- Home
- News
- India News
- ಪತ್ನಿ ಜತೆ ತಾಜ್‌ಮಹಲ್‌ಗೆ ಅಮೆರಿಕ ವಿದೇಶಾಂಗ ಸಚಿವ ರುಬಿಯೋ ಭೇಟಿ, ಭಾರತದ ಇರಾನ್ ರಾಯಭಾರಿ ಕಚೇರಿ ವ್ಯಂಗ್ಯ!
ಪತ್ನಿ ಜತೆ ತಾಜ್‌ಮಹಲ್‌ಗೆ ಅಮೆರಿಕ ವಿದೇಶಾಂಗ ಸಚಿವ ರುಬಿಯೋ ಭೇಟಿ, ಭಾರತದ ಇರಾನ್ ರಾಯಭಾರಿ ಕಚೇರಿ ವ್ಯಂಗ್ಯ!
ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ತಾಜ್ ಮಹಲ್ ಭೇಟಿಗೆ ಇರಾನ್ ವ್ಯಂಗ್ಯವಾಡಿದೆ, ತಾಜ್‌ಗೆ ಇರುವ ಇರಾನಿನ ನಂಟನ್ನು ನೆನಪಿಸಿ ಟ್ರಂಪ್ ಆಡಳಿತಕ್ಕೆ ತಿರುಗೇಟು ನೀಡಿದೆ. ಇರಾನ್‌ನ ಇತಿಹಾಸ ಅಳಿಸಿಹಾಕುತ್ತೀವಿ ಎಂದವರೇ ಇದೀಗ ಅದೇ ಇತಿಹಾಸದ ಮುಂದೆ ನಿಂತಿದ್ದಾರೆ ಎಂದು ವ್ಯಂಗ್ಯ

ರುಬಿಯೋಗೆ ಇರಾನ್ ಟಾಂಗ್
ನವದೆಹಲಿ: ಪತ್ನಿ ಸಮೇತರಾಗಿ 4 ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಸೋಮವಾರ, ಪ್ರೇಮಸೌಧ ಎಂದೇ ಖ್ಯಾತವಾದ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿದರು. ಅವರೊಂದಿಗೆ, ಭಾರತಕ್ಕೆ ಅಮೆರಿಕದ ವಿಶೇಷ ರಾಯಭಾರಿಯಾಗಿರುವ ಸೆರ್ಗಿಯೋ ಗೋರ್ ಕೂಡ ಇದ್ದರು. ಭೇಟಿಯ ಫೋಟೋಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಗೋರ್, ‘ಇದು ಭಾರತದ ಅಸಾಧಾರಣ ಪರಂಪರೆ ಮತ್ತು ಕರಕುಶಲತೆಯ ಸಂಕೇತ’ ಎಂದು ವರ್ಣಿಸಿದ್ದಾರೆ.

ಇರಾನ್ ವ್ಯಂಗ್ಯ
ಇದೇ ಫೋಟೋವನ್ನು ಹೈದರಾಬಾದ್‌ನಲ್ಲಿರುವ ಇರಾನ್‌ನ ದೂತಾವಾಸ ಹಂಚಿಕೊಂಡಿದ್ದು, ‘ತಾಜ್‌ನ ಇತಿಹಾಸ ಗೊತ್ತಿದ್ದರೆ ರುಬಿಯೋ ಹೀಗೆ ಪೋಸ್ ಕೊಡುತ್ತಿರಲಿಲ್ಲ. ಇದನ್ನು ಮೊಘಲ್ ಚಕ್ರವರ್ತಿ ಷಹಜಹಾನ್, ತಮ್ಮ ಇರಾನ್ ಮೂಲದ ಮಡದಿ ಮುಮ್ತಾಜ್‌ಗಾಗಿ ಕಟ್ಟಿಸಿದ್ದರು ಹಾಗೂ ಇದರ ಹಿಂದೆ ಇರಾನಿನ ವಾಸ್ತುಶಿಲ್ಪಿಗಳ ಶ್ರಮವಿದೆ’ ಎಂದು ಒತ್ತಿಹೇಳಿತು. ಈ ಮೂಲಕ, ಇರಾನ್ ನಾಗರಿಕತೆಯನ್ನೇ ಅಳಿಸಿಹಾಕುವ ಅಧ್ಯಕ್ಷ ಟ್ರಂಪ್‌ರ ಬೆದರಿಕೆಗೆ ತಿರುಗೇಟು ನೀಡಿದೆ.
ಇರಾನ್ ಅಧಿಕಾರಿಗಳು ಆಕ್ಷೇಪ
ಒಂದೆಡೆ ರುಬಿಯೊ ಅವರ ಸರ್ಕಾರ ಇರಾನ್‌ನ ನಾಗರಿಕತೆಯನ್ನೇ ಅಳಿಸಿಹಾಕುವ ಬೆದರಿಕೆ ಹಾಕುತ್ತಿದೆ, ಮತ್ತೊಂದೆಡೆ ಇರಾನಿಯನ್ನರು ಪ್ರೀತಿಯಿಂದ ನಿರ್ಮಿಸಿದ ಐತಿಹಾಸಿಕ ಕಟ್ಟಡದ ಮುಂದೆ ಹೆಮ್ಮೆ ಪಡುತ್ತಿದ್ದಾರೆ ಎಂದು ಇರಾನ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು
ಪಾಕ್ ಸಂಬಂಧಕ್ಕಾಗಿ ಭಾರತದ ಹಿತಾಸಕ್ತಿ ಬಲಿ ಇಲ್ಲ
ಅನ್ಯ ದೇಶಗಳ ಜತೆಗೆ ಸಂಬಂಧದ ವಿಚಾರದಲ್ಲಿ ನಾವು ಭಾರತದ ಜತೆಗಿನ ಮೈತ್ರಿಯನ್ನು ಬಲಿನೀಡುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಭರವಸೆ ನೀಡಿದ್ದಾರೆ. ಅಮೆರಿಕ-ಪಾಕ್ ಜತೆಗೆ ಇತ್ತೀಚೆಗೆ ಹೆಚ್ಚುತ್ತಿರುವ ಆತ್ಮೀಯತೆ ಕುರಿತು ಭಾರತದಲ್ಲಿ ವ್ಯಕ್ತವಾಗುತ್ತಿರುವ ಕಳವಳ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಮಿಲಿಟರಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವುದಿಲ್ಲ. ಪ್ರತಿಯೊಂದು ದೇಶವೂ ಹಲವು ದೇಶಗಳೊಂದಿಗೆ ವ್ಯೂಹಾತ್ಮಕ ಹಂತದ ಸಂಬಂಧ ಹೊಂದಿರುತ್ತದೆ. ನಾವು ವಿಶ್ವದ ಹಲವು ದೇಶಗಳ ಜತೆಗೆ ವ್ಯೂಹಾತ್ಮಕ ಸಂಬಂಧ ಹೊಂದಿದ್ದೇವೆ. ಭಾರತವೂ ಅದೇ ರೀತಿಯ ಸಂಬಂಧ ಹೊಂದಿದೆ. ಪ್ರತಿಯೊಂದು ಜವಾಬ್ದಾರಿಯುತ ದೇಶವೂ ಈ ರೀತಿ ಮಾಡುತ್ತದೆ. ಆದರೆ ವಿಶ್ವದ ಯಾವುದೇ ದೇಶದ ಜತೆಗಿನ ನಮ್ಮ ಸಂಬಂಧವು ಭಾರತದ ಜತೆಗಿನ ನಮ್ಮ ವ್ಯೂಹಾತ್ಮಕ ಮೈತ್ರಿಗೆ ಧಕ್ಕೆ ತರುತ್ತದೆ ಎಂದು ಭಾವಿಸುವುದಿಲ್ಲ ಎಂದು ತಿಳಿಸಿದರು.
ಭಾರತೀಯರಿಗೆ ಜನಾಂಗೀಯ ನಿಂದನೆಗೆ ಖಂಡನೆ
ಅಮೆರಿಕದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ನಿಂದನೆ ಕೆಲವು ಮೂರ್ಖರ ಕೆಲಸ. ಆದರೆ ಅದು ಇಡೀ ಅಮೆರಿಕದ ವರ್ತನೆಯನ್ನು ಪ್ರತಿಫಲಿಸುವುದಿಲ್ಲ ಎಂದು ಮೆರಿಕದ ವಿದೇಶಾಂಗ ಸಚಿವ ಮಾರ್ಕ್ ರುಬಿಯೋ ಸ್ಪಷ್ಟಪಡಿಸಿದ್ದಾರೆ. ಭಾರತೀಯರ ವಿರುದ್ಧ ಹೆಚ್ಚುತ್ತಿರುವ ಜನಾಂಗೀಯ ನಿಂದನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ ಆನ್‌ಲೈನ್ ಮತ್ತು ಇತರೆಡೆ ಭಾರತೀಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಘಟನೆಗಳು ನಡೆದಿರಬಹುದು. ಈ ರೀತಿಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ, ಪ್ರತಿಯೊಂದು ದೇಶದಲ್ಲೂ ಮೂರ್ಖರು ಇರುತ್ತಾರೆ. ಇಲ್ಲೂ ಅಂಥವರು ಇರುತ್ತಾರೆ, ನಮ್ಮಲ್ಲೂ ಇರುತ್ತಾರೆ ಎಂದು ಭಾವಿಸಿದ್ದೇನೆ. ಅವರು ಆಗಾಗ್ಗೆ ತಲೆಹರಟೆಯ ಕಮೆಂಟ್‌ಗಳನ್ನು ಮಾಡುತ್ತಿರುತ್ತಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

