ನವದೆಹಲಿಯ ಐತಿಹಾಸಿಕ ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳದ ಪಟ್ಟಿಯಿಂದ ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಇನ್ನು ಮುಂದೆ ಪ್ರತಿಭಟನೆಗಳನ್ನು ನಡೆಸಲು ರಾಮ್‌ಲೀಲಾ ಮೈದಾನ ಸೇರಿದಂತೆ 3 ಹೊಸ ಸ್ಥಳಗಳನ್ನು ನಿಗದಿಪಡಿಸಲಾಗಿದೆ.

ನವದೆಹಲಿ (ಅ.12): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಶಕಗಳಿಂದಲೂ ಎಲ್ಲ ರೀತಿಯ ಸಾರ್ವಜನಿಕ ಧರಣಿ, ಸತ್ಯಾಗ್ರಹ ಹಾಗೂ ಪ್ರತಿಭಟನೆಗಳ ಪ್ರಮುಖ ಕೇಂದ್ರವಾಗಿದ್ದ ಐತಿಹಾಸಿಕ 'ಜಂತರ್ ಮಂತರ್' (Jantar Mantar) ಇನ್ಮುಂದೆ ಅಧಿಕೃತ ಪ್ರತಿಭಟನಾ ಸ್ಥಳವಾಗಿರುವುದಿಲ್ಲ. ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವೆಂದು ಘೋಷಿಸಿದ್ದ ಹಳೆಯ ಅಧಿಸೂಚನೆಯನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ರದ್ದುಗೊಳಿಸಿದ್ದು, ಧರಣಿಗಳನ್ನು ಆಯೋಜಿಸಲು 3 ನೂತನ ಸ್ಥಳಗಳನ್ನು ನಿಗದಿಪಡಿಸಿದೆ. ಕೇಂದ್ರ ಗೃಹ ಸಚಿವಾಲಯವು (MHA) ರಚಿಸಿದ್ದ ಉನ್ನತ ಮಟ್ಟದ ತಜ್ಞರ ಸಮಿತಿಯ ಸಮಗ್ರ ಸಿಫಾರಸುಗಳ ಆಧಾರದ ಮೇಲೆ ದೆಹಲಿ ಪೊಲೀಸರು ಈ ಹೊಸ ಆದೇಶವನ್ನು ಹೊರಡಿಸಿದ್ದಾರೆ.

ದೆಹಲಿ ಪೊಲೀಸ್ ಕಾಯ್ದೆಗೆ ತಿದ್ದುಪಡಿ - 3 ಹೊಸ ಸ್ಥಳಗಳು ನಿಗದಿ

ದೆಹಲಿ ಪೊಲೀಸರು ಈ ಹಿಂದೆ 2022 ರ ಏಪ್ರಿಲ್ 28 ರಂದು ಹೊರಡಿಸಿದ್ದ 'ಸ್ಟ್ಯಾಂಡಿಂಗ್ ಆರ್ಡರ್ ಸಂಖ್ಯೆ L&O/48/22' ಕಾಯ್ದೆಗೆ ಭಾಗಶಃ ತಿದ್ದುಪಡಿ ತರುವ ಮೂಲಕ ಈ ಹೊಸ ಆದೇಶವನ್ನು ಜಾರಿಗೆ ತರಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಧರಣಿಗಳು, ಮೆರವಣಿಗೆಗಳು ಹಾಗೂ ಪ್ರತಿಭಟನಾ ಸಭೆಗಳನ್ನು ನಡೆಸಲು ಕೇಂದ್ರ ಸರ್ಕಾರವು ಕೆಳಗಿನ ಮೂರು ನೂತನ ಸ್ಥಳಗಳನ್ನು ಪ್ರಕಟಿಸಿದೆ. ರಾಮ್‌ಲೀಲಾ ಮೈದಾನ (Ramlila Maidan), ಬುರಾರಿ ಮೈದಾನ (Burari Maidan) ಹಾಗೂ ಸಿಬಿಡಿ ಗ್ರೌಂಡ್ - ಪೂರ್ವ ದೆಹಲಿ (CBD Ground, East Delhi) ಪ್ರದೇಶದಲ್ಲಿ ಇನ್ನು ಪ್ರತಿಭಟನೆ ಮಾಡಬಹುದು.

ಈ ಮೂರು ಹೊಸ ಸ್ಥಳಗಳಲ್ಲಿ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಪ್ರತಿಭಟನೆಗಳನ್ನು ಆಯೋಜಿಸಲು ಅನುಸರಿಸಬೇಕಾದ ಸಂಪೂರ್ಣ ಹಾಗೂ ಪರಿಷ್ಕೃತ 'ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್' (SOP - ಮಾದರಿ ಕಾರ್ಯಾಚರಣೆ ನಿಯಮಾವಳಿ) ಶೀಘ್ರದಲ್ಲೇ ಪ್ರತ್ಯೇಕವಾಗಿ ಹೊರಬೀಳಲಿದೆ.

ಜಂತರ್ ಮಂತರ್ ಧರಣಿ ರದ್ದತಿಗೆ ಕಾರಣವೇನು?

ಇತ್ತೀಚಿನ ದಿನಗಳಲ್ಲಿ ಜಂತರ್ ಮಂತರ್‌ನಲ್ಲಿ ದೇಶದ ವಿವಿಧ ಭಾಗಗಳಿಂದ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿ ಸತತವಾಗಿ ಎರಡು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹಾಗೂ ಸಂಚಾರ ವ್ಯವಸ್ಥೆಗೆ ಭಾರಿ ಸವಾಲು ಸೃಷ್ಟಿಸಿತ್ತು.

ವಿಶೇಷವಾಗಿ ಕಾಕ್ರೋಚ್‌ ಜನತಾ ಪಾರ್ಟಿ (CJP) ವತಿಯಿಂದ ಜಂತರ್ ಮಂತರ್‌ನಲ್ಲಿ ಭಾರಿ ಸದ್ದು ಮಾಡಿದ ಎರಡು ಪ್ರತಿಭಟನೆಗಳು ನಡೆದಿದ್ದವು. ಮೊದಲನೆಯದಾಗಿ, ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಬೃಹತ್ ಧರಣಿ ನಡೆಸಿತ್ತು. ತದನಂತರ, ಮತಗಳ ಅಕ್ರಮ/ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣೆ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮತ್ತೆ ಬೃಹತ್ ಪ್ರತಿಭಟನೆ ನಡೆಸಿ ದೆಹಲಿ ಆಡಳಿತಕ್ಕೆ ತಲೆನೋವು ತಂದಿಟ್ಟಿತ್ತು. ಈ ಸಾಲು ಸಾಲು ಭಾರಿ ಪ್ರತಿಭಟನೆಗಳ ಬೆನ್ನಲ್ಲೇ ಜಂತರ್ ಮಂತರ್‌ನಲ್ಲಿ ಸಾರ್ವಜನಿಕ ಧರಣಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಗೃಹ ಸಚಿವಾಲಯ ಈ ಕಟ್ಟುನಿಟ್ಟಿನ ತೀರ್ಮಾನಕ್ಕೆ ಬಂದಿದೆ.