ಪುಟ್ಟ ಬಾಲೆಯ ದೊಡ್ಡ ಮಾತು: ಜೈಪುರ ಸಾಹಿತ್ಯ ಉತ್ಸವ ಎರಡನೆಯ ದಿನದ ಸ್ವಾರಸ್ಯಗಳು
ಜೈಪುರ ಸಾಹಿತ್ಯೋತ್ಸವ ಸಕ್ರಿಯವಾಗಿ ನಡೆಯುತ್ತಿದ್ದು, ವಿವಿಧ ಗೋಷ್ಠಿ, ಚರ್ಚೆಗಳು ನಡೆಯುತ್ತಿವೆ. ಮೊದಲು ಬಾಲಿವುಡ್ ನಟ ಮನೋಜ್ ಭಾಜಪೈ ಪಾಲ್ಗೊಂಡಿದ್ದ ಗೋಷ್ಠಿ ನಡೆದರೆ, ಮತ್ತೊಂದು ಗೋಷ್ಠಿಯಲ್ಲಿ ಸಾಗರಿಕಾ ಘೋಷ್ ಪಾಲ್ಗೊಂಡಿದ್ದರು. ಅಲ್ಲಿ ಏನು ಚರ್ಚೆಯಾಯಿತು.
ಜೋಗಿ
ಜೈಪುರ (ಮಾ.11): ಇಲ್ಲಿ 15ನೇ ಆವೃತ್ತಿಯ ಸಾಹಿತ್ಯೋತ್ಸವ ನಡೆಯುತ್ತಿದ್ದು, ವಿವಿಧ ವಿಚಾರಗಳ ಮೇಲೆ ಚರ್ಚೆ, ಗೋಷ್ಠಿಗಳು ನಡೆಯುತ್ತಿವೆ. ಇಂದು ನಡೆದ ವಿಚಾರ ಗೊಷ್ಠಿಯಲ್ಲಿ ಬಾಲಿವುಡ್ ನಟ ಮನೋಜ್ ಭಾಜಪೈ ಕೆಲವು ಆಸಕ್ತಿಕರ ವಿಚಾರಣಗಳನ್ನು ತಿಳಿಸಿದರು. ಒಟ್ಟಾರಿ ಈ ದಿನದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳ ಝಲಕ್ ಇಲ್ಲಿದೆ.
ರಾಜಕಾರಣಕ್ಕೆ ಬರೋಲ್ಲ
ಮನೋಜ್ ಭಾಜಪೈ ಮಾತು ಮುಗಿಸುತ್ತಿದ್ದಂತೆ, ನೆರೆದಿದ್ದ ಸಾಹಿತ್ಯಾಸಕ್ತರೆಲ್ಲ ಡೈಲಾಗ್ ಹೇಳಿ ಅಂತ ಕೂಗಿದರು. ರಾಜನೀತಿ ಚಿತ್ರದ ಒಂದು ಡೈಲಾಗ್ ಹೇಳುವ ಮುನ್ನ ಅವರು, ಆ ಡೈಲಾಗ್ ಹೇಳುವುದಕ್ಕೆ ಎಷ್ಟೆಲ್ಲ ಕಷ್ಟ ಪಟ್ಟಿರುತ್ತೇವೆ, ಅದನ್ನು ಬರೆಯುವವರು ಎಷ್ಟು ಶ್ರಮಪಟ್ಟಿದ್ದಾರೆ ಅನ್ನುವುದನ್ನೆಲ್ಲ ವಿವರಿಸಿದರು. ಅದೇ ಚಿತ್ರದ ಹೆಸರಿಟ್ಟುಕೊಂಡು ಶ್ರೋತೃಗಳಲ್ಲಿ ಒಬ್ಬರು ನೀವು ರಾಜಕೀಯ ಸೇರುತ್ತೀರಾ ಎಂದು ಕೇಳಿದರು. ರಾಜಕಾರಣಿಯ ಪಾತ್ರ ಕೊಟ್ಟರೆ ಚೆನ್ನಾಗಿ ನಟಿಸುತ್ತೇನೆ, ಆದರೆ ರಾಜಕಾರಣಕ್ಕೆ ಬರುವುದಿಲ್ಲ ಅಂತ ಒಂದೇ ಮಾತಿನಲ್ಲಿ ಮನೋಜ್ ಉತ್ತರಿಸಿದರು.
ಸಾಗರಿಕಾ ಘೋಷ್
'ಅಟಲ್ ಬಿಹಾರಿ ವಾಜಪೇಯಿ' ಕುರಿತು ಪುಸ್ತಕ ಬರೆದ ಸಾಗರಿಕಾ ಘೋಷ್ ಅವರ ಜೀವನದ ಸ್ವಾರಸ್ಯಕರ ಘಟನೆಗಳನ್ನು ತೆರೆದಿಟ್ಟರು. ಒಮ್ಮೆ ಯಾರೋ ವಾಜಪೇಯಿಯವರನ್ನು ನೀವೇಕೆ ಚಿಕನ್ ತಿನ್ನೋದಿಲ್ಲ ಅಂತ ಕೇಳಿದರಂತೆ. ಅದಕ್ಕೆ ಉತ್ತರವಾಗಿ ವಾಜಪೇಯಿ ದೀನದಯಾಳ್ ಉಪಾಧ್ಯಾಯ ಒಮ್ಮೆ ನನ್ನ ಕನಸಲ್ಲಿ ಬಂದು ಚಿಕನ್ ತಿನ್ನಬೇಡ, ಅಂತ ಹೇಳಿದ್ದರು. ಹೀಗಾಗಿ ನಾನು ಚಿಕನ್ ತಿನ್ನೋದಿಲ್ಲ ಎಂದರಂತೆ. ಪ್ರಶ್ನೆ ಕೇಳಿದವರು ಅಚ್ಚರಿಯಿಂದ, ಕೇವಲ ಅಷ್ಟನ್ನು ಹೇಳುವುದಕ್ಕೆ ದೀನದಯಾಳ್ ಬಂದಿದ್ದರೆ? ಎಂದು ಕೇಳಿದಾಗ ವಾಜಪೇಯಿ, ಹೌದು ಮತ್ತೆ. ಅದು ತುಂಬ ಗಂಭೀರವಾದ ವಿಚಾರವಲ್ಲವೇ ಎಂದು ಕೇಳಿದ್ದರಂತೆ.
ಹೀಗೆ ವಾಜಪೇಯಿಯವರ ಹಲವು ವಿಭಿನ್ನ ವ್ಯಕ್ತಿತ್ವಗಳನ್ನು ಸಾಗರಿಕಾ ಘೋಷ್ ತಮ್ಮ ಎಂದಿನ ಅಸ್ಖಲಿತ ಮಾತುಗಳಲ್ಲಿ ವಿವರಿಸುತ್ತಾ ಹೋದರು. ವಾಜಪೇಯಿಯವರಿಗೂ ಆಡ್ವಾಣಿಗೂ ಅತ್ಯಂತ ಹತ್ತಿರದ ಸ್ನೇಹವಿತ್ತು. ಆದರೆ ವಾಜಪೇಯಿ ಆತ್ಮಕತೆಯಲ್ಲಿ ಆಡ್ವಾಣಿಯವರ ಹೆಸರೇ ಇಲ್ಲ ಎಂಬ ಕುತೂಹಲಕಾರಿ ಸಂಗತಿಯನ್ನೂ ಸಾಗರಿಕಾ ಹಂಚಿಕೊಂಡರು.
ಆಸ್ಥಾ ಗೋಸ್ವಾಮಿ ಹಾಡುಹಬ್ಬ
ಹಿಂದುಸ್ತಾನಿ ಗಾಯಕಿ ಆಸ್ಥಾ ಗೋಸ್ವಾಮಿ ಗಾಯನ ಎರಡನೆಯ ದಿನಕ್ಕೆ ಅತ್ಯುತ್ತಮ ಆರಂಭ ಒದಗಿಸಿತು. ಸಮಯ ಮೀರುತ್ತಿದೆ ಎಂದು ಆಯೋಜಕರು ಕಂಗಾಲಾಗಿ ಅವರನ್ನು ತಡೆಯುವ ಯತ್ನ ಮಾಡಿದರೂ, ಗಾಯಕಿ ಛಲ ಬಿಡದೇ ಮೂರನೇ ಹಾಡನ್ನೂ ಹಾಡಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾದರು. ಸೊಗಸಾಗಿ ಹಿಂದಿ ಮಾತಾಡುವ ಗಾಯಕಿ ಆಸ್ಥಾ, ಅತ್ಯುತ್ತಮವಾದ ಮಾರ್ನಿಂಗ್ ರಾಗ ಮತ್ತು ಹೋಳಿಯ ಹುರುಪು ಇರುವ ಹಾಡುಗಳನ್ನು ಹಾಡುತ್ತಿದ್ದರೆ, ಪ್ರೇಕ್ಷಕರು ಸಮಯದ ಪರಿವೆ ಮರೆತು ಕೇಳುತ್ತಿದ್ದರು. ಹೀಗಾಗಿ ನಿಗದಿತ ಸಮಯಕ್ಕಿಂತ ಕೊಂಚ ದೀರ್ಘವಾಗಿಯೇ ಹಾಡುವುದಕ್ಕೆ ಅವಕಾಶ ಕಲ್ಪಿಸಿಕೊಂಡು ಅದಕ್ಕೆ ಪ್ರೇಕ್ಷಕರ ಬೆಂಬಲವನ್ನೂ ಆಸ್ಥಾ ಗಳಿಸಿಕೊಂಡರು.
ಸಾವರ್ಕರ್ ಮತ್ತು ಹಿಂದುತ್ವ
ಸಾವರ್ಕರ್ ಕುರಿತು ಮಾತಾಡುವುದಕ್ಕೆ ಕರ್ನಾಟಕದ ವಿಕ್ರಮ್ ಸಂಪತ್ ಬಂದಿರಲಿಲ್ಲ. ಹೀಗಾಗಿ ಮಕರಂದ ಪರಾಂಜಪೆ ಆ ಜಾಗಕ್ಕೆ ಬಂದರು. ಭಾರತೀಯರು ಓದುವುದನ್ನು ನಿಲ್ಲಿಸಿದ್ದಾರೆ. ಟ್ರೋಲ್ ಮಾಡುವುದನ್ನು ಕಲಿತಿದ್ದಾರೆ. ಎಲ್ಲ ಗೊಂದಲಗಳಿಗೂ ಅದೇ ಮೂಲ. ಮೊದಲು ಓದುವುದನ್ನು ಕಲಿತುಕೊಳ್ಳಿ. ಸಾವರ್ಕರ್ ಹಿಂದುತ್ವವಾದಿ ಅಂತ ಹೇಳುವ ಮೊದಲು ಅವರನ್ನು ಪೂರ್ತಿಯಾಗಿ ಓದಿ. ನಾನು ಗಾಂಧೀಜಿ ಬರೆದುದನ್ನು ಅಕ್ಷರ ಅಕ್ಷರ ಓದಿದ್ದೇನೆ. ಗಾಂಧೀಜಿಗೆ ತಮ್ಮ ಅಹಿಂಸಾ ಚಳವಳಿಯ ಮೇಲೆ ನಂಬಿಕೆ ಹೊರಟು ಹೋಗಿತ್ತು. ಅದು ಸೋತಿದೆ ಅಂತ ಅವರು ಭಾವಿಸಿದ್ದರು. ಕಾಶ್ಮೀರಕ್ಕೆ ಸೇನೆ ನುಗ್ಗಿಸಿ ಅಂತ ಅವರೇ ನೆಹರೂಗೆ ಹೇಳಿದ್ದರು. ಭಾರತ ನಿಶ್ಯಸ್ತ್ರೀಕರಣ ಘೋಷಿಸಬೇಕಾದರೆ ಜಗತ್ತು ಕೂಡ ನಿಶ್ಯಸ್ತ್ರೀಕರಣಗೊಳ್ಳಬೇಕು. ಇಲ್ಲದೇ ಹೋದರೆ ಭಾರತಕ್ಕೆ ತೊಂದರೆ ತಪ್ಪಿದ್ದಲ್ಲ ಎಂದು ಉಗ್ರವಾಗಿ ಮಾತಾಡಿ ಅವರು ಪ್ರೇಕ್ಷಕರ ಚಪ್ಪಾಳೆಗೆ ಪಾತ್ರರಾದರು. ಕೊನೆಯಲ್ಲಿ ಪುಟ್ಟ ಹುಡುಗಿಯೊಬ್ಬಳು ಈಗೀಗ ಸಾವರ್ಕರ್ ನಿಮ್ಮವರು, ಗಾಂಧಿ ನಮ್ಮವರು ಎಂದು ಬೇದ ಎಣಿಸುವುದನ್ನು ಕಲಿಸಲಾಗುತ್ತೆ. ನಮಗೆ ಎಲ್ಲರೂ ಬೇಕು ಅಂತ ಹೇಳಿ ಹೊಸ ಹುಡುಗರ ಮನಸ್ಸಿನ ಆಲೋಚನೆಯನ್ನು ಬಿಚ್ಚಿಟ್ಟಳು.