ತಮ್ಮ ವಿವಾದಿತ ಹೇಳಿಕೆಗಳ ಕಾರಣದಿಂದಾಗಿಯೇ ಸುದ್ದಿಯಲ್ಲಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಇದೀಗ ಭಾರತದ ಪರಿಸ್ಥಿತಿಯನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ. ಇದರ ಬೆನ್ನಲ್ಲಿಯೇ ಅವರ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಟೀಕಾಪ್ರಹಾರ ಆರಂಭವಾಗಿದೆ. 

ನವದೆಹಲಿ (ಮಾ.16):  ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಭಾರತವನ್ನು ಪಾಕಿಸ್ತಾನದೊಂದಿಗೆ ಹೋಲಿಸಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಲಿನ ಪೊಲೀಸರು ಮಾಜಿ ಪ್ರಧಾನಿಯಾಗಿರುವ ಇಮ್ರಾನ್‌ ಖಾನ್‌ರನ್ನು ಬಂಧಿಸಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರ. ಅದೇ ರೀತಿಯಲ್ಲಿ ಭಾರತ ಸರ್ಕಾರ, ವಿರೋಧ ಪಕ್ಷದ ನಾಯಕರು ಹಾಗೂ ಹಿರಿಯ ರಾಜಕಾರಣಿಗಳ ಮೇಲೆ ದಾಳಿ ಮಾಡುತ್ತಿದೆ. ಏಜೆನ್ಸಿಗಳನ್ನು ಛೂ ಬಿಟ್ಟು ಅವರ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಗುರುವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಹಬೂಬಾ ಮುಫ್ತಿ, ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿದೆ. ಇದು ಅತ್ಯಂತ ಕೆಟ್ಟ ವಿಚಾರ. ನಮ್ಮ ದೇಶದಲ್ಲಿ ಸರ್ಕಾರದ ಆದೇಶದೊಂದಿಗೆ ಮಾಜಿ ಮಂತ್ರಿಗಳು ಹಾಗೂ ಹಾಲಿ ಮಂತ್ರಿಗಳನ್ನು ಜೈಲಿಗೆ ಅಟ್ಟುವ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಅರ್ಥದಲ್ಲಿ ನೋಡುವುದಾದರೆ, ಭಾರತದ ಪರಿಸ್ಥಿತಿ ಕೂಡ ಪಾಕಿಸ್ತಾನದಂತೆಯೇ ಇದೆ. ನಮ್ಮ ದೇಶದಲ್ಲಿ ಇಡಿ, ಸಿಬಿಐನಂಥ ಏಜೆನ್ಸಿಗಳನ್ನು ದೇಶದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Scroll to load tweet…


ದೆಹಲಿಯ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ, ಕೆಸಿಆರ್‌ ಅವರ ಪುತ್ರಿ ಕೆ.ಕವಿತಾ ಅವರನ್ನು ಸರ್ಕಾರ ಯಾವ ರೀತಿಯಲ್ಲಿ ಟಾರ್ಗೆಟ್‌ ಮಾಡುತ್ತಿದೆ ಎಂದು ಎಲ್ಲರೂ ನೋಡುತ್ತಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬವೂ ಏಜೆನ್ಸಿಗಳ ಗುರಿಯಾಗಿದೆ ಎಂದು ಹೇಳಿದ್ದಾರೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಫೆಬ್ರವರಿ 26 ರಂದು 8 ಗಂಟೆಗಳ ವಿಚಾರಣೆಯ ನಂತರ ಸಿಬಿಐ ಮನೀಶ್ ಸಿಸೋಡಿಯಾ ಅವರನ್ನು ಬಂಧನ ಮಾಡಿತ್ತು. ಸಿನಬಿಐ ಫೆಬ್ರವರಿ 27 ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತು. ನ್ಯಾಯಾಲಯವು ಅವರನ್ನು 5 ದಿನ ಮತ್ತು ನಂತರ 2 ದಿನಗಳ ಕಾಲ ಸಿಬಿಐ ವಶಕ್ಕೆ ಕಳುಹಿಸಿತು. ಇದರ ನಂತರ ಸಿಸೋಡಿಯಾ ಅವರನ್ನು ನ್ಯಾಯಾಂಗ ಬಂಧನದಲ್ಲಿ ತಿಹಾರ್ ಜೈಲಿಗೆ ಕಳುಹಿಸಲಾಯಿತು. ಆ ಬಳಿಕ ಇಡಿ ಅವರನ್ನು ಬಂಧಿಸಿತ್ತು.

ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಇಸಿಐ ಭೇಟಿ ಮಾಡಿದ ವಿರೋಧ ಪಕ್ಷಗಳ ನಿಯೋಗ!

ಸದ್ಯ ಸಿಸೋಡಿಯಾ ಅವರು ಮಾರ್ಚ್ 17ರವರೆಗೆ ಇಡಿ ಕಸ್ಟಡಿಯಲ್ಲಿದ್ದಾರೆ. ಅದೇ ಸಮಯದಲ್ಲಿ ಸಿಬಿಐ ಪ್ರಕರಣದಲ್ಲಿ ನ್ಯಾಯಾಲಯವು ಮಾರ್ಚ್ 21 ರಂದು ಮಧ್ಯಾಹ್ನ 2 ಗಂಟೆಗೆ ಸಿಸೋಡಿಯಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ. ಕಳೆದ ವರ್ಷ ದೆಹಲಿ ಸರ್ಕಾರದ ಮತ್ತೊಬ್ಬ ಸಚಿವ ಸತ್ಯೇಂದ್ರ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಬಂಧಿಸಿತ್ತು.

'ರಾಹುಲ್‌ ಗಾಂಧಿಗೆ ತಲೆಗೆ ಹೊಡೆದು ಬುದ್ದಿಹೇಳಿ..' ಸೋನಿಯಾ, ಪ್ರಿಯಾಂಕಾಗೆ ಬಿಜೆಪಿ ಮನವಿ!

ಇನ್ನೊಂದೆಡೆ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಇಡಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಪುತ್ರಿ ಕವಿತಾ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಮಾರ್ಚ್ 11 ರಂದು ಸಂಸ್ಥೆಯು ಕವಿತಾ ಅವರನ್ನು ದೆಹಲಿಯಲ್ಲಿ ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿತು. ಮಾರ್ಚ್ 16 ರಂದು ಇಡಿ ಅವರನ್ನು ಮತ್ತೆ ವಿಚಾರಣೆಗೆ ಕರೆದಿತ್ತು. ಆದರೆ, ಕವಿತಾ ಇಂದು ಇಡಿ ಮುಂದೆ ಹಾಜರಾಗಿರಲಿಲ್ಲ. ತಮ್ಮ ವಕೀಲರ ಕೈಯಲ್ಲಿ ದಾಖಲೆಗಳನ್ನು ಏಜೆನ್ಸಿಗೆ ಕಳುಹಿಸಿದರು. ಇದಾದ ಬಳಿಕ ಇಡಿ ಗುರುವಾರ ಕವಿತಾಗೆ ಹೊಸ ಸಮನ್ಸ್ ಜಾರಿ ಮಾಡಿದ್ದು, ಮಾರ್ಚ್ 20ರಂದು ವಿಚಾರಣೆಗೆ ಕರೆದಿದ್ದು, ಮತ್ತೊಂದೆಡೆ ಸುಪ್ರೀಂ ಕೋರ್ಟ್ ಮಾ.24ರಂದು ವಿಚಾರಣೆ ನಡೆಸಲಿದೆ. ಕವಿತಾಗೆ ಕೋರ್ಟ್ ಯಾವುದೇ ಮಧ್ಯಂತರ ಪರಿಹಾರ ನೀಡಿಲ್ಲ.