Asianet Suvarna News Asianet Suvarna News

Jaipur Literature Festival : 'ನಾನು ಈ ಕಾಲದ ಕವಿ, ಪಂಥ ಗೊತ್ತಿಲ್ಲ' ರಂಜಿತ್ ಹೊಸಕೋಟೆ ಸಂದರ್ಶನ

* ಜೈಪುರ ಸಾಹಿತ್ಯ ಉತ್ಸವ
* ರಂಜಿತ್ ಹೊಸ್ಕೋಟೆ ಜತೆ ನಾಲ್ಕು ಮಾತು
* ಕವಿತೆ ಪ್ರತಿಯೊಂದು ವಿಚಾರವನ್ನು ಟಚ್ ಮಾಡಬಲ್ಲದು 

Jaipur Literature Festival Indian Poet Ranjit Hoskote Interview by Jogi mah
Author
Bengaluru, First Published Mar 11, 2022, 9:22 PM IST

* ಜೋಗಿ 

ಇದು ಬಹುಭಾಷೆಗಳ ಕಾಲ..
 
ಜೈಪುರ ಸಾಹಿತ್ಯೋತ್ಸವದಲ್ಲಿ(Jaipur Literature Festival)  ಕಾವ್ಯಕ್ಕಾಗಿ ನೀಡುವ ಮಹಾಕವಿ ಕನ್ನಯ್ಯಲಾಲ್ ಸೇಥಿಯಾ ಪ್ರಶಸ್ತಿ ಪುರಸ್ಕೃತರಾದ ರಂಜಿತ್ ಹೊಸ್ಕೋಟೆ (Ranjit Hoskote) ಜತೆ ನಾಲ್ಕು ಮಾತು.
 
 ನಮಸ್ಕಾರ, ನಿಮಗೂ ಹೊಸಕೋಟೆಗೂ ಸಂಬಂಧವಿದೆಯೇ?
-ಖಂಡಿತಾ ಇಲ್ಲ, ನಾನು ಬೆಂಗಳೂರು ಸಮೀಪದ ಹೊಸಕೋಟೆಯವನಲ್ಲ. ಹೊಸಕೋಟೆ ಅನ್ನೋದು ನನ್ನ ಮನೆತನದ ಹೆಸರು. ನಾನು ಮುಂಬಯಿಯವನು.
 
ಕವಿತೆಯನ್ನು ನಿಮ್ಮ ಪ್ರಮುಖ ಮಾಧ್ಯಮ ಮಾಡಿಕೊಂಡಿದ್ದೀರಿ. ಯಾಕೆ?
-ಕವಿತೆಯ ಮೂಲಕ ನಾನು ಹೇಳಬೇಕಾದ್ದನ್ನು ಹೇಳಬಲ್ಲೆ ಅನ್ನಿಸುತ್ತದೆ. ನನಗೆ ಹಲವು ಮಾಧ್ಯಮಗಳಲ್ಲಿ ಆಸಕ್ತಿಯಿದೆ. ನಾಟಕ ಬರೆದಿದ್ದೇನೆ, ನಾನ್ ಫಿಕ್ಷನ್ ಬರೆದಿದ್ದೇನೆ. ಕವಿತೆಯನ್ನು ಪ್ರಧಾನವಾಗಿ ಬರೆದಿದ್ದೇನೆ. ಕಾರಣ ಇಷ್ಟೇ, ಕವಿತೆಯ ಮೂಲಕ ನಾನು ನನ್ನ ಕಾಲದ ತಲ್ಲಣಗಳಿಗೆ, ನನ್ನ ಗೊಂದಲಗಳಿಗೆ ಹೆಚ್ಚು ಸಮರ್ಥವಾಗಿ ಪ್ರತಿಕ್ರಿಯಿಸಬಲ್ಲೆ ಅಂತ ನನಗೆ ಅನ್ನಿಸಿದೆ.
 
ಕವಿತೆಗಿದು ಕೆಟ್ಟ ಕಾಲ ಅನ್ನಿಸುತ್ತಿಲ್ಲವೇ?
-ಯಾಕೆ ಅನ್ನಿಸಬೇಕು? ಓದುಗರಿಲ್ಲ ಅನ್ನುವ ಕಾರಣಕ್ಕೇ?
 
ಬರೆದದ್ದು ತಲುಪುತ್ತಿಲ್ಲ ಅನ್ನುವ ಕಾರಣಕ್ಕೆ.
-ಹಾಗೇನಿಲ್ಲ. ಕವಿತೆಯನ್ನು ಎಷ್ಟು ಮಂದಿ ಓದಿದರು ಅನ್ನುವುದಕ್ಕಿಂತ ಎಷ್ಟು ತೀವ್ರವಾಗಿ ಓದುತ್ತಾರೆ ಅನ್ನುವುದು ಮುಖ್ಯ. ನನ್ನ ಕವಿತೆಗಳನ್ನು ಕೇವಲ  ನನ್ನ ಭಾಷೆಯ ಮಂದಿ ಮಾತ್ರವಲ್ಲ. ದಕ್ಷಿಣ ಏಷ್ಯಾದ ಅನೇಕರು ಅವರವರ ಭಾಷೆಯಲ್ಲಿ ಓದುತ್ತಾರೆ. ಇಂಗ್ಲಿಷಿನಲ್ಲಿ ಓದುತ್ತಾರೆ.

ನೀನಾ ಗುಪ್ತಾ ಹೇಳಿದ ಒಂಬತ್ತು ಕತೆಗಳು
 
ಇಂಥ ಸಾಹಿತ್ಯ ಜಾತ್ರೆಗಳು ಇಂಗ್ಲಿಷ್‌ಮಯ ಆಗಿರುತ್ತವೆ. ಇಲ್ಲಿ ಪ್ರಾದೇಶಿಕ ಭಾಷೆಗಳ ಕವಿಗೆ ಜಾಗವೇ ಇಲ್ಲ ಅಲ್ಲವೇ? ಇಂಗ್ಲಿಷಿನಲ್ಲಿ ಬರೆದರೆ ಮಾತ್ರ ಸಲ್ಲುವ ಕಾಲ ಇದು ಅಂತ ಹೇಳಬಹುದೇ?
-ನನಗೆ ಹಾಗನ್ನಿಸುತ್ತಿಲ್ಲ. ನಾವು ಭಾಷೆಯ ಬಗ್ಗೆ ಮಾತಾಡುವ ಕಾಲವನ್ನು ಮೀರಿದ್ದೇವೆ. ಆ ಭಾಷೆ ಈ ಭಾಷೆ ಅಂತ ಇಲ್ಲವೇ ಇಲ್ಲ. ಇದು ಬಹುಭಾಷೆಗಳ ಕಾಲ. ಕವಿಯ ಮಾತೃಭಾಷೆ ಒಂದಿರಬಹುದು, ಕವಿ ಬರೆಯುವ ಭಾಷೆ ಬೇರೆಯೇ ಇರಬಹುದು. ಒಮ್ಮೆ ಜಯಂತ ಕಾಯ್ಕಿಣಿ ಮಾತಾಡುತ್ತಾ ಕನ್ನಡ ಮೂವರು ಪ್ರಮುಖ ಲೇಖಕರ ಭಾಷೆ ಕನ್ನಡ ಅಲ್ಲ ಅಂದಿದ್ದರು. ನನಗೆ ಅದು ಅಚ್ಚರಿಯ ಸಂಗತಿಯಾಗಿತ್ತು. ಕವಿಯ ಭಾಷೆ ಯಾವುದಾದರೇನು, ಅವನು ಬರೆಯುವ ಭಾಷೆಯ ಲೇಖಕನಾಗುತ್ತಾನೆ ಅವನು.
 
ಕವಿ ಬರೆದು ಬದುಕಲು ಸಾಧ್ಯವೇ?
-ಖಂಡಿತಾ ಇಲ್ಲ. ಹೊಟ್ಟೆಪಾಡಿಗೆ ಬೇರೆ ಉದ್ಯೋಗ ಮಾಡಲೇಬೇಕು. ಯಾವ ಭಾಷೆಯಲ್ಲಿ ಬರೆದರೂ ಇದೇ ಅವಸ್ಥೆ.
 
ಕ್ರಮೇಣ ಇಂಗ್ಲಿಷ್ ಭಾಷೆ ಪ್ರಾದೇಶಿಕ ಭಾಷೆಗಳನ್ನು ನುಂಗಿಹಾಕುತ್ತಿದೆ ಅನ್ನುವುದನ್ನು ಒಪ್ಪುತ್ತೀರಾ?
-ಇಂಗ್ಲಿಷಿಗೆ ನಾವೇಕೆ ಹೆದರುತ್ತೇವೋ ಗೊತ್ತಿಲ್ಲ. ಇಂಗ್ಲಿಷ್ ಭಾರತೀಯ ಭಾಷೆಗಳ ಶತ್ರು ಅಲ್ಲ. ಹಿಂದಿ ಬದಲು, ಕನ್ನಡದ ಬದಲು, ಮರಾಠಿಯ ಬದಲು ಇಂಗ್ಲಿಷ್ ಅಲ್ಲ. ಈ ಎಲ್ಲಾ ಭಾಷೆಗಳ ಜತೆ ಇಂಗ್ಲಿಷ್ ಅಂತ ನೋಡಬೇಕು.
 
ಇವತ್ತು ಕಾವ್ಯದ ಸ್ಥಾನವೆಲ್ಲಿದೆ?
ಕವಿತೆಗೆ ಅದರದ್ದೇ ಆದ ಸ್ಥಾನವಿದೆ. ಅದು ಬೇರೆ ಪ್ರಕಾರಗಳಷ್ಟು ವ್ಯಾಪಕವಾಗಿಲ್ಲ. ಆದರೆ ಬಾಂಗ್ಲಾ, ಮರಾಠಿ, ಗುಜರಾತಿ, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಕಾವ್ಯಕ್ಕೆ ಉನ್ನತವಾದ ಸ್ಥಾನವೇ ಇದೆ. ಈ ಭಾಷೆಗಳಲ್ಲಿ ಕವಿಗಳು ಬರುತ್ತಲೇ ಇದ್ದಾರೆ.
 
ನಿಮ್ಮದು ಯಾವ ಥರದ ಕಾವ್ಯ?
ನಾನು ಯಾವುದೋ ಕಾಲಕ್ಕೋ ಪಂಥಕ್ಕೋ ಸೇರಿದನಲ್ಲ. ನಾನು ಈ ಕಾಲದ ಕವಿ. ನನ್ನದೇ ಆದ ಶೈಲಿಯಲ್ಲಿ ಬರೆಯುತ್ತೇನೆ ಅಂತ ಹೇಳಬಹುದು. ಅದಕ್ಕೊಂದು ವಿಶೇಷವಾದ ಹೆಸರು ಕೊಡುವುದಕ್ಕೂ ನನಗಿಷ್ಟವಿಲ್ಲ.
 
ಹೊಸ ಹುಡುಗರು ಕಾವ್ಯದತ್ತ ಆಕರ್ಷಿತರಾಗುತ್ತಿದ್ದಾರೆಯೇ?
-ಅದನ್ನು ಹೇಳಲಿಕ್ಕಾಗದು. ಕವಿತೆಯ ಮೇಲಿನ ಆಸಕ್ತಿ, ಪ್ರೀತಿ ತಾನಾಗಿಯೇ ಹುಟ್ಟಬೇಕು. ಯಾರನ್ನೂ ಕವಿತೆ ಓದು ಅಂತ ಪುಸಲಾಯಿಸಲಿಕ್ಕೆ ಸಾಧ್ಯವಿಲ್ಲ. ಬೇರೆ ಬೇರೆ ಆನ್‌ಲೈನ್ ಮಾಧ್ಯಮಗಳಲ್ಲಿ ಅನೇಕರು ಬರೆಯುತ್ತಿದ್ದಾರೆ. ನಾನು ಆಶಾವಾದಿಯಾಗಿದ್ದೇನೆ.
 
ಭಾರತೀಯ ಭಾಷೆಗಳ ನಡುವೆ ಕೊಡುಕೊಳುವಿಕೆ ಇನ್ನೂ ಹೆಚ್ಚಾಗಬೇಕಲ್ಲವೇ?
-ಇದು ಮುಖ್ಯವಾಗಿ ಆಗಬೇಕಾದ ಕೆಲಸ. ಸಾಹಿತ್ಯ ಅಕಾಡೆಮಿ ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ. ಅದು ಮತ್ತಷ್ಟು ವ್ಯಾಪಕವಾಗಿ ಆಗಬೇಕು.

 

Follow Us:
Download App:
  • android
  • ios