ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ನಡೆದ ಸರ್ವಪಕ್ಷ ಸಭೆಯಲ್ಲಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಾರತ ಎಂದಿಗೂ 'ದಲ್ಲಾಳಿ ರಾಷ್ಟ್ರ'ವಾಗಿ ವರ್ತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ನವದೆಹಲಿ (ಮಾ.25): ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತವು ಎಂದಿಗೂ "ದಲ್ಲಾಳಿ ರಾಷ್ಟ್ರ" (Dalal Nation) ಅಥವಾ ಮಧ್ಯವರ್ತಿಯಂತೆ ವರ್ತಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಬುಧವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಅವರು ಈ ಖಡಕ್‌ ಮಾತನಾಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ಮಧ್ಯೆ, ಅಮೆರಿಕ ಮತ್ತು ಇರಾನ್ ನಡುವೆ ಸಂಧಾನ ನಡೆಸಲು ತಾನು ಸಿದ್ಧ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೊಂಡಿದ್ದರು. ಈ ವಿಚಾರವನ್ನು ಸಭೆಯಲ್ಲಿ ವಿರೋಧ ಪಕ್ಷಗಳು ಪ್ರಸ್ತಾಪಿಸಿದಾಗ, ಜೈಶಂಕರ್ ಅವರು ಭಾರತದ ನಿಲುವನ್ನು ಸ್ಪಷ್ಟಪಡಿಸಿದರು ಎಂದು ಮೂಲಗಳು ತಿಳಿಸಿವೆ. ಅಮೆರಿಕ-ಇರಾನ್‌ ನಡುವಿನ ಯುದ್ಧಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ ಮಾಡುವುದು ಭಾರತಕ್ಕೆ ಆಗುವ ಹಿನ್ನಡೆ ಎಂದು ವಿಪಕ್ಷ ಕಾಂಗ್ರೆಸ್‌ನ ನಾಯಕರು ಹೇಳಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಭೆಯಲ್ಲಿ ಭಾಗವಹಿಸಿದ ಪ್ರಮುಖರು

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಂಸತ್ತಿನಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಪಾಲ್ಗೊಂಡಿದ್ದರು.

ಪಾಕಿಸ್ತಾನದ ಮಧ್ಯಸ್ಥಿಕೆ ಪ್ರಯತ್ನ

ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ಮಾತುಕತೆಗೆ ವೇದಿಕೆ ಕಲ್ಪಿಸುವುದು ನಮಗೆ ಗೌರವದ ವಿಷಯ ಎಂದು ಶೆಹಬಾಜ್ ಷರೀಫ್ ಮಂಗಳವಾರ ಹೇಳಿದ್ದರು. ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳ ಮೂಲಕ ಅಮೆರಿಕದ ಪ್ರಸ್ತಾವನೆಯನ್ನು ಇರಾನ್‌ಗೆ ರವಾನಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಪಾಕ್ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಇರಾನ್ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಮಾತುಕತೆ ನಡೆದರೆ ಅದು ಪಾಕಿಸ್ತಾನ ಅಥವಾ ಟರ್ಕಿಯಲ್ಲಿ ನಡೆಯಬಹುದು ಎಂದು ಇರಾನ್ ಸೂಚಿಸಿದೆ, ಆದರೆ ಇನ್ನೂ ಅಧಿಕೃತ ದಿನಾಂಕ ನಿಗದಿಯಾಗಿಲ್ಲ.

ಇರಾನ್ ಮತ್ತು ಇಸ್ರೇಲ್ ನಿಲುವು

ತೆಹ್ರಾನ್ ಸದ್ಯಕ್ಕೆ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಯಾವುದೇ ಮಾತುಕತೆ ನಡೆಸುತ್ತಿಲ್ಲ ಎಂದು ಬಹಿರಂಗವಾಗಿ ಹೇಳಿದೆ. ಅಮೆರಿಕದ ಕ್ರಮಗಳನ್ನು "ರಾಜತಾಂತ್ರಿಕತೆಗೆ ಮಾಡಿದ ದ್ರೋಹ" ಎಂದು ಕರೆದಿದೆ. ಅಮೆರಿಕದ ಪ್ರಸ್ತಾವನೆಯ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ ಮಾಹಿತಿ ನೀಡಲಾಗಿದ್ದು, ಇರಾನ್ ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತರಾದ ನಂತರ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಆವರಿಸಿದೆ. ಈ ಸಂಘರ್ಷ ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಾಗಿದೆ.