ರಿಲಯನ್ಸ್ ಜಿಯೋ ಹೊಸ ದಾಖಲೆ ಬರೆದಿದೆ. ಗ್ರಾಹಕರ ಸೇರ್ಪಡೆಯಲ್ಲಿ ಏರ್‌ಟೆಲ್ ಸೇರಿದಂತೆ ಇತರ ಪ್ರತಿಸ್ಪರ್ಧಿಗಳ ಹಿಂದಿಕ್ಕಿದ್ದು ಮಾತ್ರವಲ್ಲ 10 ಪಟ್ಟು ಅಧಿಕ ಹೊಸ ಗ್ರಾಹಕರು ಜಿಯೋ ಸೇರಿಕೊಳ್ಳುವ ಮೂಲಕ ದಾಖಲೆ ನಿರ್ಮಾಣವಾಗಿದೆ.
ನವದೆಹಲಿ (ನ.06) ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿ ತೀವ್ರಗೊಂಡಿದೆ. ರಿಲಯನ್ಸ್ ಜಿಯೋ, ಏರ್‌ಟೆಸ್, ಬಿಎಸ್‌ಎನ್ಎಲ್, ವಿಐ ಸೇರಿದಂತೆ ಪ್ರಮುಖ ಟೆಲಿಕಾಂ ಕಂಪನಿಗಳು ಗ್ರಾಹಕರ ಸೆಳೆಯಲು ಅತ್ಯುತ್ತಮ ಸರ್ವೀಸ್, ಕಡಿಮೆ ರೀಚಾರ್ಜ್ ಸೇರಿದಂತೆ ಹಲವು ಆಫರ್ ನೀಡುತ್ತಿದೆ. ಇದೀಗ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಬಿಡುಗಡೆ ಮಾಡಿರುವ ವರದಿಯಲ್ಲಿ ಜಿಯೋ ಹೊಸ ದಾಖಲೆ ಬರೆದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಜಿಯೋ ಗರಿಷ್ಠ ಗ್ರಾಹಕರ ಸೇರ್ಪಡೆಯೊಂದಿಗೆ ಮೊದಲ ಸ್ಥಾನದಲ್ಲಿದೆ. ಏರ್‌ಟೆಲ್‌ಗೆ ಹೋಲಿಸಿದರೆ 10 ಪಟ್ಟು ಹೆಚ್ಚು ಗ್ರಾಹಕರು ಜಿಯೋ ಸೇರಿಕೊಂಡಿದ್ದಾರೆ.
ಮೆಷಿನ್-ಟು-ಮೆಷಿನ್' (M2M) ಸಂಪರ್ಕಗಳನ್ನು ಹೊರತುಪಡಿಸಿ, ಭಾರತದ ಮೂಲ ಮೊಬೈಲ್ ಚಂದಾದಾರರ ಸಂಖ್ಯೆ ತಿಂಗಳಿಂದ ತಿಂಗಳಿಗೆ 2.2 ಮಿಲಿಯನ್ (22 ಲಕ್ಷ) ಹೆಚ್ಚಳವಾಗಿ ಒಟ್ಟು 1.15 ಬಿಲಿಯನ್‌ಗೆ (115 ಕೋಟಿ) ತಲುಪಿದೆ. ಇದರಲ್ಲಿ ಜಿಯೋ ಸಿಂಹಪಾಲು ಪಡೆದುಕೊಂಡಿದ್ದು, ಭರ್ಜರಿ 1.9 ಮಿಲಿಯನ್ (19 ಲಕ್ಷ) ನೂತನ ಗ್ರಾಹಕರನ್ನು ತನಗಾಗಿಸಿಕೊಂಡಿದೆ. ಮತ್ತೊಂದೆಡೆ, ಏರ್‌ಟೆಲ್ ಸಂಸ್ಥೆಯು ಕೇವಲ 0.2 ಮಿಲಿಯನ್ (2 ಲಕ್ಷ) ಗ್ರಾಹಕರನ್ನಷ್ಟೇ ಗಳಿಸಲು ಸಾಧ್ಯವಾಯಿತು. ಅಂದರೆ, ಜಿಯೋದ ಹೊಸ ಗ್ರಾಹಕರ ಸೇರ್ಪಡೆಯು ಏರ್‌ಟೆಲ್‌ಗಿಂತ ಸುಮಾರು 10 ಪಟ್ಟು ದೊಡ್ಡದಾಗಿದೆ! ಸೆಪ್ಟೆಂಬರ್ ಅಂತ್ಯದ ವೇಳೆಗೆ ಜಿಯೋ ಒಟ್ಟು 511.14 ಮಿಲಿಯನ್ ಚಂದಾದಾರರೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಏರ್‌ಟೆಲ್ 494.29 ಮಿಲಿಯನ್ ಚಂದಾದಾರರೊಂದಿಗೆ ಎರಡನೇ ಸ್ಥಾನದಲ್ಲಿದೆ.
ಸಕ್ರಿಯ ಬಳಕೆದಾರರ ಅಖಾಡದಲ್ಲೂ ಜಿಯೋ ಹವಾ:
ಖಾಲಿ ಸಿಮ್‌ಗಳಿಗಿಂತ 'ಸಕ್ರಿಯ ಬಳಕೆದಾರರ' (Active Users) ವಿಷಯಕ್ಕೆ ಬಂದರೆ ಜಿಯೋದ ಪ್ರಾಬಲ್ಯ ಇನ್ನಷ್ಟು ಸ್ಪಷ್ಟವಾಗಿದೆ. ಸೆಪ್ಟೆಂಬರ್‌ನಲ್ಲಿ ಉದ್ಯಮದಾದ್ಯಂತ ಮೂಲ VLR (ಸಕ್ರಿಯ ಗ್ರಾಹಕರು) 0.6 ಮಿಲಿಯನ್ ಬೆಳೆದಿದ್ದರೆ, ಒಂದೇ ಜಿಯೋ ಸಂಸ್ಥೆ 1.3 ಮಿಲಿಯನ್ ಸಕ್ರಿಯ ಬಳಕೆದಾರರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಮತ್ತೊಂದೆಡೆ, ಇದೇ ಅವಧಿಯಲ್ಲಿ ಏರ್‌ಟೆಲ್ 0.2 ಮಿಲಿಯನ್ ಹಾಗೂ ವೊಡಾಫೋನ್ ಐಡಿಯಾ (Vi) 0.3 ಮಿಲಿಯನ್ ಸಕ್ರಿಯ ಗ್ರಾಹಕರನ್ನು ಕಳೆದುಕೊಂಡಿವೆ. ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಲ್ಲಿ ತನ್ನ ಸಕ್ರಿಯ ಬಳಕೆದಾರರ ಪಡೆಯನ್ನು ಹೆಚ್ಚಿಸಿಕೊಂಡ ಏಕೈಕ ನಂಬರ್ 1 ಸಂಸ್ಥೆಯಾಗಿ ಜಿಯೋ ಹೊರಹೊಮ್ಮಿದೆ.
ಏರ್‌ಟೆಲ್ ಹಿನ್ನಡೆಗೆ ಮುಖ್ಯ ಕಾರಣ:
ಏರ್‌ಟೆಲ್ ಕೇವಲ 2 ಲಕ್ಷ ಮೂಲ ಮೊಬೈಲ್ ಗ್ರಾಹಕರನ್ನು ಪಡೆದಿರುವುದು ಇತ್ತೀಚಿನ ಅವಧಿಯಲ್ಲಿ ಅದರ ಅತ್ಯಂತ ಕನಿಷ್ಠ ಸಾಧನೆಯಾಗಿದೆ. ಆಗಸ್ಟ್‌ನಲ್ಲಿ ತನ್ನ ಜನಪ್ರಿಯ ಹಾಗೂ ಕಡಿಮೆ ಬೆಲೆಯ ₹299 ಪ್ರಿಪೇಯ್ಡ್ ಪ್ಲಾನ್ ಅನ್ನು ಸ್ಥಗಿತಗೊಳಿಸಿದ್ದೇ ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ನಿರ್ಧಾರದಿಂದಾಗಿ ಹಣದ ಬಗ್ಗೆ ಹೆಚ್ಚು ಯೋಚಿಸುವ ಸಾಮಾನ್ಯ ಗ್ರಾಹಕರನ್ನು ಉಳಿಸಿಕೊಳ್ಳಲು ಏರ್‌ಟೆಲ್‌ಗೆ ಸಾಧ್ಯವಾಗಲಿಲ್ಲ. ಆಗಸ್ಟ್‌ನಲ್ಲಿ ಏರ್‌ಟೆಲ್‌ನ ಒಟ್ಟಾರೆ ವೈರ್‌ಲೆಸ್ ಗ್ರಾಹಕರ ಸೇರ್ಪಡೆ 2.69 ಮಿಲಿಯನ್ ಆಗಿದ್ದರೂ, ಮೂಲ ಮೊಬೈಲ್ ಬಳಕೆದಾರರ ಸಂಖ್ಯೆ ತೀರಾ ಕಡಿಮೆಯಾಗಿದೆ. ಅಂದರೆ ಬಂದ ಹೊಸ ಚಂದಾದಾರರಲ್ಲಿ ಹೆಚ್ಚಿನವರು ನಿತ್ಯದ ಮೊಬೈಲ್ ಬಳಕೆದಾರರಿಗಿಂತ ಕಡಿಮೆ ಆದಾಯ ತಂದುಕೊಡುವ (Low-ARPU) M2M ಸಂಪರ್ಕ ಸೇವೆಯ ಗ್ರಾಹಕರಾಗಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಇಡೀ ಟೆಲಿಕಾಂ ರಂಗ ಪಡೆದ ಪ್ರತಿ 10 ಹೊಸ ಗ್ರಾಹಕರಲ್ಲಿ 9 ಜನರನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ಜಿಯೋ ಮಾರುಕಟ್ಟೆಯಲ್ಲಿ ತನ್ನ ಮುನ್ನಡೆಯ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.














