ಸೂರ್ಯಕುಮಾರ್ ಯಾದವ್ ಕುಟುಂಬ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಈ ಭೇಟಿ ವೇಳೆ ಪುಟ್ಟ ಬಾಲಕಿ ಮುಂದೆ ಕನ್ನಡದಲ್ಲಿ ಗಣಪತಿ ಭಜನೆ ಹಾಡುವ ಮೂಲಕ ಗಮನಸೆಳೆದಿದ್ದಾರೆ. ಈ ವಿಡಿಯೋವನ್ನು ಖುದ್ದು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ನವದಹೆಲಿ (ನ.06) ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಹಾಗೂ ಕುಟಂಬ ಮೋದಿ ಭೇಟಿ ಮಾಡಿದೆ. ಪತ್ನಿ ಹಾಗೂ ಮಕ್ಕಳ ಜೊತೆಗೆ ಸೂರ್ಯಕುಮಾರ್ ಯಾದವ್ ಪ್ರಧಾನಿ ನಿವಾಸದಲ್ಲಿ ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪುಟ್ಟ ಬಾಲಕಿ ಮೋದಿ ಮುಂದೆ ಕನ್ನಡದಲ್ಲಿ ಗಣಪತಿ ಭಜನೆ ಹಾಡಿ ಗಮನಸೆಳೆದಿದ್ದಾರೆ. ಬಾಲಕಿ ಭಜನೆಗೆ ಮೋದಿ ತಾಳ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ವಿಡಿಯೋವನ್ನು ಖುದ್ದು ಮೋದಿ ಹಂಚಿಕೊಂಡಿದ್ದಾರೆ.
ಮೋದಿ ಮುಂದೆ ಕನ್ನಡದ ಭಜನೆ
ದೀಪಾವಳಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ ಎಂದು ಮೋದಿ ಬಾಲಕಿಯ ಭಜನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೋದಿ ಪಕ್ಕದಲ್ಲಿ ಸೂರ್ಯಕುಮಾರ್ ಯಾದವ್ ಕುಳಿತಿದ್ದರೆ, ಮೋದಿ ಮುಂದೆ ನಿಂತ ಬಾಲಕಿ ಗಣಪತಿ ಭಜನೆಯನ್ನು ಹಾಡಿದ್ದಾರೆ. ವಿಶೇಷ ಅಂದರೆ ಕನ್ನಡದ ಈ ಭಜನೆ ಮೋದಿ ನಿವಾಸದಲ್ಲಿ ಪ್ರತಿಧ್ವನಿಸಿದೆ. ಸೂರ್ಯಕುಮಾರ್ ಕುಟುಂಬ ಜೊತೆ ಆಪ್ತ ಸಂಬಂಧಿ ಪುಟ್ಟ ಬಾಲಕಿಯೂ ಮೋದಿ ಭೇಟಿಯಾಗಿದ್ದಾರೆ. ಈ ಬಾಲಕಿ ಹಾಡಿದ ಕನ್ನಡದ ಭಜನೆ ಇದೀಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಮಂಗಳೂರು ಮೂಲದ ಸೂರ್ಯಕುಮಾರ್ ಯಾದವ್ ಪತ್ನಿ
ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಮಂಗಳೂರು ಮೂಲದವರು. ದೇವಿಶಾ ಶೆಟ್ಟಿ ಹಾಗೂ ಅವರ ಕುಟುಂಬ ಮುಂಬೈನಲ್ಲಿ ನೆಲೆಸಿದೆ. ಹೀಗಾಗಿ ಕನ್ನಡ ಹಾಗೂ ತುಳು ಭಾಷೆ, ಹಾಡುಗಳ ಅರಿವಿದೆ. ಇದೀಗ ಮೋದಿ ಮುಂದೆ ಕನ್ನಡದ ಭಜನೆ ಹಾಡುವ ಮೂಲಕ ಸೂರ್ಯಕುಮಾರ್ ಆಪ್ತ ಸಂಬಂಧಿ, ಪುಟ್ಟ ಬಾಲಕಿ ಎಲ್ಲರ ಗಮನಸೆಳೆದಿದ್ದಾರೆ. ಸೂರ್ಯಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಶೆಟ್ಟಿ ಜೊತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಬಳಿಕ ಅವರೊಂದಿಗೆ ಫೋಟೋಗೆ ಫೋಸ್ ನೀಡಿದ್ದಾರೆ. ವಿಶೇಷ ಅಂದರೆ ಸೂರ್ಯಕುಮಾರ್ ಯಾದವ್ ಪುತ್ರಿ ರಿಧಿಮಾ ಹಾಗೂ ಪುಟಾಣಿ ಬಾಲಕಿ ಜೊತೆಗೂ ಮೋದಿ ಸಮಯ ಕಳೆದಿದ್ದಾರೆ. ಇಬ್ಬರು ಮಕ್ಕಳೊಂದಿಗೆ ಮಾತನಾಡಿದ್ದಾರೆ.
ಮೋದಿ ಭೇಟಿ ವೇಳೆ ಸೂರ್ಯಕುಮಾರ್ ಯಾದವ್ ತಮ್ಮ ಟಿ20 ವಿಶ್ವಕಪ್ ಗೆಲುವಿನ ಕುರಿತು ವಿವರಿಸಿದ್ದಾರೆ. ಇದೇ ವೇಳೆ ಟಿ20 ವಿಶ್ವಕಪ್ ಪದಕವನ್ನು ಹಿಡಿದು ಮೋದಿ ಸಾಧನೆಯನ್ನು ಕೊಂಡಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ಗೆಲುವಿನ ಬಳಿಕ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ತಂಡ ಮುನ್ನಡೆಸಿದ ಸೂರ್ಯಕುಮಾರ್ ಯಾದವ್ ಬಳಿಕ ಟೀಂ ಇಂಡಿಯಾದಿಂದಲೇ ಹೊರಬಿದ್ದಿದ್ದಾರೆ. ನಾಯಕತ್ವ ಶ್ರೇಯಸ್ ಅಯ್ಯರ್ ಪಾಲಾಗಿದ್ದರೆ, ಸೂರ್ಯಕುಮಾರ್ ತಂಡದಲ್ಲೂ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.
ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ ಈ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಎಲ್ಲಿ ತಪ್ಪಾಯಿತು ಅನ್ನೋದು ಗೊತ್ತಿಲ್ಲ. ಆದರೆ ತಂಡಕ್ಕೆ ಮರಳಲು ಕಠಿಣ ಅಭ್ಯಾಸ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಐಪಿಎಲ್ ಪಯಣದಲ್ಲೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ, ಇತ್ತ ರಣಜಿ ಟೂರ್ನಿಯಲ್ಲೂ ಅವಕಾಶಕ್ಕಾಗಿ ಹೋರಾಡುವ ಪರಿಸ್ಥಿತಿ ಎದುರಾಗಿತ್ತು.






