Taliban ಅಫ್ಘಾನ್ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿಗೆ ಭಾರತ ಸರ್ಕಾರ ರಾಜಾತಿಥ್ಯ ನೀಡಿರುವುದನ್ನು ಗೀತರಚನೆಕಾರ ಜಾವೇದ್ ಅಖ್ತರ್ ತೀವ್ರವಾಗಿ ಖಂಡಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಡುವ ದೇಶವೇ ತಾಲಿಬಾನ್ ಪ್ರತಿನಿಧಿಗೆ ಗೌರವ ನೀಡಿರುವುದು ನಾಚಿಕೆಗೇಡು ಎಂದಿದ್ದಾರೆ.

ಅಫ್ಘಾನ್ ಸಚಿವರಿಗೆ ಭಾರತದ ರಾಜಾತಿಥ್ಯಕ್ಕೆ ಜಾವೇದ್ ಅಖ್ತರ್ ಅಸಮಾಧಾನ:

ನವದೆಹಲಿ: ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಭಾರತ ಸರ್ಕಾರವೂ ಅಫ್ಘಾನ್‌ನ ತಾಲಿಬಾನ್‌ ಸರ್ಕಾರದ ಸಚಿವರಿಗೆ ರಾಜಾತಿಥ್ಯ ನೀಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತೀಚೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತದಲ್ಲಿರುವ ತಾಲಿಬಾನ್‌ನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರು ಭಾರತಕ್ಕೆ ಭೇಟಿ ನೀಡಿದ್ದು, ಈ ವೇಳೆ ಭಾರತ ಸರ್ಕಾರ ಅವರಿಗೆ ರಾಜ ಮರ್ಯಾದೆ ನೀಡಿತ್ತು.ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೂ ಅಮೀರ್ ಖಾನ್ ಮುತ್ತಾಕಿ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ದ್ವೀಪಕ್ಷೀಯ ಮಾತುಕತೆ ನಡೆಸಿದ್ದರು.

ಶತ್ರುಗಳ ಶತ್ರು ಮಿತ್ರ ಎಂಬಂತೆ ಪಾಕಿಸ್ತಾನದ ವಿರೋಧಿಯಾಗಿರುವ ಅಫ್ಘಾನಿಸ್ತಾನದ ಜೊತೆ ಭಾರತ ಮಾತುಕತೆ ದೇಶದ ರಾಜತಾಂತ್ರಿಕತೆಯ ಒಂದು ಭಾಗ ಎಂದರೆ ತಪ್ಪಗಲಾರದು ಆದರೆ ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್ ಮಾತ್ರ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಬಂದಿರುವ ಮುತ್ತಾಕಿ ಪ್ರಸ್ತುತ ತಮ್ಮ ಆರು ದಿನಗಳ ಭಾರತ ಪ್ರವಾಸದ ಭಾಗವಾಗಿ ದೇಶದಲ್ಲಿದ್ದಾರೆ. 2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ನಾಯಕರೊಬ್ಬರು ದೇಶಕ್ಕೆ ನೀಡುತ್ತಿರುವ ಮೊದಲ ಪ್ರವಾಸ ಇದಾಗಿದೆ.

ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ ಎಂದ ಜಾವೇದ್ ಅಖ್ತರ್:

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾವೇದ್ ಅಖ್ತರ್‌, ಎಲ್ಲಾ ರೀತಿಯ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸಿದವರು(ಭಾರತ) ವಿಶ್ವದ ಅತ್ಯಂತ ಕೆಟ್ಟ ಭಯೋತ್ಪಾದಕ ಗುಂಪು ತಾಲಿಬಾನ್‌ನ ಪ್ರತಿನಿಧಿಗೆ ನೀಡಿದ ಗೌರವ ಮತ್ತು ಸ್ವಾಗತವನ್ನು ನೋಡಿ ನನಗೆ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದು ಅಖ್ತರ್ ತಮ್ಮ ಎಕ್ಸ್‌ನಲ್ಲಿ ಬರೆದಿದ್ದಾರೆ.

ಕಳೆದ ಗುರುವಾರ ದೆಹಲಿಗೆ ಬಂದಿಳಿದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರಿಗೆ ಗೌರವಯುತ ಸ್ವಾಗತ ನೀಡಿದ್ದಕ್ಕಾಗಿ ಅವರು ದಕ್ಷಿಣ ಏಷ್ಯಾದ ಅತ್ಯಂತ ಪ್ರಭಾವಶಾಲಿ ಇಸ್ಲಾಮಿಕ್ ಸೆಮಿನರಿಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿರುವ ದಾರುಲ್ ಉಲೂಮ್ ದಿಯೋಬಂದ್ ಅನ್ನು ಕೂಡ ಟೀಕಿಸಿದರು.

ಆ ದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಿದವರಲ್ಲಿ ಒಬ್ಬರಾದ ತಮ್ಮ ಇಸ್ಲಾಮಿಕ್ ಹೀರೋಗೆ ಇಷ್ಟೊಂದು ಗೌರವಯುತ ಸ್ವಾಗತ ನೀಡಿದ್ದಕ್ಕಾಗಿ ದಿಯೋಬಂದ್‌ಗೂ ನಾಚಿಕೆಯಾಗಬೇಕು. ನನ್ನ ಭಾರತೀಯ ಸಹೋದರ ಸಹೋದರಿಯರೇ ನಮಗೆ ಏನಾಗುತ್ತಿದೆ ಎಂದು ಅಖ್ತರ್ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾಲಿಬಾನ್ ನಿರ್ಬಂಧ ಸಮಿತಿಯು ತಾಲಿಬಾನ್ ನಾಯಕನ ಮೇಲೆ ವಿಧಿಸಲಾದ ಪ್ರಯಾಣ ನಿಷೇಧಕ್ಕೆ ವಿನಾಯಿತಿಯನ್ನು ಅನುಮೋದಿಸಿದ ನಂತರ ಮುತ್ತಕಿ ಕಳೆದ ಗುರುವಾರ ಭಾರತಕ್ಕೆ ಭೇಟಿ ನೀಡಿದ್ದರು. 2001ರ ಜನವರಿ 25ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಮೀರ್ ಖಾನ್ ಮುತ್ತಕಿಯನ್ನು ಪಟ್ಟಿಗೆ ಸೇರಿಸಿ ಅವರಿಗೆ ಪ್ರಯಾಣ ನಿಷೇಧ, ಆಸ್ತಿ ಮುಟ್ಟುಗೋಲು ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಡಿಸಿತು. ಭಾರತ ಇನ್ನೂ ತಾಲಿಬಾನ್ ಸರ್ಕಾರವನ್ನು ಗುರುತಿಸಿಲ್ಲ ಮತ್ತು ಕಾಬೂಲ್‌ನಲ್ಲಿ ನಿಜವಾಗಿಯೂ ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆಗೆ ಶ್ರಮಿಸುತ್ತಿದೆ.

ಕಳೆದ ವಾರ, ದೆಹಲಿಯಲ್ಲಿ ಮುತ್ತಕಿ ನಡೆಸಿದ ಮಾಧ್ಯಮ ಸಂವಾದದಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ ಹೇರಿ ಭಾರಿ ಸುದ್ದಿಯಾಗಿದ್ದರು. ಅನೇಕ ರಾಜಕಾರಣಿಗಳು ಪತ್ರಕರ್ತರು ಮುತ್ತಾಕಿ ಅವರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದರು.

ಇದನ್ನೂ ಓದಿ: ರಸ್ತೆಯಲ್ಲಿದ್ದ ಹಸುವಿಗೆ ತಿಳಿಯದಂತೆ ಇಂಜೆಕ್ಷನ್ ಚುಚ್ಚಿದ ಮುಸ್ಲಿಂ ಯುವತಿಯ ಹಿಡಿದ ಯುವಕರು

ಇದನ್ನೂ ಓದಿ: ಬೆಂಗಳೂರಿನ ರಸ್ತೆಗಳ ದುಸ್ಥಿತಿ ಬಗ್ಗೆ ಕಿರಣ್ ಮಜುಂದಾರ್ ಅಸಮಾಧಾನ: ಉದ್ಯಮಿಯ ಟ್ವಿಟ್‌ಗೆ ಎಂಬಿ ಪಾಟೀಲ್ ಆಕ್ರೋಶ

Scroll to load tweet…