Asianet Suvarna News Asianet Suvarna News

Republic of Hindutva: ಜೈಪುರ ಸಾಹಿತ್ಯೋತ್ಸವದಲ್ಲೂ ಪ್ರಧಾನಿ ನರೇಂದ್ರ ಮೋದಿ ಜಪ!

*ಅಖಿಲೇಶ್‌ ವಿರುದ್ಧ ಯೋಗಿ, ಮೋದಿ ಬಲವಾಗಿ ನಿಂತಿದ್ದರಿಂದ ಗೆಲುವು
*ಸಾಹಿತ್ಯೋತ್ಸವದಲ್ಲಿ ‘ದಿ ರಿಪಬ್ಲಿಕ್‌ ಆಫ್‌ ಹಿಂದುತ್ವ’ ಕೃತಿಯ ಬಗ್ಗೆ ಚರ್ಚೆ

Jaipur Literature Festival Third day Republic of Hindutva session Narendra Modi mnj
Author
Bengaluru, First Published Mar 13, 2022, 10:12 AM IST

ಜೈಪುರ  (ಮಾ. 13): ‘ಉತ್ತರ ಪ್ರದೇಶದಲ್ಲಿ ಅಖಿಲೇಶ್‌ ಯಾದವ್‌ ವಿರುದ್ಧ ಮೋದಿ ಹಾಗೂ ಯೋಗಿ ಬಲವಾಗಿ ನಿಂತಿದ್ದರಿಂದಲೇ ಬಿಜೆಪಿ ಗೆಲ್ಲಲು ಸಾಧ್ಯವಾಯಿತು. ಮೋದಿಯವರ ರಾಜಕೀಯ ಮೌಲ್ಯಗಳಲ್ಲಿ ಜನರಿಗೆ ನಂಬಿಕೆ ಉಳಿದಿದೆ. ಈ ನಂಬಿಕೆಯೇ ಚುನಾವಣೆ ಗೆಲ್ಲುವ ಬಂಡವಾಳವಾಗಿದೆ’ ಎಂದು ಸಾಮಾಜಿಕ ಇತಿಹಾಸ ತಜ್ಞ, ಲೇಖಕ ಬದರಿನಾರಾಯಣ್‌ ಅಭಿಪ್ರಾಯಪಟ್ಟರು. ಜೈಪುರ ಸಾಹಿತ್ಯೋತ್ಸವದ 3ನೇ ದಿನವಾದ ಶನಿವಾರ ಬದರಿನಾರಾಯಣ್‌ ಬರೆದ ‘ದಿ ರಿಪಬ್ಲಿಕ್‌ ಆಫ್‌ ಹಿಂದುತ್ವ’ ಕೃತಿಯ ಬಗ್ಗೆ ಚರ್ಚೆ ನಡೆಯಿತು.

ಈ ವೇಳೆ ಮಾತನಾಡಿದ ಬದರಿನಾರರಾಯಣ್‌, ‘ಕಾಂಗ್ರೆಸ್‌ ಮತ್ತಿತರ ಪಕ್ಷಗಳು ಗದ್ದಲ ಎಬ್ಬಿಸಿ ರಾಜಕೀಯ ಧ್ರುವೀಕರಣದಲ್ಲಿ ತೊಡಗಿದ್ದರೆ, ಭಾರತೀಯ ಜನತಾ ಪಕ್ಷ, ಸದ್ದಿಲ್ಲದೇ ಅದನ್ನು ಮಾಡಿದೆ. ಜತೆಗೇ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ, ಅನ್ಯ ಕೋಮಿನ ಮಾಫಿಯಾದ ವಿರುದ್ಧ ರಕ್ಷಣೆ ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ. ಪ್ರಬಲ ಜಾತಿಗಳ ಶೋಷಣೆಯ ವಿರುದ್ಧ ನಿಲ್ಲುವುದಾಗಿ ಘೋಷಿಸಿದೆ. ಇವೆಲ್ಲವೂ ಬಿಜೆಪಿಯ ಗೆಲುವಿಗೆ ಕಾರಣವಾಗಿದೆ ಎನ್ನುವುದನ್ನು ನಾವು ಮರೆಯಬಾರದು’ ಎಂದರು.

ಇದನ್ನೂ ಓದಿ:  'ನಾನು ಈ ಕಾಲದ ಕವಿ, ಪಂಥ ಗೊತ್ತಿಲ್ಲ' ರಂಜಿತ್ ಹೊಸಕೋಟೆ ಸಂದರ್ಶನ

ಬದರಿನಾರಾಯಣ್‌ ಮಾತಿಗೆ ಉತ್ತರವಾಗಿ ಲೇಖಕ, ಟಿಎಂಸಿ ವಕ್ತಾರ ಪವನ್‌ ಕೆ ವರ್ಮಾ ಮಾತನಾಡಿ, ‘ಬಿಜೆಪಿಯ ಗೆಲುವಿಗೆ ಕಾರಣವಾದದ್ದು ರಾಜಕೀಯ ಹಿಂದುತ್ವ, ತೀವ್ರ ರಾಷ್ಟ್ರವಾದಿ ನಿಲುವು, ಫಲಾನುಭವಿ ರಾಜಕಾರಣ ಮತ್ತು ವಿರೋಧ ಪಕ್ಷಗಳು ಚುನಾವಣೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಲ್ಲಿ ಅನುಭವಿಸಿದ ಸೋಲು. ಜತೆಗೆ ಆರೆಸ್ಸೆಸ್‌ ಕೈಗೊಂಡ ಬೂತ್‌ ಮಟ್ಟದ ಕಾರ್ಯಗಳು ಪಕ್ಷವನ್ನು ಗೆಲುವಿನತ್ತ ಕೊಂಡೊಯ್ದವು. ಬಿಜೆಪಿ ಹತ್ತಿರ ಏನಿದೆ ಅಂತ ಕೇಳಿದರೆ ಆರೆಸ್ಸೆಸ್‌ ಇದೆ ಎನ್ನಬಹುದು. ಅದೇ ಬಿಜೆಪಿಯ ಬಹುದೊಡ್ಡ ಶಕ್ತಿ’ ಎಂದು ಹೇಳಿದರು.

‘ಆರೆಸ್ಸೆಸ್‌ ಪಕ್ಷಾತೀತವಾದ ಸಂಸ್ಥೆ. ಅದು ಸಂಕಷ್ಟದ ಸಂದರ್ಭಗಳಲ್ಲಿ ದೇಶದ ನೆರವಿಗೆ ಬಂದಿದೆ. ಚೀನಾ ಯುದ್ಧದ ಸಂದರ್ಭದಲ್ಲಿ ನೆಹರೂ ಕೂಡ ಆರೆಸ್ಸೆಸ್‌ ನೆರವು ಬಯಸಿದ್ದರು. ಇತಿಹಾಸದ ಪುಟಗಳನ್ನು ತಿರುಗಿಸಿದರೆ ಆರೆಸ್ಸೆಸ್‌ ಹಲವು ಸಂಕಷ್ಟದ ಸಂದರ್ಭಗಳಲ್ಲಿ ದೇಶದ ಐಕ್ಯತೆ ಮತ್ತು ಅಭಿವೃದ್ಧಿಗೆ ಕಾರಣವಾಗಿರುವುದನ್ನು ನೋಡಬಹುದು’ ಎಂದು ಬದರಿನಾರಾಯಣ್‌ ವಾದಿಸಿದರು.

‘ಆದರೆ ಆರೆಸ್ಸೆಸ್‌ ಮೊದಲಿನಂತಿಲ್ಲ. ಅದರ ಉಪಪಂಗಡಗಳು ಆರೆಸ್ಸೆಸ್ಸಿಗೆ ಮಾತ್ರವಲ್ಲ ಹಿಂದುತ್ವಕ್ಕೇ ವಿರೋಧವಾದ ಕೆಲಸ ಮಾಡುತ್ತಿವೆ. ಹಿಂದುತ್ವವನ್ನು ಉಳಿಸುವ ಹೆಸರಿನಲ್ಲಿ ಭಜರಂಗದಳದಂಥ ಸಂಘಟನೆಗಳು ಮಾಡುತ್ತಿರುವ ಹುಚ್ಚಾಟಗಳು ಹಿಂದುತ್ವಕ್ಕೆ ಮಾರಕವಾಗಿವೆ. ಹಿಂದುತ್ವ ಅಂದರೇನು ಎಂಬ ಕಲ್ಪನೆಯೇ ಅವರಲ್ಲಿ ಇಲ್ಲ. ಭಜರಂಗದಳದವರನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ, ಹಿಂದುತ್ವದ ಬಗ್ಗೆ ಅರ್ಧಪುಟ ಬರೆದರೆ ಮಾತ್ರ ಹೊರಗೆ ಬಿಡಲಾಗುವುದು ಎಂದರೆ ಒಬ್ಬರೂ ಹೊರಗೆ ಬರಲಾರರು, ಇಂಥ ಸಂಘಟನೆಗಳು ಹಿಂದುತ್ವದ ಪಾಲಿಗೆ ಭಸ್ಮಾಸುರನಂತಾಗಿವೆ’ ಎಂದು ಪವನ್‌ ವರ್ಮ ಹೇಳಿದರು.

ಇದನ್ನೂ ಓದಿ: ಪುಟ್ಟ ಬಾಲೆಯ ದೊಡ್ಡ ಮಾತು: ಜೈಪುರ ಸಾಹಿತ್ಯ ಉತ್ಸವ ಎರಡನೆಯ ದಿನದ ಸ್ವಾರಸ್ಯಗಳು

‘ಈ ಸಂಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವು ಗೌಣವಾದ ಸಂಗತಿಗಳು. ಅಲ್ಲೊಂದು ಇಲ್ಲೊಂದು ನಡೆಯುವ ಘಟನೆಗಳನ್ನು ಪಕ್ಷಕ್ಕೆ ಆರೋಪಿಸುವಂತಿಲ್ಲ’ ಎಂದು ಬದರಿನಾರಾಯಣ್‌ ಹೇಳಿದರೆ, ‘ಈಗೀಗ ಗೌಣವಾದ ಸಂಘಟನೆಗಳೇ ಪ್ರಧಾನ ಸಂಘಟನೆಗಳಂತೆ ವರ್ತಿಸುತ್ತಿವೆ. ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್‌ ಗದ್ದಲದಂಥ ಪ್ರಕರಣಗಳೇ ಅದಕ್ಕೆ ಸಾಕ್ಷಿ. ಇಂಥ ಸಂಘಟನೆಗಳ ಬಗ್ಗೆ ಆರೆಸ್ಸೆಸ್‌ಗೆ ಒಲವಿಲ್ಲ. ಆದರೆ ಅವುಗಳನ್ನು ನಿಭಾಯಿಸುವ ಶಕ್ತಿಯೂ ಆರೆಸ್ಸೆಸ್‌ಗೆ ಇಲ್ಲ’ ಎಂದು ಪವನ್‌ ವರ್ಮ ಹೇಳಿದರು.

ಅದನ್ನು ಅನುಮೋದಿಸಿದ ಬದರಿನಾರಾಯಣ್‌, ‘ಆರೆಸ್ಸೆಸ್‌ ಒಳಗಡೆಯ ಈಗ ಸೈದ್ಧಾಂತಿಕ ಸಂಘರ್ಷವಿದೆ’ ಎಂದರು. ಆರೆಸ್ಸೆಸ್‌ ತತ್ವಗಳನ್ನೇ ಇಟ್ಟುಕೊಂಡು ಇಂಥ ಸಂಸ್ಥೆಗಳು ನಡೆಸುತ್ತಿರುವ ಕೆಲಸಗಳು ಆರೆಸ್ಸೆಸ್‌ಗೆ ಶೋಭೆ ತರುವಂಥದ್ದಲ್ಲ’ ಎಂಬ ಒಮ್ಮತದ ಅಭಿಪ್ರಾಯ ಗೋಷ್ಠಿಯ ಕೊನೆಗೆ ಮೂಡಿ ಬಂತು. ಪತ್ರಕರ್ತ ಸಂದೀಪ್‌ ಉನ್ನಿತ್ತಾನ್‌ ಸಂವಾದ ನಿರ್ವಹಿಸಿದರು.

 

 

Follow Us:
Download App:
  • android
  • ios