್ರೀತಿ ಹಾಗೂ ಗೌರವವಿದೆ" ಎಂದು ಹೇಳಿದರು. ಅವರು ಕಮಲ್ ಹಾಸನ್ ಬರೆದಿರುವ ಪತ್ರವನ್ನೂ ನ್ಯಾಯಮೂರ್ತಿಯ ಎದುರು ಓದಿದರು. ಆದರೆ, ಆ ಪತ್ರದಲ್ಲಿ ಕ್ಷಮೆಯ ಉಲ್ಲೇಖವಿಲ್ಲ ಎಂಬುದನ್ನು ನ್ಯಾಯಮೂರ್ತಿಗಳು ಗಮನಿಸಿದರು.
ನ್ಯಾಯಾಲಯದ ಸ್ಪಷ್ಟ ನಿಲುವು: ಕ್ಷಮೆ ಬೇಕು
ಈ ಸಂದರ್ಭ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಪೀಠವು, 'ಕ್ಷಮೆ ಕೇಳದೇ ಬೇರೆ ಎಲ್ಲವೂ ಹೇಳುತ್ತಿದ್ದೀರಿ. ನಿಮ್ಮ ಮನವಿಯನ್ನ ಪುರಸ್ಕರಿಸಬೇಕಾದರೆ ಕ್ಷಮೆ ಕೇಳಲೇಬೇಕು. ಮಾತಿನ ಪರಿಣಾಮವನ್ನು ಕಮಲ್ ಹಾಸನ್ ಅರ್ಥ ಮಾಡಿಕೊಂಡಂತಿಲ್ಲ" ಎಂದು ತೀವ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ, 'ಕಮಲ್ ಹಾಸನ್ ಆಗಿರಲಿ, ಯಾರೇ ಆಗಿರಲಿ ಜನರ ಭಾವನೆ ನೋಯಿಸುವಂತಿಲ್ಲ. ಆತ್ಮಪ್ರತಿಷ್ಠೆಗೆ ಅಡ್ಡಬರಬಾರದು' ಎಂದು ಹೇಳಿದರು.
ಅರ್ಜಿ ಮುಂದೂಡುವ ಮನವಿ
ಈ ಕುರಿತು ಇನ್ನಷ್ಟು ಸಮಯ ಬೇಕೆಂದು ಕೋರಿದ ಕಮಲ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು ಒಂದು ವಾರ ಕಾಲ ವಿಚಾರಣೆಯನ್ನು ಮುಂದೂಡಲು ಮನವಿ ಮಾಡಿದರು. ಇದೇ ವೇಳೆ ಎಸ್‌ಪಿಐ ಭಾನುಪ್ರಕಾಶ್ ಅವರು, 'ಕ್ಷಮೆ ಕೇಳದೇ ಪೊಲೀಸ್ ಭದ್ರತೆ ಕೇಳುತ್ತಿರುವುದು ಸೂಕ್ತವಲ್ಲ' ಎಂದು ವಾದ ಮಂಡಿಸಿದರು.
