Asianet Suvarna News Asianet Suvarna News

ಮೋದಿ ಮಾದರಿಯಲ್ಲೇ ರಾಯಚೂರು ಅಭಿವೃದ್ಧಿ: ಸಂಸದ ರಾಜಾ ಅಮರೇಶ್ವರ ನಾಯಕ

ಕ್ಷೇತ್ರಕ್ಕೆ ಶಾಶ್ವತ ಕೊಡುಗೆ ನೀಡುವ ಅಭಿಲಾಷೆ| ಶಿಕ್ಷಣ, ಕೈಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿ| ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳ ವೇಗ ಹೆಚ್ಚಳಕ್ಕೆ ಅಗತ್ಯ ಕ್ರಮ|ರೈಲು ನಿಲ್ದಾಣದ ಸ್ವಚ್ಛತೆ, ರಾಯಚೂರು ನಿಲ್ದಾಣದಲ್ಲಿ ಎಸ್ಕಲೇಟರ್‌ ಅಳವಡಿಕೆಗೆ ಕ್ರಮ| ಗದಗ-ವಾಡಿ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಇನ್ನಷ್ಟು ಚುರುಕುಗೊಳಿಸುವುದು|

Interview with Raichur MP Raja Amareshwara Naik on PM Narendra Modi govt 2 completing year
Author
Bengaluru, First Published Jun 1, 2020, 12:30 PM IST

ರಾಯಚೂರು: ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನೊಳಗೊಂಡ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿ ಒಂದು ವರ್ಷ ಮಾಡಿದ ಕೆಲಸ ಕಾರ್ಯಕ್ರಮಗಳು, ಮುಂದಿನ ಯೋಜನೆಯ ಆಲೋಚನೆಯನ್ನು ಹೊಂದಿರುವ ಸಂಸದ ರಾಜಾ ಅಮರೇಶ್ವರ ನಾಯಕ ಅವರು ತಮ್ಮ ಅವಧಿಯಲ್ಲಿ ಕ್ಷೇತ್ರಕ್ಕೆ ಶಾಶ್ವತ ಕೊಡುಗೆಯನ್ನು ನೀಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ 2.0 ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರ ’ಕನ್ನಡಪ್ರಭ’ ನೀಡಿದ ಸಂದರ್ಶನ ಇಲ್ಲಿದೆ.

ಮೊದಲ ಸಲ ಸಂಸದರಾಗಿ ನಿಮ್ಮ ಅನುಭವ?

ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಬೇಕು ಎನ್ನುವ ಸದುದ್ದೇಶವನ್ನಿಟ್ಟುಕೊಂಡು ಬಿಜೆಪಿ ಸರ್ಕಾರದ 2.0 ರಲ್ಲಿ ಮೊದಲ ಸಲ ಸಂಸದನಾಗಿ ಆಯ್ಕೆಯಾಗಿ ಸಾಕಷ್ಟುಕಲಿತುಕೊಂಡಿದ್ದೇನೆ. ಅದರ ಜೊತೆಗೆ ಜಗಮೆಚ್ಚಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡುವುದೇ ನನ್ನ ಸೌಭಾಗ್ಯವಾಗಿದೆ. ಅವರ ತೋರಿಸಿಕೊಟ್ಟಮಾರ್ಗದಲ್ಲಿಯೇ ವರ್ಷದಿಂದ ಕೆಲಸ ಕಾರ್ಯ ಮಾಡುತ್ತಾ ಬರುತ್ತಿದ್ದೇನೆ.

ಜನಸ್ನೇಹಿ ಸೇವೆಗೆ ರೈಲ್ವೆ ಇಲಾಖೆ ಸಂಕಲ್ಪ: ಸುರೇಶ್ ಅಂಗಡಿ

ಕ್ಷೇತ್ರದ ಅಭಿವೃದ್ಧಿ ಕನಸು ಹೇಗಿದೆ?

ಕಲ್ಯಾಣ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳಾಗಿರುವ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸಾಕಷ್ಟುಅಭಿವೃದ್ಧಿಯಾಗಬೇಕಾಗಿದೆ. ಹಿಂದೆ ಸಂಸದರಾಗಿ ಆಯ್ಕೆಯಾದವರು ಕೇಂದ್ರ ಸರ್ಕಾರದ ಯೋಜನೆ ತರುವಲ್ಲಿ ಫಲವಾಗಿದ್ದಾರೆ. ಹೀಗಾಗಿ ಅಭಿವೃದ್ಧಿ ಕೆಲಸ ನಡೆದಿಲ್ಲ. ಇದೀಗ ನೀತಿ ಆಯೋಗದಿಂದ ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಶಿಕ್ಷಣ, ಕೈಗಾರಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಕೇಂದ್ರವು ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಅದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದೇನೆ.

1 ವರ್ಷದಲ್ಲಿ ನಿಮ್ಮ ಸಾಧನೆ?

ಸಂಸದರಿಗೆ ಬರುವ ಅನುದಾನದಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ಹಲವು ಯೋಜನೆ ಅನುಷ್ಠಾನದ ಮೇಲೆ ನಿಗಾ ವಹಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳ ವೇಗ ಹೆಚ್ಚಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗಿದೆ. ರೈಲು ನಿಲ್ದಾಣದ ಸ್ವಚ್ಛತೆ, ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು. ಇದರ ಜೊತೆಗೆ ಬಜೆಟ್‌ನಲ್ಲಿ ರಾಯಚೂರು ರೈಲು ನಿಲ್ದಾಣಕ್ಕೆ ಮಂಜೂರಾಗಿರುವ ಎಸ್ಕಲೇಟರ್‌ ಅಳವಡಿಕೆಗೆ ಕ್ರಮ ವಹಿಸಲಾಗಿದೆ. ರಾಯಚೂರು ನಗರದ ಮೇಲೆ ಹಾದುಹೋಗಿರುವ 6 ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರೆಬರೆಯಾಗಿತ್ತು ಅದನ್ನು ಪೂರ್ಣಗೊಳಿಸಲಾಗಿದೆ.

ಕೇಳುವ ಮೊದಲೇ ಮೋದಿ ಹಣ ಕೊಡ್ತಿದಾರೆ: ಸಂಸದ ರಮೇಶ ಜಿಗಜಿಣಗಿ

ಮತದಾರರು ಇಟ್ಟ ಭರವಸೆ ಈಡೇರಿಸಿರುವ ತೃಪ್ತಿ ಎಷ್ಟಿದೆ?

ಪ್ರಧಾನಿ ಮೋದಿ ಅವರ ಕೈಯನ್ನು ಬಲಪಡಿಸುವುದಕ್ಕಾಗಿ ಕ್ಷೇತ್ರದ ಜನರು ನನ್ನನ್ನು ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಅವರ ನನ್ನ ಮೇಲಿಟ್ಟಭರವಸೆ ಈಡೇರಿಸುವ ಪ್ರಯತ್ನವನ್ನು ಮಾಡಿದ್ದೇನೆ. ಮುಂದೆಯೂ ಆದೇ ಕಾರ್ಯದ ಸಂಕಲ್ಪ ಹೊಂದಿದ್ದೇನೆ. ಇರುವ ಅವಧಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಲೋಕಸಭಾ ಕ್ಷೇತ್ರ ಸಂಚರಿಸಿ ಜನರು ಅನುಭವಿಸುತ್ತಿರುವ ಸ್ಥಳೀಯ ಸಮಸ್ಯೆ ಅರಿತಿರುವೆ. ಬೇಡವಾದ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳ ಸ್ಥಾಪನೆ ಈ ಭಾಗದ ಪರಿಸರಕ್ಕೆ ಸಾಕಷ್ಟುಹಾನಿಯನ್ನು ಮಾಡುತ್ತಿದೆ. ಅದೇ ರೀತಿ ರಾಯಚೂರಿನ ಮುಖ್ಯ ಪ್ರದೇಶವಾಗಿರುವ ಲಿಂಗಸುಗೂರು ರಸ್ತೆಯಲ್ಲಿ ಅನಗತ್ಯದ ಪವರ್‌ಗ್ರಿಡ್‌ ಅನ್ನು ರಸ್ತೆ ಪಕ್ಕದಲ್ಲಿಯೇ ಮಾಡಿ ಅಭಿವೃದ್ಧಿಗೆ ಹಿನ್ನಡೆಯಾಗುವಂತೆ ಮಾಡಿದ್ದಾರೆ. ಇಂತಹ ಸವಾಲಿನಲ್ಲಿ ಸಮಗ್ರ ಅಭಿವೃದ್ಧಿಯ ಯೋಚನೆಯನ್ನು ಮುಂದಿಟ್ಟುಕೊಂಡು ನಡೆಯಬೇಕಾಗಿದೆ. ವರ್ಷದಲ್ಲಿ ಮಾಡಿದ ಕೆಲಸ ಕಾರ್ಯಗಳು, ಜನರಿಗೆ ನೀಡಿದ ಭರವಸೆಗಳು ಈಡೇರಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳು ತೃಪ್ತಿ ನೀಡಿದೆ.

ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಒಡನಾಟ?

ಒಂದು ವರ್ಷದಲ್ಲಿ ಮೋದಿ ಹಾಗೂ ಶಾ ಅವರೊಂದಿಗೆ ಸಾಕಷ್ಟುಸಲ ಮಾತುಕತೆ ನಡೆಸಿದ್ದೇನೆ. ಪ್ರಧಾನಿ ಮೋದಿ ಸಂಸದರಿಗೆ ನೀಡಿದ ಔತಣ ಕೂಟದ ಎರಡನೇ ಹಂತದಲ್ಲಿ ನಾನು ಹೋಗಿದ್ದೆ. ಆ ಸಮಯದಲ್ಲಿ ಮೋದಿ ಅವರು ನಮ್ಮ ಬಳಿಗೆ ಬಂದು ಅತ್ಯಂತ ಆತ್ಮೀಯತೆಯಿಂದ ಮಾತನಾಡಿದ್ದರು. ಕ್ಷೇತ್ರದ ಮಾಹಿತಿ, ಸಮಸ್ಯೆಗಳ ಕುರಿತು ಕೇಳಿದರು. ಅದಕ್ಕಾಗಿ ಮಾಡಬೇಕಾದ ಕೆಲಸ ಕಾರ್ಯಗಳ ಕುರಿತೂ ಸೂಚನೆ ನೀಡಿದರು. ಇನ್ನು ಪ್ರತಿ ಅವಧಿಗೆ ನಡೆಯುವ ಸಂಸತ್‌ ಅಧಿವೇಶನದಲ್ಲಿ ಅವರನ್ನು ಭೇಟಿಯಾಗಿ ಕ್ಷೇತ್ರ, ದೇಶದ ಅಭಿವೃದ್ಧಿಯ ಕುರಿತು ಮಾತುಕತೆಯನ್ನಾಡುತ್ತೇವೆ. ಮೋದಿ ಅವರು ದಿನದ 18 ತಾಸು ಕೆಲಸ ಮಾಡುವುದನ್ನು ಬಹಳ ಹತ್ತಿರದಿಂದ ಕಂಡಿದ್ದೇವೆ. ಅವರ ಮಾದರಿಯಲ್ಲಿಯೇ ನಾವು ಸಹ ಕ್ಷೇತ್ರದಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ.

ಮೋದಿ ಇಟ್ಟ ಹೆಜ್ಜೆಯಿಂದ ಭಾರತ ಹಿರಿಯಣ್ಣ ಆಗುತ್ತೆ: ಪ್ರಹ್ಲಾದ ಜೋಶಿ

ಕೊರೋನಾ ಹಾವಳಿಗೆ ನಿಮ್ಮ ಸ್ಪಂದನೆ?

ಕೊರೋನಾ ವೈರಸ್‌ನಿಂದಾಗಿ ಸಂಕಷ್ಟದಲ್ಲಿ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಸದರ ಅನುದಾನದಲ್ಲಿ 2 ಕೋಟಿ ನೀಡಲಾಗಿದೆ. ಜೊತೆಗೆ ಶೇ.30 ರಷ್ಟುಸಂಸದರ ಸಂಬಳ ಕಡಿತವಾಗುತ್ತಿದೆ. ಇಷ್ಟೇ ಅಲ್ಲದೇ ವೈಯಕ್ತಿಕವಾಗಿ ಒಂದು ಲಕ್ಷ ರು. ಮೊತ್ತವನ್ನು ಪರಿಹಾರ ನಿಧಿಗೆ ನೀಡಲಾಗಿದೆ. ರಾಯಚೂರು ಬೃಹತ್‌ ಶಾಖೋತ್ಪನ್ನ ಕೇಂದ್ರ (ಆರ್ಟಿಪಿಎಸ್‌), ಯರಮರಸ್‌ ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ವೈಟಿಪಿಎಸ್‌) ಹಾಗೂ ಹಟ್ಟಿಚಿನ್ನದ ಗಣಿಯಿಂದ ಸಿಆರ್‌ಎಸ್‌ ಅನುದಾನ ನೀಡುವಂತೆ ಪತ್ರ ಬರೆಯಲಾಗಿದೆ. ಅದನ್ನು ಕೊರೋನಾ ಸಂತ್ರಸ್ಥರಿಗೆ ಬಳಸಿಕೊಳ್ಳಲು ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ. ದಾನಿಗಳಿಂದ ಆಹಾರದ ಕಿಟ್‌ ತರಿಸಿದ್ದು, ಲಾಕ್‌ಡೌನ್‌ ಸಮಯದಲ್ಲಿ ಸ್ವಚ್ಛತಾ ಕೆಲಸ ಕಾರ್ಯಗಳನ್ನು ಮಾಡಿದ ಪೌರಕಾರ್ಮಿಕರಿಗೆ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣ ವರದಿಯಾಗಿಲ್ಲ, ಆದರೆ ಯಾದಗಿರಿಯ ಸುರಪುರದಲ್ಲಿ ವಲಸಿಗರಿಂದ ಎರಡು ಕೊರೋನಾ ಕೇಸ್‌ಗಳು ದಾಖಲಾಗಿವೆ. ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜಾರಿಗೊಳಿಸುವಂತೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ.

ಮೋದಿ ಆಶಯದಂತೆ ಹಾವೇರಿ-ಗದಗ ಅಭಿವೃದ್ಧಿ: ಸಂಸದ ಶಿವಕುಮಾರ ಉದಾಸಿ

ಕ್ಷೇತ್ರದ ಅಭಿವೃದ್ಧಿಗೆ ಮುಂದಿನ ಯೋಜನೆ?

ಈಗಾಗಲೇ ಜಿಲ್ಲೆಗೆ ಮಂಜೂರಾಗಿರುವ ಐಐಐಟಿಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಅಗತ್ಯವಾದ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುವುದು. ಜನರ ನಿರೀಕ್ಷೆಯಂತೆ ಏಮ್ಸ್‌ನ್ನು ಜಿಲ್ಲೆಗೆ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು. ಗದಗ-ವಾಡಿ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಇನ್ನಷ್ಟುಚುರುಕುಗೊಳಿಸುವುದು. ಆಸ್ಪರೆಂಟ್‌ ಜಿಲ್ಲೆಗಳಲ್ಲಿ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ವೇಗವನ್ನು ಹೆಚ್ಚಿಸುವುದು ಸೇರಿದಂತೆ ಜಿಲ್ಲೆಗೆ ಶಾಶ್ವತವಾಗಿ ಒಂದು ನಿರ್ಧಿಷ್ಟವಾದ ಕೊಡುಕೆಯನ್ನು ಉಳಿದ ನಾಲ್ಕು ಅವಧಿಯಲ್ಲಿ ನೀಡಬೇಕು ಎನ್ನುವ ಅಭಿಲಾಶೆಯನ್ನು ಹೊಂದಲಾಗಿದೆ.
 

Follow Us:
Download App:
  • android
  • ios