Asianet Suvarna News Asianet Suvarna News

ರಾಷ್ಟ್ರಪತಿ ಭವನದಲ್ಲಿ ಕಾಣಿಸಿಕೊಂಡ ಪ್ರಾಣಿ ಕಾಡುಪ್ರಾಣಿನಾ? ಸ್ಪಷ್ಟನೆ ನೀಡಿದ ಡೆಲ್ಲಿ ಪೊಲೀಸರು

ಎರಡು ದಿನಗಳ ಹಿಂದೆ ಜೂನ್ 9 ರಂದು ಪ್ರಧಾನಿ ಮೋದಿ ಹಾಗೂ ಸಂಪುಟದ 72 ಸದಸ್ಯರು ಪ್ರಮಾಣವಚನ ಸ್ವೀಕರಿಸುವ ವೇಳೆ ರಾಷ್ಟ್ರಪತಿ ಭವನದದಲ್ಲಿ ನಿಗೂಢವಾದ ಪ್ರಾಣಿಯೊಂದು ಹಾದು ಹೋದ ದೃಶ್ಯಾವಳಿಗಳು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆ ಆಗಿತ್ತು.

It was not a wild animal, it was a cat that appeared during the oath taking ceremony at Rashtrapati bhavan akb
Author
First Published Jun 11, 2024, 3:55 PM IST

ನವದೆಹಲಿ: ಎರಡು ದಿನಗಳ ಹಿಂದೆ ಜೂನ್ 9 ರಂದು ಪ್ರಧಾನಿ ಮೋದಿ ಹಾಗೂ ಸಂಪುಟದ 72 ಸದಸ್ಯರು ಪ್ರಮಾಣವಚನ ಸ್ವೀಕರಿಸುವ ವೇಳೆ ರಾಷ್ಟ್ರಪತಿ ಭವನದದಲ್ಲಿ ನಿಗೂಢವಾದ ಪ್ರಾಣಿಯೊಂದು ಹಾದು ಹೋದ ದೃಶ್ಯಾವಳಿಗಳು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಅದೊಂದು ಕಾಡುಪ್ರಾಣಿ ಎಂಬಂತೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಆದರೆ ಅದು ನಿಜವಲ್ಲ, ಕ್ಯಾಮರಾದಲ್ಲಿ ಸೆರೆಯಾದ ಪ್ರಾಣಿ ಮಾಮೂಲಿ ಮನೆಗಳಲ್ಲಿ ವಾಸ ಮಾಡುವಂತಹ ಬೆಕ್ಕು ಎಂದು ದೆಹಲಿ ಪೊಲೀಸರು ಟ್ವಿಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ದೆಹಲಿ ಪೊಲೀಸರ ಅಧಿಕೃತ ಖಾತೆಯಿಂದ ಟ್ವಿಟ್ ಮಾಡಲಾಗಿದೆ. ಕೆಲವು ಟಿವಿ ಚಾನೆಲ್‌ಗಳು ಹಾಗೂ ಸೋಶಿಯಲ್ ಮೀಡಿಯಾ ಚಾನೆಲ್‌ಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಹಾಗೂ ಸಚಿವರ ಪ್ರಮಾಣ ವಚನ ಸ್ವೀಕರಿಸುವ ವೇಳೆ ನಿಗೂಢವಾದ ಪ್ರಾಣಿಯೊಂದು ಕಾಣಿಸಿಕೊಂಡಿದೆ ಅದು ಕಾಡು ಪ್ರಾಣಿ ಚಿರತೆ ಅಥವಾ ಸಿಂಹ ಆಗಿರಬೇಕು ಎಂದೆಲ್ಲಾ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ವಿಚಾರಗಳು ಸತ್ಯವಲ್ಲ,  ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾದ ಪ್ರಾಣಿ ಸಾಮಾನ್ಯವಾದ ಒಂದು ಬೆಕ್ಕು. ಇಂತಹ ಸುಳ್ಳು ಸತ್ಯಕ್ಕೆ ದೂರವಾದ ವರದಿಗಳನ್ನು ನಂಬಬೇಡಿ ಎಂದು ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.

ಮೊನ್ನೆ ಏನಾಗಿತ್ತು?

ಜೂನ್ 9 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಸೇರಿದಂತೆ 72 ಸಚಿವರ ಪ್ರಮಾಣ ವಚನ ಸಮಾರಂಭವಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಅಧ್ಯಕ್ಷರು, ವಿದೇಶಿ ಗಣ್ಯರು, ಬಾಲಿವುಡ್ ನಟನಟಿಯರು ಉದ್ಯಮಿಗಳು ಸೇರಿದಂತೆ 8 ಸಾವಿರಕ್ಕೂ ಅಧಿಕ ಗಣ್ಯರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 72 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.  ಆದರೆ ಇದೇ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಬೇತುಲ್‌ನ ಬಿಜೆಪಿ ಸಂಸದ ದುರ್ಗಾದಾಸ್ ಯುಕಿ ಅಲಿಯಾಸ್ ಡಿಡಿ ಯುಕಿ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಕುರ್ಚಿಯಲ್ಲಿ ಕುಳಿತು ಸಹಿ ಹಾಕುವ ವೇಳೆ ಅವರ ಹಿಂಭಾಗದಲ್ಲಿ ರಾಷ್ಟ್ರಪತಿ ಭವನದ ಕಾರಿಡಾರ್‌ನಲ್ಲಿ ನಾಲ್ಕು ಕಾಲಿನ ಪ್ರಾಣಿಯೊಂದು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿರುವ ದೃಶ್ಯ ಮಾಧ್ಯಮ ಕ್ಯಾಮರಾಗಳಲ್ಲಿ ಸೆರೆ ಆಗಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಮೋದಿ ಕ್ಯಾಬಿನೆಟ್‌ನಲ್ಲಿ ಬಿಜೆಪಿಗೆ 60, ಮಿತ್ರರಿಗೆ ಕೇವಲ 11: ಮೋದಿ ಸಂಪುಟ ಸೇರಲು ಎನ್‌ಸಿಪಿ ನಕಾರ

ವೀಡಿಯೋ ನೋಡಿದ ಅನೇಕರು ಈ ಪ್ರಾಣಿಯನ್ನು ಒಂದೊಂದು ರೀತಿಯಲ್ಲಿ ಬಣ್ಣಿಸಿದ್ದರು. ಕೆಲವರು ಇದನ್ನು ಬೆಕ್ಕು ಎಂದರೆ, ಮತ್ತೆ ಕೆಲವರು ನಾಯಿ ಎಂದು ಹೇಳಿದ್ದಾರೆ. ಆದರೆ  ಇನ್ನು ಕೆಲವರು ಇದು ಸಿಂಹ, ಚಿರತೆಯಂತೆ ಎಂದೆಲ್ಲಾ ಬಣ್ಣಿಸಿದ್ದಾರೆ. ಮತ್ತೆ ಕೆಲವರು ಇದು ಎಡಿಟೆಡ್ ವೀಡಿಯೋ ಆಗಿರಬಹುದೇ ಎಂದು ಅನುಮಾನ ಪಟ್ಟಿದ್ದರು. ಕೆಲವರು ಇದರ ಬಾಲ ಉದ್ದವಾಗಿ ಕಾಣಿಸ್ತಿರೋದ್ರಿಂದ ಅದನ್ನು ಚಿರತೆ ಎಂದು ಬಣ್ಣಿಸಿದ್ದರು. ಆದರೆ ಇದು ಬೆಕ್ಕು ಎಂಬುದು ಈಗ ಸ್ಪಷ್ಟವಾಗಿದೆ. 

ದುರ್ಗಾದಾಸ್ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ರಾಷ್ಟ್ರಪತಿ ಭವನದಲ್ಲಿ ಹಾದು ಹೋದ ನಿಗೂಢ ಪ್ರಾಣಿ: ವೀಡಿಯೋ ವೈರಲ್

 

 

Latest Videos
Follow Us:
Download App:
  • android
  • ios