ಜಾಗತಿಕ ಹವಾಮಾನ ಬದಲಾವಣೆ, ತ್ವರಿತ ನಗರೀಕರಣ ಮತ್ತು ಅಂತರ್ಜಲ ಮಟ್ಟದ ಕುಸಿತದಿಂದಾಗಿ ಕಾಬುಲ್‌ ನೀರಿಲ್ಲದ ಮೊದಲ ಮಹಾನಗರವಾಗುವ ಆತಂಕ ಎದುರಾಗಿದೆ. ಕಳೆದ ದಶಕದಲ್ಲಿ ಅಂತರ್ಜಲ ಮಟ್ಟ 30 ಮೀ. ಕುಸಿದಿದ್ದು, ಬಹುತೇಕ ಕೊಳವೆಬಾವಿಗಳು ಬತ್ತಿವೆ ಮತ್ತು ಶೇ.80ರಷ್ಟು ಅಂತರ್ಜಲ ಕಲುಷಿತವಾಗಿದೆ. 

ಕಾಬುಲ್‌ (ಜೂ.9): ಜಾಗತಿಕ ಹವಾಮಾನ ಬದಲಾವಣೆ, ತ್ವರಿತ ನಗರೀಕರಣ, ಅಂತರ್ಜಲ ಮಟ್ಟದ ಕುಸಿತದ ಪರಿಣಾಮ ತೊಟ್ಟು ನೀರಿಲ್ಲದ ವಿಶ್ವದ ಮೊದಲ ಮಹಾನಗರವೆಂಬ ಆತಂಕ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ಅನ್ನು ಕಾಡಬಹುದು ಎಂಬ ಮಾಹಿತಿ ಹೊರಬಿದ್ದಿದೆ.

ತ್ವರಿತ ನಗರೀಕರಣ ಮತ್ತು ಹವಾಮಾನ ಬದಲಾವಣೆಯಿಂದಾಗಿ ಕಾಬುಲ್‌ನ ಅಂತರ್ಜಲ ಮಟ್ಟ, ಕಳೆದ ದಶಕದಲ್ಲಿ 30 ಮೀ.ವರೆಗೆ ಕುಸಿದಿದೆ. ನಗರದ ಅರ್ಧಕ್ಕಿಂತ ಹೆಚ್ಚು ಕೊಳವೆಬಾವಿಗಳಲ್ಲಿ ನೀರೇ ಇಲ್ಲದಂತಾಗಿದೆ. ಅಷ್ಟೇ ಅಲ್ಲದೆ, ಇಲ್ಲಿನ ಶೇ.80ರಷ್ಟು ಅಂತರ್ಜಲ ಕಲುಷಿತವಾಗಿದ್ದು, ಅದನ್ನು ಬಳಕೆಗೆ ಯೋಗ್ಯವಲ್ಲವೆಂದು ಪರಿಗಣಿಸಲಾಗಿದೆ.

ಈಗಲೇ ಜನ ತಮ್ಮ ಆದಾಯದ ಶೇ.30ರಷ್ಟನ್ನು ನೀರು ಕೊಳ್ಳಲು ವ್ಯಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದ್ದು, 2030ರ ವೇಳೆಗೆ ಕಾಬುಲ್‌ನ ಎಲ್ಲಾ ನೀರಿನ ಮೂಲಗಳು ಬತ್ತಿ, 70 ಲಕ್ಷ ಜನರ ಬಾಳ್ವೆಗೆ ತೊಂದರೆಯಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಫ್ಘನ್‌ ನಿರ್ದೇಶಕ ಡೇನ್ ಕರಿ, ‘ನೀರಿಲ್ಲದಿದ್ದರೆ ಜನ ಆ ಪ್ರದೇಶವನ್ನು ತೊರೆದು ವಲಸೆ ಹೋಗುತ್ತಾರೆ. ಹೀಗಾಗಿ, ನೀರಿನ ಲಭ್ಯತೆಯನ್ನು ಸರಿಯಾಗಿ ದಾಖಲಿಸಬೇಕು ಮತ್ತು ಬಿಕ್ಕಟ್ಟನ್ನು ಪರಿಹರಿಸುವ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಬೇಕು. ಇಲ್ಲದಿದ್ದರೆ ಇಲ್ಲಿನ ಜನರಿಗೆ ಸಮಸ್ಯೆಯಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ